Home ಜಿಲ್ಲೆ ತುಮಕೂರು ಬಿದ್ದಾಗ ಎದ್ದು ನಿಲ್ಲುವ ಆತ್ಮವಿಶ್ವಾಸ ತುಂಬುವ ಗುರುಗಳು

ಬಿದ್ದಾಗ ಎದ್ದು ನಿಲ್ಲುವ ಆತ್ಮವಿಶ್ವಾಸ ತುಂಬುವ ಗುರುಗಳು

ಕೊರಟಗೆರೆ, ಆ. ೧- ತಂದೆಯ ಜವಾಬ್ದಾರಿ, ತಾಯಿಯ ವಾತ್ಸಲ್ಯ, ಸ್ನೇಹಿತರ ಸಹಕಾರ ಎಲ್ಲ ಗುಣ ಒಟ್ಟಿಗೆ ಇರುವುದು ಗುರುವಿನಲ್ಲಿ. ಸಂಕಷ್ಟದಲ್ಲಿ ಸಿಲುಕಿದವರಲ್ಲಿ ಆತ್ಮಸ್ಥೈರ್ಯ ತುಂಬಿ ಎದ್ದು ನಿಲ್ಲುವಂತಹ ಶಕ್ತಿ ನೀಡುವವರು ಗುರುಗಳು ಎಂದು ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.


ಸುಕ್ಷೇತ್ರ ಸಿದ್ಧರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದಲ್ಲಿ ೨೩೭ನೇ ಬೆಳದಿಂಗಳ ಕೂಟದ ಹಾಗೂ ಗುರುಪೌರ್ಣಿಮೆ ಅಂಗವಾಗಿ ಏರ್ಪಡಿಸಿದ್ದ ಧರ್ಮ ಹಾಗೂ ಜನ ಜಾಗೃತಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಗುರು ಕಾರುಣ್ಯದಿಂದಾಗಿ ಎಂತಹ ಸಿದ್ದಿಯನ್ನು ಬೇಕಾದರೂ ಸಾಧಿಸಬಹುದು ಎಂದರು.


ಗೋಡೆಕೆರೆ ಮಹಸಂಸ್ಥಾನದ ಶ್ರೀ ಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಧರ್ಮವು ಬದುಕಿಗೆ ಆಸರೆಯಾಗಿದೆ. ಧರ್ಮವೆಂಬುದು ಬಾಯಿಂದ ಹೇಳುವುದಲ್ಲ ಬದುಕಿನಲ್ಲಿ ನಡೆದು ತೋರಿಸುವುದು. ಧರ್ಮದಿಂದ ನಡೆಯುವ ವ್ಯಕ್ತಿಯನ್ನು ಯಾರಿಂದಲೂ ಮಣಿಸಲು ಸಾಧ್ಯವಿಲ್ಲ. ಸ್ವಾರ್ಥ ಜೀವನವನ್ನು ಬಿಟ್ಟು ನಿಸ್ವಾರ್ಥತೆಯಿಂದ ಬದುಕಿದರೆ ಮುಕ್ತಿ ದೊರೆಯುತ್ತದೆ. ನಡೆ ನುಡಿಯಲ್ಲಿ ಶುದ್ಧವಿದ್ದಾಗ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು.


ರಾಯಚೂರಿನ ಶ್ರೀ ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ. ಮೀನಾಕ್ಷಿ ಖಂಡೀಮಠ ಮಾತನಾಡಿ, ಗುರು ಪೌರ್ಣಿಮೆಯು ಗುರುವಿನ ಶಕ್ತಿಯನ್ನು ಸ್ಮರಿಸುವ ದಿನ. ಸೃಷ್ಟಿಸುವ, ಮುನ್ನಡೆಸುವ ಹಾಗೂ ನಾಶಗೊಳಿಸು ತ್ರಿಮೂರ್ತಿಗಳ ಒಟ್ಟು ಶಕ್ತಿ ಗುರುವಿನಲ್ಲಿ ಅಡಗಿದೆ. ಭಕ್ತರಲ್ಲಿ ದಾನದ ಗುಣವನ್ನು ಬೆಳೆಸಿ, ಸತ್ಕಾರ್ಯ ಮಾಡುವ ದಾರಿ ತೋರಿಸುವುದು ಗುರುವೇ ಎಂದು ತಿಳಿಸಿದರು.


ಇದೇ ಸಂದರ್ಭದಲ್ಲಿ ಒಂಬತ್ತು ದೇವಾಲಯಗಳ ಜೀರ್ಣೋದ್ಧಾರ ಮಾಡಿದ ಗುಣೇ ಮೋರುಬಗಲ್ ಗ್ರಾಮದ ಜಿ.ಸಿ.ಬಸವೇಗೌಡ.ರವರನ್ನು ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ಜೋನಿಗರಹಳ್ಳಿ ಸವಿತಾ, ಮಮತ, ದುಷ್ಯಂತಕುಮಾರ್, ಗೌ.ರಾ.ರಾಮಮೂರ್ತಿ ಮತ್ತಿತರರು ಭಾಗವಹಿಸಿದ್ದರು.