
ಬೆಂಗಳೂರು, ಆ. ೨೧- ರಾಜ್ಯದ ಯೋಜನಾ ಮತ್ತು ಸಾಂಖ್ಯಿಕ ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳು ನಡೆಸುತ್ತಿರುವ ಹೋರಾಟ ಈಗ ದಿನದಿಂದ ದಿನಕ್ಕೆ ಒಂದೊಂದು ರೀತಿಯ ಸ್ವರೂಪ ಪಡೆದುಕೊಳ್ಳುತ್ತಿರುವಾಗಲೇ ಪ್ರತಿಪಕ್ಷಗಳಿಗೆ ಸಡ್ಡು ಹೊಡೆದು ಆಡಳಿತ ಪಕ್ಷ ಕಾಂಗ್ರೆಸ್ ಸಹ ಹೋರಾಟಕ್ಕೆ ಇಳಿದಿದ್ದು, ಸಚಿವ ನಾಗೇಂದ್ರ ರಾಜೀನಾಮೆ ವಿಚಾರ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಪರಸ್ಪರ ಕೆಸರೆರೆಚಾಟಕ್ಕೆ ಎಡೆ ಮಾಡಿಕೊಟ್ಟಿದೆ.
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಕಳೆದ ೪ ದಿನಗಳಿಂದ ಪ್ರತಿಪಕ್ಷಗಳು ಉಭಯ ಸದನಗಳಲ್ಲೂ ಹೋರಾಟ ನಡೆಸಿದ್ದು, ಸದನದ ಹೊರಗೂ ಹೋರಾಟ ನಡೆಸಿರುವ ಬಿಜೆಪಿ ಮತ್ತು ಜೆಡಿಎಸ್ ಇಂದು ಶಾಸಕರ ಭವನದ ಆವರಣದಲ್ಲಿರುವ ವಾಲ್ಮೀಕಿ ಪ್ರತಿಮೆ ಬಳಿ ಧರಣಿ ನಡೆಸಿ ನಾಗೇಂದ್ರರವರ ರಾಜೀನಾಮೆಗೆ ಆಗ್ರಹಿಸಿ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಪುಷ್ಪಾರ್ಚನೆಗೆ ನಡೆಸಿದ ನಂತರ ಅಲ್ಲಿಂದ ವಿಧಾನಸೌಧದವರೆಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕರಾದ ಆರ್. ಅಶೋಕ್ ಹಾಗೂ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನ ಎಲ್ಲಾ ಶಾಸಕರು ಕಾಲ್ನಡಿಗೆ ಜಾಥಾ ನಡೆಸಿದರು.
ಬಿಜೆಪಿ-ಜೆಡಿಎಸ್‌ನ ಹೋರಾಟಕ್ಕೆ ಪ್ರತಿಯಾಗಿ ಕಾಂಗ್ರೆಸ್‌ನ ಸಚಿವರು, ಶಾಸಕರು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ಪ್ರತಿಪಕ್ಷ ಶಾಸಕರುಗಳ ಜನವಿರೋಧಿ ಹಾಗೂ ಸದನದ ಘನತೆಗೆ ಧಕ್ಕೆ ತರುವ ನಡವಳಿಕೆಯನ್ನು ಖಂಡಿಸಿ ಪ್ರತಿಭಟನಾ ಧರಣಿ ನಡೆಸಿದರು.
ಸಚಿವ ನಾಗೇಂದ್ರರವರ ರಾಜೀನಾಮೆ ವಿಚಾರ ಈಗ ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷದ ನಡುವೆ ಪರಸ್ಪರ ಕೆಸರೆರೆಚಾಟಕ್ಕೆ ಕಾರಣವಾಗಿ ಸದನದ ಹೊರಗೂ ಹೋರಾಟ ಆರಂಭವಾದಂತಾಗಿದೆ.

ಸಚಿವ ನಾಗೇಂದ್ರ ರವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಕಪ್ಪು ಬಣ್ಣದ ಟೀಶರ್ಟ್ ಧರಿಸಿದ್ದರು. ಸಚಿವರ ನಾಗೇಂದ್ರ ರಾಜೀನಾಮೆ ನೀಡಲಿ, ದಲಿತರ ಹಣ ಕಬಳಿಸಿದವರಿಗೆ ಧಿಕ್ಕಾರ ಎಂಬ ಬರಹಗಳನ್ನು ಈ ಟೀಶರ್ಟ್‌ಗಳು ಹೊಂದಿದ್ದವು.
ಕಾಂಗ್ರೆಸ್ ಸಚಿವರು, ಶಾಸಕರು ಸಹ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಗಾಂಧಿ ಪ್ರತಿಮೆ ಬಳಿ ಬಿತ್ತಿ ಪತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು.
ಜಟಾಪಟಿ
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧದ ಹೊರಗೆ ಕಪ್ಪು ಟೀಶರ್ಟ್ ಧರಣಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ಸದಸ್ಯರು ವಿಧಾನಸಭೆ ಪ್ರವೇಶಿಸಲು ಮುಂದಾದಾಗ ಮಾರ್ಷಲ್‌ಗಳು ಕಪ್ಪು ಟೀಶರ್ಟ್ ಧರಿಸಿದ್ದೀರಿ, ಒಳಗೆ ಬಿಡಲ್ಲ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಪ್ರತಿಪಕ್ಷ ಸದಸ್ಯರನ್ನು ತಡೆದಾಗ ಮಾರ್ಷಲ್‌ಗಳು ಮತ್ತು ಶಾಸಕರುಗಳ ನಡುವೆ ಜಟಾಪಟಿ ನಡೆದು ಮಾರ್ಷಲ್‌ಗಳನ್ನೆ ತಳ್ಳಿಕೊಂಡು ಬಿಜೆಪಿ ಮತ್ತು ಜೆಡಿಎಸ್ ಶಾಸಕರು ವಿಧಾನಸಭೆಯ ಒಳಗೆ ಬಂದರು.
ಕಪ್ಪು ಟೀ ಶರ್ಟ್ ಧರಿಸಿ ವಿಧಾನಸಭೆಗೆ ಬರುವಂತಿಲ್ಲ. ಕಪ್ಪು ಟೀ ಶರ್ಟ್ ಧರಿಸಿದ್ದ ಶಾಸಕರನ್ನು ತಡೆಯುವ ಮಾರ್ಷಲ್‌ಗಳ ಪ್ರಯತ್ನ ಸಫವಾಗಲಿಲ್ಲ. ಏರಿದ ಧ್ವನಿಯಲ್ಲೇ ಬಿಜೆಪಿ ಸದಸ್ಯರುಗಳು ಮಾರ್ಷಲ್‌ಗಳನ್ನು ದಬಾಯಿಸಿ ವಿಧಾನಸಭೆಯ ಒಳಗೆ ಬಂದರು.
ಹೋರಾಟ ನಿಲ್ಲದು..
ಸಚಿವ ಬಿ. ನಾಗೇಂದ್ರ ಅವರು ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿ, ಪ್ರತಿಪಕ್ಷಗಳ ವಿರುದ್ಧ ಆಡಳಿತ ಪಕ್ಷದವರು ನಡೆಸಿರುವ ಧರಣಿಯನ್ನು ಗೇಲಿ ಮಾಡಿ, ಎಂದೂ ಆಡಳಿತ ಪಕ್ಷದವರು ಧರಣಿ ನಡೆಸಿದ ಉದಾಹರಣೆ ಇಲ್ಲ ಎಂದು ಲೇವಡಿ ಮಾಡಿದರು.
ಪ್ರತಿಪಕ್ಷಗಳ ಹೋರಾಟದಿಂದ ದಿಕ್ಕು ತೋಚದಂತಾಗಿರುವ ಆಡಳಿತ ಪಕ್ಷ ಕಾಂಗ್ರೆಸ್ ಸದಸ್ಯರು ಧರಣಿ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದು ಅವರು ಹೇಳಿದರು.
ಬಿಕೆಹೆಚ್ ವಾಗ್ದಾಳಿ
ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಶಾಸಕರ ಜನವಿರೋಧಿ ಧೋರಣೆ ಹಾಗೂ ಸದನದ ಘನತೆಗೆ ಧಕ್ಕೆ ತರುವ ನಡವಳಿಕೆಯನ್ನು ಖಂಡಿಸಿ ಕಾಂಗ್ರೆಸ್ ಸಚಿವರು, ಶಾಸಕರೊಂದಿಗೆ ಪ್ರತಿಭಟನೆ ನಡೆಸಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ತೀವ್ರವಾದ ಬರ ಪರಿಸ್ಥಿತಿ ಇದೆ. ಅದರ ಚರ್ಚೆಗೆ ಪ್ರತಿಪಕ್ಷಗಳು ಬಿಡುತ್ತಿಲ್ಲ. ಇಲ್ಲಸಲ್ಲದ ಆರೋಪ ಮಾಡಿ ಸದನಲ್ಲಿ ಸುಗಮ ಕಲಾಪಗಳು ನಡೆಯಲು ಅಡ್ಡಿಯುಂಟು ಮಾಡುತ್ತಿದ್ದಾರೆ. ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಚರ್ಚೆ ಮಾಡಿ ಕೇಂದ್ರಕ್ಕೆ ಬೇಡಿಕೆ ಇಡುತ್ತೇವೆ. ಆ ಬೇಡಿಕೆಯನ್ನು ಈಡೇರಿಸಲು ಆಗಲ್ಲ ಎಂದು ಮೋದಿ ಮತ್ತು ಅಮಿತ್ ಶಾ ಚೇಲಾಗಳು ಇಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಬಿಜೆಪಿ ನಾಯಕರ ಮೇಲೆ ಕೊಲೆ, ಅತ್ಯಾಚಾರ, ಭ್ರಷ್ಟಾಚಾರ ಆರೋಪ ಇದೆ. ಇವರು ನಮಗೆ ಪಾಠ ಹೇಳಬೇಕಿಲ್ಲ. ವಾಲ್ಮೀಕಿ ಹಗರಣದಲ್ಲಿ ಎಸ್‌ಐಟಿ ನಾಗೇಂದ್ರರವರಿಗೆ ಕ್ಲೀನ್ ಚಿಟ್ ಕೊಟ್ಟಿದೆ ಎಂದು ಅವರು ಹೇಳಿದರು.
ಯಾರ ಮೇಲೆ ಆಗಲಿ, ಭ್ರಷ್ಟಾಚಾರ ಆರೋಪ ಸಾಬೀತಾದರೆ ಅವರ ವಿರುದ್ಧ ಕ್ರಮ ಆಗುತ್ತದೆ ಎಂದರು.


































