Home Lead News ನಕಲಿ ಔಷಧಿ ರೂವಾರಿಗಳ ಬಂಧನ

ನಕಲಿ ಔಷಧಿ ರೂವಾರಿಗಳ ಬಂಧನ

ಬೆಂಗಳೂರು,ಆ.೨೩- ರಾಜ್ಯವನ್ನು ಬೆಚ್ಚಿಬೀಳಿಸಿ ದೇಶದ ಹಲವೆಡೆ ಹರಡಿದ್ದ ನಕಲಿ ಔಷಧ ಮಾರಾಟ ಜಾಲದ ಕಿಂಗ್ ಪಿನ್ ವಿದೇಶದಲ್ಲಿ ಅಡಗಿದ್ದ ನಾಗರಬಾವಿಯ ಪ್ರಶಾಂತ್ ಹಾಗೂ ಆತನ ಇಬ್ಬರು ಸಹಚರರು ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.


ನಕಲಿ ಔಷಧ ಮಾರಾಟ ಜಾಲದಲ್ಲಿ ಅಂತಾರಾಷ್ಟ್ರೀಯ ನಂಟು ಇರುವುದು ಬಯಲಾಗಿದ್ದು,ಪಶ್ಚಿಮ ಏಷ್ಯಾದ ದೇಶವೊಂದರ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿರು ಜಾಲದ ರೂವಾರಿ ನಾಗರಬಾವಿಯ ಪ್ರಶಾಂತ್ ಹಾಗೂ ಆತನ ಇಬ್ಬರು ಸಹಚರರನ್ನು ತೀವ್ರ ವಿಚಾರಣೆ ನಡೆಸಲಾಗಿದೆ.


ಪಶ್ಚಿಮ ಏಷ್ಯಾದ ದೇಶದಲ್ಲಿ ಕ್ಯಾನ್ಸರ್ ಸೇರಿದಂತೆ ಗಂಭೀರ ಕಾಯಿಲೆಗಳ ಔಷಧಗಳು ಅತ್ಯಂತ ಕಡಿಮೆ ಬೆಲೆಗೆ ದೊರೆಯುತ್ತವೆ. ಈ ಹಿನ್ನೆಲೆಯಲ್ಲಿ ಕೋಟ್ಯಂತರ ರೂ ಮೌಲ್ಯದ ಔಷಧಗಳನ್ನು ಅಕ್ರಮವಾಗಿ ಭಾರತಕ್ಕೆ ಸಾಗಿಸಲು ಪ್ರಶಾಂತ್ ತನ್ನ ಇಬ್ಬರು ಸಹಚರರ ಮೂಲಕ ಸಂಚು ಹಾಕಿರುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.


ವಿಮಾನ ನಿಲ್ದಾಣದಲ್ಲಿ ಭಾರೀ ಪ್ರಮಾಣದ ಔಷಧ ಸಾಗಣೆಯನ್ನು ಕಂಡು ಅನುಮಾನಗೊಂಡ ಅಲ್ಲಿನ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಅಕ್ರಮ ಬಯಲಾಗಿದೆ. ವಿಚಾರಣೆ ವೇಳೆ ಸಹಚರರು ಕಿಂಗ್‌ಪಿನ್ ಪ್ರಶಾಂತ್ ಹೆಸರನ್ನು ಬಾಯಿಬಿಟ್ಟಿದ್ದು, ಅಧಿಕಾರಿಗಳು ತಕ್ಷಣವೇ ಆತನನ್ನೂ ವಶಕ್ಕೆ ಪಡೆದಿದ್ದಾರೆ. ಈ ಮಹತ್ವದ ಸಂಗತಿಯನ್ನು ಪ್ರಶಾಂತ್ ಪತ್ನಿ ಪೊಲೀಸರ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾರೆ.


ಕೆಲ ದಿನಗಳ ಹಿಂದೆ ತಾವರೆಕೆರೆ ಸಿ.ಕೆ.ತಾಂಡ್ಯಾದಲ್ಲಿದ್ದ ಫಾರ್ಮ್ ಹೌಸ್ ಮೇಲೆ ನಿಖರವಾದ ಮಾಹಿತಿಯನ್ನು ಆಧರಿಸಿ ಪೊಲೀಸರು ದಾಳಿ ನಡೆಸಿದಾಗ ಅಕ್ರಮ ಔಷಧ ಮರುಪ್ಯಾಕಿಂಗ್ ಘಟಕ ಬಯಲಿಗೆ ಬಂದಿತ್ತು.


ಚೆನ್ನೈ, ಹರ್ಯಾಣ, ಚಂಡೀಗಢ ಹಾಗೂ ವಿದೇಶಗಳಿಂದ ಕಡಿಮೆ ಬೆಲೆಗೆ ತರುತ್ತಿದ್ದ ಔಷಧಗಳಿಗೆ ಇಲ್ಲಿ ಪ್ರತಿಷ್ಠಿತ ಕಂಪನಿಗಳ ನಕಲಿ ಲೇಬಲ್ ಹಾಗೂ ದುಬಾರಿ ಬೆಲೆಯ ದರಪಟ್ಟಿ ಅಂಟಿಸಿ, ಮಾರುಕಟ್ಟೆಯಲ್ಲಿ ನಾಲ್ಕು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು.


ಪೊಲೀಸರು ಈ ಅಡ್ಡೆಯ ಮೇಲೆ ದಾಳಿ ನಡೆಸುವ ಮುನ್ನವೇ ಆಗಸ್ಟ್ ೮ ರಂದೇ ಪ್ರಶಾಂತ್ ವಿದೇಶಕ್ಕೆ ಹಾರಿ ತಲೆಮರೆಸಿಕೊಂಡಿದ್ದನು.


ನಕಲಿ ಔಷಧ ಅಡ್ಡೆ ಮೇಲೆ ದಾಳಿ ನಡೆದ ವಿಷಯ ತಿಳಿಯುತ್ತಿದ್ದಂತೆ, ಪ್ರಶಾಂತ್ ತನ್ನ ವ್ಯವಹಾರಿಕ ಪಾಲುದಾರ ವೆಂಕಟೇಶ್‌ನನ್ನು ವಿದೇಶಕ್ಕೆ ಕರೆಸಿಕೊಳ್ಳಲು ಏರ್‌ಟಿಕೆಟ್ ಬುಕ್ ಮಾಡಿದ್ದನು,ಆದರೆ ಅದರ ಖಚಿತ ಮಾಹಿತಿ ಕಲೆಹಾಕಿದ ಪೊಲೀಸರು, ವೆಂಕಟೇಶ್ ಏರ್‌ಪೋರ್ಟ್ ತಲುಪುವ ಮುನ್ನವೇ ಹೆಬ್ಬಾಳ ಸಮೀಪ ಆತನನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದರು.


ಪ್ರಶಾಂತ್ ವಶದಲ್ಲಿರುವ ಬಗ್ಗೆ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಆತನನ್ನು ಭಾರತಕ್ಕೆ ಕರೆತರಲು ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ನೇತೃತ್ವದ ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂಟರ್‌ಪೋಲ್ ಮೂಲಕ ಪ್ರಕ್ರಿಯೆಗಳನ್ನು ಚುರುಕುಗೊಳಿಸಿದೆ.


ನಾಲ್ವರು ಬಂಧನ:
ತಾವರೆಕೆರೆ ಸಿ.ಕೆ.ತಾಂಡ್ಯಾದಲ್ಲಿ ಕಳೆದ ಆ.೧೯ ರಂದು ರಾತ್ರಿ ದಾಳಿ ನಡೆಸಿ ೫ ಕೋಟಿ ರೂ. ಮೊತ್ತದ ನಕಲಿ ಔಷಧಗಳನ್ನು ವಶಪಡಿಸಿಕೊಂಡು ಮರು ದಿನ ನಾಲ್ವರನ್ನು ಬಂಧಿಸಿದ್ದರು.ಆರೋಪಿಗಳು ಒಂದು ವರ್ಷದಿಂದ ನಕಲಿ ಔಷಧದ ದಂಧೆಯನ್ನು ನಡೆಸುತ್ತಿದ್ದರು. ಅಧಿಕೃತವಾಗಿ ಯಾವುದೇ ಪರವಾನಗಿ ಹೊಂದಿರದ ಔಷಧಗಳನ್ನು ಸಂಗ್ರಹಿಸಿದ್ದ ಇವರು, ಅವುಗಳ ಮೇಲಿನ ಲೇಬಲ್‌ಗಳನ್ನು ಬದಲಾಯಿಸಿ ಹೆಚ್ಚಿನ ಬೆಲೆಯ ಲೇಬಲ್‌ಗಳನ್ನು ಅಂಟಿಸುತ್ತಿದ್ದರು.


ಸ್ಥಳದಲ್ಲೇ ತಯಾರಿ:
ಕೆಲವೊಂದು ಹೆಸರಿನ ಔಷಧಗಳನ್ನು ಸ್ಥಳದಲ್ಲೇ ತಯಾರಿಸುತ್ತಿದ್ದರು. ಈ ಕುರಿತು ಸಿಕ್ಕ ಖಚಿತ ಮಾಹಿತಿ ಮೇರೆಗೆ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಮಂಡಳಿ ಅಧಿಕಾರಿಗಳೊಂದಿಗೆ ದಾಳಿ ಮಾಡಲಾಗಿತ್ತು. ಆರೋಪಿಗಳು ನಕಲಿ ಔಷಧಗಳನ್ನು ಬೆಂಗಳೂರು ಸೇರಿದಂತೆ ವಿವಿಧೆಡೆ ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಆರೋಪಿಗಳ ವಿರುದ್ಧ ಬಿಎನ್‌ಎಸ್ ಕಲಂ ೨೭೬ (ಔಷಧಗಳ ಕಲಬೆರಕೆ), ೫೧ (ಕೃತ್ಯಕ್ಕೆ ಕುಮ್ಮಕ್ಕು) ಹಾಗೂ ಹಕ್ಕುಸ್ವಾಮ್ಯ ಕಾಯ್ದೆ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.