
ನವದೆಹಲಿ.ಜೂ೨:ತಮಿಳುನಾಡು ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿರುವ ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಶೀಘ್ರದಲ್ಲೇ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ.
ಇಂದು ಬೆಳಗ್ಗೆ ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಹಾಗೂ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಿರುವ ಅಣ್ಣಾಮಲೈ, ತಾವು ಪಕ್ಷದಿಂದ ಗೌರವಾನ್ವಿತವಾಗಿ ಹೊರನಡೆಯಲು ಬಯಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.
ಮನವೊಲಿಕೆ ವಿಫಲ
ಅಣ್ಣಾಮಲೈ ಅವರ ಮನವೊಲಿಸಿ ಪಕ್ಷದಲ್ಲೇ ಉಳಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ತೀವ್ರ ಪ್ರಯತ್ನ ನಡೆಸಿದೆ. ಇದರ ಭಾಗವಾಗಿ ಅವರಿಗೆ ರಾಜ್ಯಸಭಾ ಸದಸ್ಯತ್ವದ (ಒP) ಆಫರ್ ಕೂಡ ನೀಡಲಾಗಿತ್ತು ಎನ್ನಲಾಗಿದೆ. ಆದರೆ, ಅಣ್ಣಾಮಲೈ ಈ ಆಫರ್ ಅನ್ನು ನಯವಾಗಿಯೇ ತಿರಸ್ಕರಿಸಿದ್ದು, ಬಿಜೆಪಿಯಲ್ಲಿ ತಮಗೆ ಉಜ್ವಲ ಭವಿಷ್ಯ ಕಾಣಿಸುತ್ತಿಲ್ಲ ಎಂಬ ಕಾರಣಕ್ಕೆ ಸ್ವತಂತ್ರ ಹಾದಿ ಹಿಡಿಯಲು ದೃಢ ನಿರ್ಧಾರ ಮಾಡಿದ್ದಾರೆ ಎಂದು ಅವರ ಆಪ್ತ ಮೂಲಗಳು ಬಹಿರಂಗಪಡಿಸಿವೆ.
ಮೂಲಗಳ ಪ್ರಕಾರ, ಅಣ್ಣಾಮಲೈ ಅವರು ಸದ್ಯಕ್ಕೆ ಯಾವುದೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗುತ್ತಿಲ್ಲ. ಬದಲಾಗಿ, ಸಮಾನ ಮನಸ್ಕರನ್ನು ಒಗ್ಗೂಡಿಸಿ ತಮಿಳುನಾಡಿನಲ್ಲಿ ದೊಡ್ಡ ಮಟ್ಟದ ಸ್ವಯಂಸೇವಕರ ಜಾಲವನ್ನು ನಿರ್ಮಿಸಲು ‘ಹೊಸ ಜನಾಂದೋಲನ’ ಒಂದನ್ನು ಶೀಘ್ರದಲ್ಲೇ ಆರಂಭಿಸಲಿದ್ದಾರೆ. ಸದ್ಯ ಅವರು ನಡೆಸುತ್ತಿರುವ “ವಿ ದ ಲೀಡರ್ಸ್” ಎಂಬ ಲಾಭರಹಿತ ನಾಯಕತ್ವ ಸಂಸ್ಥೆಯೇ ಈ ಜನಾಂದೋಲನಕ್ಕೆ ಬುನಾದಿಯಾಗಲಿದೆ. ಈ ಆಂದೋಲನ ಯಶಸ್ವಿಯಾದ ನಂತರ ಅವರು ಸ್ವಂತ ರಾಜಕೀಯ ಪಕ್ಷವನ್ನು ಪ್ರಕಟಿಸಲಿದ್ದಾರೆ. ಮುಂಬರುವ ತಮಿಳುನಾಡು ವಿಧಾನಸಭಾ ಉಪಚುನಾವಣೆಗಳಲ್ಲಿ ಅವರ ಹೊಸ ಸಂಘಟನೆ ಸ್ಪರ್ಧಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಲು ಸಿದ್ಧತೆ ನಡೆಸಿದೆ.
ಇತ್ತೀಚೆಗೆ ನಡೆದ ೨೩೪ ಕ್ಷೇತ್ರಗಳ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕೇವಲ ಒಂದು ಸ್ಥಾನವನ್ನು ಮಾತ್ರ ಗೆಲ್ಲಲು ಶಕ್ತವಾಗಿತ್ತು.
ಅಣ್ಣಾಮಲೈ ಅವರು ತಮಿಳುನಾಡಿನಲ್ಲಿ ಬಿಜೆಪಿ ಒಂಟಿಯಾಗಿ ಸ್ಪರ್ಧಿಸಬೇಕೆಂದು ಬಯಸಿದ್ದರು. ಆದರೆ ವರಿಷ್ಠರು ಎಐಎಡಿಎಂಕೆ (ಂIಂಆಒಏ) ಜೊತೆ ಮೈತ್ರಿ ಮಾಡಿಕೊಂಡರು. ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ ಅವರ ಒತ್ತಡಕ್ಕೆ ಮಣಿದ ಬಿಜೆಪಿ ಹೈಕಮಾಂಡ್, ಚುನಾವಣೆಗೆ ಮುನ್ನ ಅಣ್ಣಾಮಲೈ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಿತ್ತು. ಪಕ್ಷದಲ್ಲಿ ತಮ್ಮನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಅಸಮಾಧಾನದಿಂದಾಗಿ ಅಣ್ಣಾಮಲೈ ೨೦೨೬ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದೆಯೇ, ಪ್ರಚಾರದಿಂದಲೂ ದೂರ ಉಳಿದಿದ್ದರು.
ತಮಿಳುನಾಡಿನ ದ್ರಾವಿಡ ರಾಜಕಾರಣದ ಮಧ್ಯೆ ಬಿಜೆಪಿಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದ ಯುವ ನಾಯಕ ಅಣ್ಣಾಮಲೈ ಅವರ ಈ ನಿರ್ಧಾರ, ತಮಿಳುನಾಡು ಮತ್ತು ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
























