Home ಜಿಲ್ಲೆ ತುಮಕೂರು ಸರ್ಕಾರದ ಸೌಲಭ್ಯ ಪಡೆದು ರೇಷ್ಮೆ ಬೆಳೆಯಲು ಸಲಹೆ

ಸರ್ಕಾರದ ಸೌಲಭ್ಯ ಪಡೆದು ರೇಷ್ಮೆ ಬೆಳೆಯಲು ಸಲಹೆ

ಮಧುಗಿರಿ, ಆ.೧- ಪ್ರತಿ ಒಂದು ಎಕರೆ ಹಿಪ್ಪು ನೇರಳೆ ತೋಟಕ್ಕೆ ೩೦೦ ಮೊಟ್ಟೆ ಚಾಕಿ ಕಟ್ಟಿ ೨೫೦ ಕೆಜಿ ರೇಷ್ಮೆ ಗೂಡು ಬೆಳೆಯಬಹುದು ಎಂದು ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಹೇಳಿದರು.
ತಾಲ್ಲೂಕಿನ ಪುರವರ ಹೋಬಳಿ ಉಪ್ಪಾರಹಟ್ಟಿ ಗ್ರಾಮದಲ್ಲಿ ರೇಷ್ಮೆ ಬೆಳೆಗಾರರಿಗೆ ಗುಂಪು ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಹಿಪ್ಪು ನೇರಳೆ ಬೇಸಾಯದಲ್ಲಿ ಇಲಾಖೆಯಿಂದ ಶಿಫಾರಸ್ ಆಗಿರುವಂತಹ ಕೀಟ ನಾಶಕಗಳನ್ನು ಮಾತ್ರ ಬಳಸಬೇಕು. ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕೂ ಮುನ್ನ, ಸದರಿ ಖಾಲಿ ನಿವೇಶನವನ್ನು ದಿಶಾಂಕ್ ಆಪ್ ಮೂಲಕ ಖಚಿತಪಡಿಸಿಕೊಂಡ ನಂತರ ಹುಳು ಮನೆ ನಿರ್ಮಾಣ ಮಾಡತಕ್ಕದ್ದು ಎಂದು ಹೇಳಿದರು.


ರೇಷ್ಮೆ ಇಲಾಖೆಯ ವಿಸ್ತರಣಾಧಿಕಾರಿ ಜಿ.ಕೊಂಡಯ್ಯ ಮಾತನಾಡಿ, ರೇಷ್ಮೆ ಇಲಾಖೆಯಿಂದ ರೇಷ್ಮೆ ಬೆಳೆಗಾರರಿಗೆ ಅಥವಾ ರೇಷ್ಮೆ ಕೃಷಿ ಕೈಗೊಂಡಿರುವ ರೈತರಿಗೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಹಿಪ್ಪು ನೇರಳೆ ತೋಟಕ್ಕೆ ಒಂದು ಎಕರೆ ವಿಸ್ತೀರ್ಣಕ್ಕೆ ಹನಿ ನೀರಾವರಿ ಅಳವಡಿಸಿಕೊಂಡರೆ ೩೫ ರಿಂದ ೪೦ ಸಾವಿರ ರೂ. ಸಹಾಯ ಧನ ಲಭ್ಯವಿದೆ ಎಂದರು.


೧ ಸಾವಿರ ಚದುರ ಅಡಿ ರೇಷ್ಮೆ ಹುಳು ಸಾಕಾಣಿಕೆ ಮನೆಗೆ ಸಹಾಯ ಧನ ೩,೩೭, ೫೦೦ ಸಾಮಾನ್ಯ ವರ್ಗದ ರೈತರಿಗೆ. ಎಸ್ ಸಿ ಮತ್ತು ಎಸ್ಟಿ ವರ್ಗದವರಿಗೆ ೪೦೫೦೦೦ ಸಹಾಯ ಧನ ಲಭ್ಯವಿದೆ ಎಂದರು.


ರೇಷ್ಮೆ ಹುಳು ಸಾಕಾಣಿಕೆ ಸಲಕರಣೆಗಳಾದ ಪ್ಲಾಸ್ಟಿಕ್ ಚಂದ್ರಿಕೆ ಹಾಗೂ ಪವರ್ ಸ್ಪೆಯರ್. ಇತರೆ ವರ್ಗದವರಿಗೆ ಶೇ. ೭೫ ರಷ್ಟು ಸಬ್ಸಿಡಿ. ಎಸ್ಸಿ ಎಸ್ಟಿ ವರ್ಗದವರಿಗೆ ಶೇ. ೯೦ ರಷ್ಟು ಸಬ್ಸಿಡಿ ಸಿಗಲಿದೆ ಎಂದು ಮಾಹಿತಿ ನೀಡಿದರು.


ಕಾರ್ಯಕ್ರಮದಲ್ಲಿ ಹಿಪ್ಪು ನೇರಳೆ ತೋಟದಲ್ಲಿ ಮಣ್ಣು ಪರೀಕ್ಷೆಗೆ ಮಣ್ಣು ತೆಗೆಯುವುದನ್ನು ಪ್ರಾತ್ಯಕ್ಷತೆ ಮೂಲಕ ತೋರಿಸಿಕೊಡಲಾಯಿತು ಹಾಗೂ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಹಾಗೂ ತಾಂತ್ರಿಕ ಮಾಹಿತಿಯನ್ನು ಪಡೆಯುವುದರ ಮೂಲಕ ರೈತರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಬಹುದು ಎಂದು ತಿಳಿಸಿದರು.