
ಹರಿದು ಬಂದ ಜನಸಾಗರ
ಬೆಂಗಳೂರು, ಮೇ ೯- ರಾಜ್ಯದ ಮಾಜಿ ಮುಖ್ಯಮಂತ್ರಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪನವರ ೫೦ ವರ್ಷಗಳ ಸುದೀರ್ಘ ರಾಜಕೀಯ ಜೀವನ ಮತ್ತು ಸಾರ್ಥಕ ಜನ ಸೇವೆಯ ಯಡಿಯೂರಪ್ಪ ಅಭಿಮಾನೋತ್ಸವಕ್ಕೆ ನಾಡಿನ ಎಲ್ಲಾ ಮೂಲೆಗಳಿಂದಲೂ ಜನಸಾಗರವೇ ಹರಿದು ಬಂದಿದ್ದು, ಜನರ ಆದರಾಭಿಮಾನ, ಪ್ರೀತಿಯಲ್ಲಿ ಯಡಿಯೂರಪ್ಪ ಮಿಂದೆದ್ದರು.
ಕೋಟೆನಾಡು ಚಿತ್ರದುರ್ಗದಲ್ಲಿಂದು ಲಕ್ಷಾಂತರ ಜನರ ಸಮ್ಮುಖದಲ್ಲಿ ಯಡಿಯೂರಪ್ಪನವರ ಸಾರ್ಥಕ ಜನ ಸೇವೆಗೆ ಗೌರವ ಸಮರ್ಪಣೆ ಮಾಡಿ ನಾಡಿನ ಜನತೆಯ ಪರವಾಗಿ ಕೃತಜ್ಞತೆ ಹಾಗೂ ಅಭಿನಂದನೆ ಸಲ್ಲಿಸಲಾಯಿತು.
ಬಿಎಸ್‌ವೈ ಅಭಿಮಾನೋತ್ಸವಕ್ಕೆ ಲಕ್ಷಾಂತರ ಜನ ಸೇರಿದ್ದು, ಕೋಟೆನಾಡು ಚಿತ್ರದುರ್ಗ ನವವಧುವಿನಂತೆ ಸಿಂಗಾರಗೊಂಡಿದೆ.
ಜನಸೇವೆಯನ್ನೇ ತಮ್ಮ ಉಸಿರಾಗಿಸಿ ೪ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ಚುಕ್ಕಾಣಿ ಹಿಡಿದು ಜನಪರ ಕಾರ್ಯಕ್ರಮಗಳ ಜಾರಿ ಮೂಲಕ ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಬಿಜೆಪಿಯ ಕಮಲ ಅರಳಲು ಕಾರಣರಾಗಿರುವ ಬಿ.ಎಸ್.ವೈ. ರವರನ್ನು ಬಿಜೆಪಿ ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಅಭಿನಂದಿಸಿ ಗೌರವಿಸಲಾಯಿತು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ೫ ದಶಕದ ಸಾಧನೆಯ ಸಂಭ್ರಮ, ಅಭಿನಂದನೆ, ಗೌರವದ ಸಮರ್ಪಣಾ ಕಾರ್ಯಕ್ರಮಕ್ಕೆ ಲಕ್ಷಾಂತರ ಜನ ಸಾಕ್ಷಿಯಾಗಿ ತಮ್ಮ ನೆಚ್ಚಿನ ನಾಯಕನಿಗೆ ಪ್ರೀತಿ, ಗೌರವ ಸಮರ್ಪಿಸಿದರು.
ಈ ಕಾರ್ಯಕ್ರಮದಲ್ಲಿ ನಾಡಿನ ಹಲವು ಮಠಗಳ ಮಠಾಧೀಶರು, ಸಾಧು ಸಂತರು ಭಾಗಿಯಾಗಿ ಬಿಎಸ್‌ವೈ ರವರಿಗೆ ಆಶೀರ್ವಾದ ಮಾಡಿದ್ದು ವಿಶೇಷವಾಗಿತ್ತು.
ಬಿಎಸ್‌ವೈ ಅಭಿಮಾನೋತ್ಸವ ಕೇವಲ ಒಂದು ಸಮಾರಂಭವಲ್ಲ, ಅದು ಬಿಜೆಪಿಯ ಬೃಹತ್ ಶಕ್ತಿ ಪ್ರದರ್ಶನ ಎಂಬಂತೆ ಭಾಸವಾಯಿತು.
ಈ ಕಾರ್ಯಕ್ರಮಕ್ಕೆ ಜರ್ಮನ್ ಮಾದರಿಯ ಪೆಂಡಾಲ್ ಹಾಕಲಾಗಿದ್ದು, ಬೃಹತ್ ವೇದಿಕೆ ಸಂಪೂರ್ಣ ಕೇಸರಿಮಯವಾಗಿತ್ತು.
ಬಿಎಸ್‌ವೈ ಅಭಿಮಾನೋತ್ಸವದಲ್ಲಿ ಬಿಜೆಪಿಯ ಎಲ್ಲಾ ಪ್ರಮುಖ ನಾಯಕರುಗಳು, ಸಂಸದರುಗಳು, ಶಾಸಕರುಗಳು, ಭಾಗಿಯಾಗಿ ತಮ್ಮ ನೆಚ್ಚಿನ ನಾಯಕನ ಸಾರ್ಥಕ ಸಂಭ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಬಿಎಸ್‌ವೈ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಯಡಿಯೂರಪ್ಪನವರ ಹೋರಾಟದ ಬದುಕಿನ ಕುರಿತು ಕಮಲದಲ್ಲಿ ಅರಳಿದ ಹೂವು ಕೆಂದಾವರೆ ಮತ್ತು ಸದನ ಶಿಕಾರಿ ಪುಸ್ತಕಗಳು ಬಿಡುಗಡೆಯಾದವು.
ಅದ್ಧೂರಿ ಪುರ ಪ್ರವೇಶ
ಬಿಎಸ್‌ವೈ ಅಭಿಮಾನೋತ್ಸವ ಮುನ್ನಾ ದಿನವಾದ ನಿನ್ನೆ ಸಂಜೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುರ ಪ್ರವೇಶ ಅದ್ದೂರಿಯಾಗಿ ನಡೆಯಿತು.
ನಿನ್ನೆ ಸಂಜೆ ಯಡಿಯೂರಪ್ಪನವರು ಚಿತ್ರದುರ್ಗದ ಪ್ರವೇಶ ದ್ವಾರಕ್ಕೆ ಆಗಮಿಸುತ್ತಿದ್ದಂತೆಯೇ ಎರಡು ಜೆಸಿಬಿ ಮೂಲಕ ಹೂವಿನ ಸುರಿಮಳೆ ಸುರಿಸಲಾಯಿತು. ಪಟಾಕಿ ಸದ್ದು, ಕಲಾ ತಂಡಗಳ ಅದ್ದೂರಿ ಪ್ರದರ್ಶನ ಬಿಎಸ್‌ವೈ ರವರ ಪುರ ಪ್ರವೇಶವನ್ನು ಸ್ಮರಣೀಯವಾಗಿಸಿತು.
ಒಂದು ಸಾವಿರಕ್ಕೂ ಹೆಚ್ಚು ಮಹಿಳೆಯರು ಪೂರ್ಣಕುಂಭದೊಂದಿಗೆ ಯಡಿಯೂರಪ್ಪನವರನ್ನು ಯಡಿಯೂರಪ್ಪನವರನ್ನು ಸ್ವಾಗತಿಸಿದರು.
ಈ ಹಿಂದೆ ಯಡಿಯೂರಪ್ಪನವರು ಬಳಸುತ್ತಿದ್ದ ಅಂಬಾಸಿಡರ್ ಕಾರು ಈ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿತ್ತು.
ತೆರೆದ ವಾಹನದಲ್ಲಿ ಯಡಿಯೂರಪ್ಪ ಅವರು ಕೋಟೆನಾಡಿನ ರಸ್ತೆಗಳಲ್ಲಿ ಜನತೆಗೆ ಕೈ ಮುಗಿದು ಕೃತಜ್ಞತೆ ಸಲ್ಲಿಸಿ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾದರು.




























