Home ಜಿಲ್ಲೆ ತುಮಕೂರು ದೇವಾಲಯದಲ್ಲಿ ಅಕ್ಷರಾಭ್ಯಾಸ ಮಕ್ಕಳ ಜೀವನದ ಶ್ರೇಷ್ಠ ಆರಂಭ: ಸ್ವಾಮೀಜಿ

ದೇವಾಲಯದಲ್ಲಿ ಅಕ್ಷರಾಭ್ಯಾಸ ಮಕ್ಕಳ ಜೀವನದ ಶ್ರೇಷ್ಠ ಆರಂಭ: ಸ್ವಾಮೀಜಿ

ಕೊರಟಗೆರೆ, ಜು. ೧೮- ಭಾರತೀಯ ಸಂಸ್ಕೃತಿಯಲ್ಲಿ ಪುಟ್ಟ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವುದು ಕೇವಲ ಶಿಕ್ಷಣದ ಆರಂಭವಲ್ಲ, ಅದು ಜ್ಞಾನ, ಸಂಸ್ಕಾರ ಮತ್ತು ಸತ್ಪ್ರವೃತ್ತಿಯ ಬದುಕಿನತ್ತ ಇಡುವ ಮೊದಲ ಹೆಜ್ಜೆಯಾಗಿದೆ. ಅದರಲ್ಲೂ ದೇವಾಲಯದ ಪವಿತ್ರ ವಾತಾವರಣದಲ್ಲಿ ಗುರುಗಳ ಸಮ್ಮುಖದಲ್ಲಿ ಅಕ್ಷರಾಭ್ಯಾಸ ಮಾಡಿಸುವುದು ಮಕ್ಕಳ ಭವಿಷ್ಯಕ್ಕೆ ಶುಭಾರಂಭವನ್ನು ನೀಡುತ್ತದೆ ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಹನುಮಂತನಾಥ ಸ್ವಾಮೀಜಿ ಹೇಳಿದರು.


ತಾಲ್ಲೂಕಿನ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಆವರಣದಲ್ಲಿರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪಟ್ಟಣದ ಕನ್ನಿಕಾ ವಿದ್ಯಾಪೀಠ ಶಾಲೆಯ ಪ್ರಾಥಮಿಕ ವಿಭಾಗದ ಮಕ್ಕಳಿಗಾಗಿ ಏರ್ಪಡಿಸಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.


ಮಕ್ಕಳ ಶಿಕ್ಷಣವು ಉತ್ತಮ ಸಂಸ್ಕಾರ, ನೈತಿಕ ಮೌಲ್ಯಗಳು ಹಾಗೂ ಭಾರತೀಯ ಪರಂಪರೆಯೊಂದಿಗೆ ಆರಂಭವಾದಾಗ ಅವರ ವ್ಯಕ್ತಿತ್ವವು ಸದೃಢವಾಗಿ ರೂಪುಗೊಳ್ಳುತ್ತದೆ. ಅಕ್ಷರಾಭ್ಯಾಸವು ಮಗುವಿನ ಜೀವನದ ಮಹತ್ವದ ಸಂಸ್ಕಾರಗಳಲ್ಲಿ ಒಂದಾಗಿದ್ದು, ದೇವರ ಸನ್ನಿಧಿಯಲ್ಲಿ “ಓಂ”, “ಶ್ರೀ” ಮತ್ತು ಮೊದಲ ಅಕ್ಷರಗಳನ್ನು ಬರೆಯುವ ಮೂಲಕ ಜ್ಞಾನಾರ್ಜನೆಯ ಪವಿತ್ರ ಪಯಣ ಆರಂಭವಾಗುತ್ತದೆ ಎಂದು ತಿಳಿಸಿದರು.
ಇಂದಿನ ಆಧುನಿಕ ಶಿಕ್ಷಣದ ಜತೆಗೆ ಭಾರತೀಯ ಸಂಸ್ಕೃತಿ, ಧಾರ್ಮಿಕ ಮೌಲ್ಯಗಳು ಮತ್ತು ಗುರು-ಶಿಷ್ಯ ಪರಂಪರೆಯನ್ನು ಮಕ್ಕಳಲ್ಲಿ ಬೆಳೆಸುವುದು ಅಗತ್ಯವಾಗಿದೆ. ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರವನ್ನೂ ನೀಡಿದರೆ ಅವರು ಸಮಾಜಕ್ಕೆ ಆಧ್ಯ ನಾಗರಿಕರಾಗಿ ಬೆಳೆಯುತ್ತಾರೆ ಎಂದು ಕರೆ ನೀಡಿದರು.


ಕಾರ್ಯಕ್ರಮದಲ್ಲಿ ಆಗಮಿಕ ಸುರಶನ್ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ನಂತರ ಪರ್ವ ಪ್ರಾಥಮಿಕ ಮಕ್ಕಳಿಗೆ ಸಂಪ್ರದಾಯ ಬದ್ಧವಾಗಿ ಅಕ್ಷರಾಭ್ಯಾಸ ಮಾಡಿಸಲಾಯಿತು. ಮಕ್ಕಳು ಅಕ್ಕಿಯಲ್ಲಿ ಮೊದಲ ಅಕ್ಷರಗಳನ್ನು ಬರೆದು ವಿದ್ಯಾಭ್ಯಾಸಕ್ಕೆ ಶುಭಾರಂಭ ಮಾಡಿದರು.


ಕಾರ್ಯಕ್ರಮದಲ್ಲಿ ಕನ್ನಿಕಾ ವಿದ್ಯಾಪೀಠದ ಶಿಕ್ಷಕರು, ಸಿಬ್ಬಂದಿ, ಪೋಷಕರು ಹಾಗೂ ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಮಠದ ವತಿಯಿಂದ ಮಕ್ಕಳಿಗೆ ಆಕ್ಶರಾಭ್ಯಾಸ ಮತ್ತು ಪ್ರಸಾದ ವಿತರಿಸಲಾಯಿತು.