
ಚಿಕ್ಕನಾಯಕನಹಳ್ಳಿ, ಆ. ೧- ಪ್ರತಿಯೊಬ್ಬರ ಸಾಧನೆ ಹಿಂದೆ ಗುರುವಿನ ಮಾರ್ಗದರ್ಶನ ಇರುತ್ತದೆ. ದೇವರ ಅನುಗ್ರಹ ದೊರಕಬೇಕಾದರೂ ಗುರುವಿನಿಂದ ಸಂಸ್ಕಾರ ಪಡೆದರೆ ಸಾದ್ಯವಾಗುತ್ತದೆ ಎಂದು ಚಿತ್ರನಟ ರಮೇಶ್ ಭಟ್ ಹೇಳಿದರು.
ತಾಲ್ಲೂಕಿನ ಹಂದನಕೆರೆ ಗಿರಿಗುರು ಸಿದ್ಧೇಶ್ವರ ಮಠದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಿ ಗುರುವಂದನೆ ಸಲ್ಲಿಸಿ ಅವರು ಮಾತನಾಡಿದರು.
ವ್ಯಕ್ತಿ ಯಾವುದೇ ಕ್ಷೇತ್ರದಲ್ಲಾಗಲಿ ಕಾರ್ಯಸಿದ್ದಿ ಪಡೆದು ಸಾಧನೆಯ ಗುರಿ ಅಥವಾ ವಿದ್ಯಾ ಸಂಪನ್ನರಾಗಲು ಗುರುವಿನ ಮಾರ್ಗದರ್ಶನ ಅಗತ್ಯವಾಗಿರುತ್ತದೆ. ಸರಿ ತಪ್ಪು ತಿದ್ದುವ ಶಕ್ತಿ ಗುರುವಿಗೆ ಮಾತ್ರ ಇರುತ್ತದೆ. ಮಠ ಮಂದಿರದಲ್ಲಿರುವ ಗುರು ಪರಂಪರೆಯು ಸಮಾಜಕ್ಕೆ ಅನಾದಿಕಾಲದಿಂದಲೂ ಕೊಡುಗೆ ನೀಡುತ್ತಿದೆ ಎಂದರು.
ಭಕ್ತರಿಂದ ಗುರುವಂದನೆ ಸ್ವೀಕರಿಸಿ ಶ್ರೀಮಠದ ರುದ್ರಾರಾಧ್ಯ ಮಾತನಾಡಿ, ವ್ಯಕ್ತಿಯ ಶುಭ ಕಾಮನೆಗಳು ಈಡೇರಲು ಗುರುಬಲ ಇರಬೇಕು. ಗುರುವಿನ ಉಪದೇಶ ಹಾಗು ಸಂಸ್ಕಾರವನ್ನು ಅನುಸರಿಸಿದ ಭಕ್ತ ಬದುಕಿನಲ್ಲಿ ಶಾಂತಿ ನೆಮ್ಮದಿ ಕಾಣುತ್ತಾನೆ. ಕ್ಷೇತ್ರದ ಶ್ರೀಗಿರಿ ಗುರು ಸಿದ್ಧೇಶ್ವರ ಸ್ವಾಮಿಯ ಚರಿತ್ರೆ ಆಧರಿಸಿ ಸಿನಿಮಾ ಚಿತ್ತೀಕರಣಕ್ಕೆ ಕ್ಯಾಮರ ಚಾಲನೆ ನೀಡಲಾಯಿತು. ಭಕ್ತರ ಕಾಣಿಕೆಯಿಂದ ಸಿನಿಮಾ ಚಿತ್ರಿಕರಣ ನಡೆಯುತ್ತದೆ. ಎಂದರು.
ನಿವೃತ್ತ ಎಸಿಪಿ ಲೋಕೇಶ್ ಮಾತನಾಡಿ, ತಂದೆ-ತಾಯಿ ಯಾರಾದರು ಮೃತ ಹೊಂದಿದ್ದರೆ ಫಾರೀನ್‌ನಲ್ಲಿರುವ ಮಕ್ಕಳು ಅಂತ್ಯ ಸಂಸ್ಕಾರವನ್ನು ಮೊಬೈಲ್‌ನಲ್ಲಿ ನೋಡಿ ಕೈಮುಗಿಯುವುದನ್ನು ಸಮಾಜದಲ್ಲಿ ನೋಡುವಂತಾಗಿದೆ. ಕಷ್ತ ಪಟ್ಟು ಮಕ್ಕಳನ್ನು ಓದಿಸಿ ಕೆಲಸ ಕೊಡಿಸುತ್ತಾರೆ. ಆದರೆ ಮಕ್ಕಳು ಅಪ್ಪ-ಅಮ್ಮಂದಿರನ್ನು ವದ್ದಾಶ್ರಮಕ್ಕೆ ಬಿಡುತ್ತಿದ್ದಾರೆ. ಸಮಾಜದಲ್ಲಿ ಸಂಸ್ಕೃತಿ ಸಂಸ್ಕಾರದ ಕೊರತೆ ಭಕ್ತಿ ಭಾವಕ್ಕೆ ಪರಿಣಾಮ ಬೀರುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಚಿತ್ರ ನಟರಾದ ವಿಕ್ರಮ್ ಸೂರಿ? ನಮಿತರಾವ್? ಶ್ರೀನಗರ ಕಿಟ್ಟಿ, ತಿಪಟೂರು ದಯಾನಂದ ಸಾಗರ್, ಸಮಾಜ ಸೇವಕಿ ಬಿ.ಎಂ.ತಾರಾ ಮತ್ತಿತರರು ಭಾಗವಹಿಸಿದ್ದರು.


































