
ಬೆಂಗಳೂರು, ನ. ೧೧- ‘ರಾಜ್ಯದ ರೈತ ಬಾಂಧವರಿಗೆ ಬರ ಪರಿಹಾರದ ಕುರಿತು ಯಾವುದೇ ರೀತಿಯ ಗೊಂದಲ ಬೇಡ. ಪ್ರತಿಯೊಬ್ಬ ಅರ್ಹ ರೈತನಿಗೂ ನಮ್ಮ ಸರ್ಕಾರ ಎರಡು ಕಂತಿನಲ್ಲಿ ೫,೦೦೦ ರೂ. ಬಿಡುಗಡೆ ಮಾಡುತ್ತದೆ. ಮೊದಲನೆ ಕಂತಿನ ಹಣ ಈಗಾಗಲೇ ಅನೇಕ ರೈತರನ್ನು ತಲುಪಿದೆ. ಪ್ರತಿ ರೈತರಿಗೆ ಹಣ ತಲುಪಿಸಲು ಸರ್ಕಾರ ಸೂತ್ರ ರಚಿಸಿದೆ’ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.
ಸದಾಶಿವನಗರದ ನಿವಾಸದ ಬಳಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಇಂದು ಪ್ರತಿಕ್ರಿಯೆ ನೀಡಿದರು.
‘ಪ್ರತಿ ರೈತರಿಗೂ ಒಂದು ನಿರ್ದಿಷ್ಟ ಮೊತ್ತವನ್ನು ನಿಗದಿಪಡಿಸಲಾಗಿದೆ. ಸರಿಯಾದ ಖಾತೆಗಳಿಗೆ ಹಣ ತಲುಪಿದೆ. ಆದರೆ ಹಣ ತಲುಪದ ರೈತರ ಖಾತೆಯಲ್ಲಿ ಇರುವ ಅಡತಡೆ ನಿವಾರಿಸಿ ಪಾವತಿಸಲಾಗುವುದು. ಹೀಗಾಗಿ ರೈತರು ಆತಂಕ ಪಡುವ ಅಗತ್ಯವಿಲ್ಲ’ ಎಂದು ಸ್ಪಷ್ಟನೆ ನೀಡಿದರು.
ಕೇಂದ್ರ ಸರ್ಕಾರ ಕೊಡದೆ ಇದ್ದರೂ ನುಡಿದಂತೆ ನಾವು ಕೊಡುತ್ತೇವೆ
‘ಒಂದು ಪಕ್ಷ ರೈತರಿಗೆ ತಲುಪಬೇಕಾದ ಮೊತ್ತದಲ್ಲಿ ಹೆಚ್ಚು-ಕಮ್ಮಿಯಾಗಿದ್ದರೆ ಅದನ್ನು ಸರಿಪಡಿಸಲಾಗುವುದು.
ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡದೇ ಇದ್ದರೂ ನಮ್ಮ ಸರ್ಕಾರ ರೈತರಿಗೆ ನುಡಿದಂತೆ ಎರಡು ಕಂತುಗಳಲ್ಲಿ ೫ ಸಾವಿರ ರೂ. ಪರಿಹಾರ ಪಾವತಿ ಮಾಡುತ್ತದೆ’ ಎಂದು ಭರವಸೆ ನೀಡಿದರು.
‘ಒಂದೇ ಬಟನ್ ಮೂಲಕ ಎಲ್ಲಾ ರೈತರ ಖಾತೆಗೂ ಹಣ ವರ್ಗಾವಣೆಯಾಗುತ್ತಿದೆ. ಆದರೆ ಕೆಲವು ಬ್ಯಾಂಕ್ ಖಾತೆಗಳು ಸರಿಯಯಾಗಿಲ್ಲ ಹಾಗೂ ಸಾಲದ ಬಾಬತ್ತಿಗೆ ಲಿಂಕ್ ಆಗಿದೆ. ಎಲ್ಲದರ ದಾಖಲೆಗಳನ್ನು ಪರಿಶೀಲಿಸಿ ಪರಿಹಾರ ಮೊತ್ತ ಶೀಘ್ರ ಪಾವತಿಸಲಾಗುವುದು’ ಎಂದರು.
ವ್ಯತ್ಯಾಸ ಸರಿಪಡಿಸಿ ಅರ್ಹ ರೈತರಿಗೆ ಪರಿಹಾರ
ರೈತರಿಗೆ ಬರ ಪರಿಹಾರ ವಿತರಣೆಯಲ್ಲಿನ ವ್ಯತ್ಯಾಸವನ್ನು ತಕ್ಷಣ ಸರಿಪಡಿಸಿ, ಎಲ್ಲ ಅರ್ಹ ರೈತ ಕುಟುಂಬಗಳಿಗೂ ಸರ್ಕಾರ ಘೋಷಿಸಿರುವ ಪರಿಹಾರವನ್ನು ತಲುಪಿಸಲಾಗುವುದು ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಹೇಳಿದರು.
ಇಂದು ಸದಾಶಿವನಗರದಲ್ಲಿರುವ ತಮ್ಮ ಗೃಹಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಮುಖ್ಯಮಂತ್ರಿಗಳು ಮತ್ತು ನಾನು ಒಬ್ಬ ರೈತ ಕುಟುಂಬಕ್ಕೆ ೨,೫೦೦ ರೂ. ನೀಡುವುದಾಗಿ ಘೋಷಿಸಿದ್ದೆವು. ಈ ಘೋಷಣೆಯ ಕುರಿತು ಕೆಲವು ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಸ್ಪಷ್ಟೀಕರಣವನ್ನೂ ನೀಡಿತ್ತು. ಆರಂಭದಲ್ಲಿ ಮುಖ್ಯಮಂತ್ರಿಗಳು ಮಾತನಾಡುವಾಗ ಎಕರೆಗೆ ಎಂದಿದ್ದರು. ಆಗ ಉಂಟಾದ ಗೊಂದಲವನ್ನು ಪತ್ರಿಕಾಗೋಷ್ಠಿಯ ಅಂತ್ಯದಲ್ಲಿ ಸರಿಪಡಿಸಿದ್ದರು. ಆದರೆ, ಅಧಿಕಾರಿಗಳ ಹಂತದಲ್ಲಿ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದರಿಂದ ಪರಿಹಾರ ವಿತರಣೆಯಲ್ಲಿ ವ್ಯತ್ಯಾಸ ಉಂಟಾಗಿದೆ ಎಂದು ಹೇಳಿದರು.
ಕೆಲವು ರೈತರಿಗೆ ೧,೫೦೦, ಇನ್ನು ಕೆಲವರಿಗೆ ೨,೦೦೦ ರೂ. ಪಾವತಿಯಾಗಿರುವುದು ಗಮನಕ್ಕೆ ಬಂದಿದೆ. ಅಧಿಕಾರಿಗಳು ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡುವಾಗ ಪ್ರತಿ ಎಕರೆಗೆ ಲೆಕ್ಕ ಹಾಕಿದಂತೆ ಕಾಣುತ್ತಿದೆ. ಈ ಲೋಪವನ್ನು ಸರಿಪಡಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಹಣಕಾಸಿನ ವಿಚಾರದಲ್ಲಿ ಯಾವುದೇ ಸಮಸ್ಯೆಯಿಲ್ಲ. ಸಂಬಂಧಪಟ್ಟ ಇಲಾಖೆಗೆ ಅಗತ್ಯ ಹಣವನ್ನು ಬಿಡುಗಡೆ ಮಾಡಲಾಗಿದೆ. ಎನ್ಡಿಆರ್ಎಫ್ ಮಾರ್ಗಸೂಚಿಗಳನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದರಿಂದ ಈ ಗೊಂದಲ ಉಂಟಾಗಿದೆ. ಮಾರ್ಗಸೂಚಿಗಳ ಪ್ರಕಾರ ಪ್ರತಿ ಹೆಕ್ಟೇರ್ಗೆ ಕನಿಷ್ಠ ೧,೫೦೦ ನೀಡಬೇಕೆಂಬ ಲೆಕ್ಕಾಚಾರವನ್ನೂ ಸರಿಯಾಗಿ ಅನುಸರಿಸುವಂತೆ ಸೂಚಿಸಲಾಗಿದೆ ಎಂದರು.
ಸರ್ಕಾರ ಮೊದಲ ಹಂತದಲ್ಲಿ ಸುಮಾರು ೫೦ ಲಕ್ಷ ರೈತ ಕುಟುಂಬಗಳಿಗೆ ತಲಾ ೨,೫೦೦ ನೀಡುವ ಉದ್ದೇಶದಿಂದ ೧,೨೫೦ ಕೋಟಿ ಅಂದಾಜು ಮಾಡಿದೆ. ಎರಡನೇ ಹಂತದಲ್ಲಿಯೂ ಅಷ್ಟೇ ಮೊತ್ತವನ್ನು ಒದಗಿಸುವ ಲೆಕ್ಕಾಚಾರವಿದ್ದು, ಒಟ್ಟಾರೆ ಒಂದು ರೈತ ಕುಟುಂಬಕ್ಕೆ ೫,೦೦೦ ಪರಿಹಾರ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ.
ಆದರೆ, ಎನ್ಡಿಆರ್ಎಫ್ ಮಾರ್ಗಸೂಚಿಗಳ ಪ್ರಕಾರ ಅರ್ಹತೆ ಹೊಂದಿರಬೇಕು. ಈ ಪ್ರಕ್ರಿಯೆಯಲ್ಲಿ ಕೆಲವರು ಅನರ್ಹರಾಗುವ ಸಾಧ್ಯತೆಯಿದೆ. ಅಂತಹವರ ಸಂಖ್ಯೆ ಬಹಳ ಕಡಿಮೆ ಇರಲಿದೆ. ಆದರೂ ಮೊದಲ ಹಂತದಲ್ಲಿ ಅಂದಾಜು ಮಾಡಿರುವ ೧,೨೫೦ ಕೋಟಿ ಮೊತ್ತವನ್ನು ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.
ಪರಿಹಾರ ವಿತರಣೆಯಲ್ಲಿ ಆಗಿರುವ ವ್ಯತ್ಯಾಸವನ್ನು ತಕ್ಷಣ ಸರಿಪಡಿಸಲಾಗುವುದು. ಹಣಕಾಸು ಇಲಾಖೆಯ ಅನುಮತಿ ದೊರೆತ ಕೂಡಲೇ ವ್ಯತ್ಯಾಸದ ಮೊತ್ತವನ್ನು ಪಾವತಿಸಲಾಗುವುದು. ಅಗತ್ಯವಿದ್ದರೆ ಈಗಾಗಲೇ ನೀಡಿರುವ ಮೊತ್ತದೊಂದಿಗೆ ಎರಡನೇ ಕಂತಿನ ಹಣವನ್ನು ಸೇರಿಸಿ ೩,೦೦೦ ಅಥವಾ ೩,೫೦೦ ರೂಪಾಯಿಗಳಾಗಿ ನೀಡುವ ಬಗ್ಗೆಯೂ ಪರಿಶೀಲಿಸಲಾಗುವುದು. ಹಣಕಾಸು ಇಲಾಖೆಯ ಅನುಮತಿ ದೊರೆತ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಯಾದಗಿರಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಈ ಪ್ರಕ್ರಿಯೆ ಆರಂಭಿಸಲಾಗಿದ್ದು, ಇದೀಗ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಮೊದಲ ಹಂತದ ಪರಿಹಾರ ಎಲ್ಲರಿಗೂ ತಲುಪಿದ ಬಳಿಕವೇ ನಮಗೆ ಸರಿಯಾದ ಚಿತ್ರಣ ಸಿಗುತ್ತದೆ. ಎರಡನೇ ಹಂತದ ೨,೫೦೦ ವಿತರಣೆ ಆಮೇಲೆ ಮಾಡಲಾಗುವುದು ಎಂದು ವಿವರಿಸಿದರು.
ಎನ್ಡಿಆರ್ಎಫ್ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಈವರೆಗೆ ಸಮಯಾವಕಾಶ ದೊರೆತಿಲ್ಲ. ಈ ವಿಚಾರವಾಗಿ ಕೇಂದ್ರಕ್ಕೆ ಈಗಾಗಲೇ ಪತ್ರ ಬರೆದು ಎರಡು ವಾರಗಳಿಗೂ ಹೆಚ್ಚು ಸಮಯವಾಗಿದೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪ್ರಧಾನಮಂತ್ರಿಗಳ ಮೈಸೂರು ಪ್ರವಾಸದ ಸಂದರ್ಭದಲ್ಲಿ ಅವರನ್ನು ಭೇಟಿಯಾಗಿ ಸಮಯ ಕೇಳುವುದರಿಂದ ಪ್ರಯೋಜನವಿಲ್ಲ. ಅವರ ಕಾರ್ಯಕ್ರಮ ಈಗಾಗಲೇ ನಿಗದಿಯಾಗಿದ್ದು, ನಿಮಿಷದಿಂದ ನಿಮಿಷದವರೆಗೆ ವೇಳಾಪಟ್ಟಿ ಸಿದ್ಧವಾಗಿದೆ. ಆದ್ದರಿಂದ ಪ್ರತ್ಯೇಕವಾಗಿ ಸಮಯ ಕೇಳಲು ಪ್ರಯತ್ನಿಸುವುದಕ್ಕಿಂತ ಸೂಕ್ತ ಸಂದರ್ಭದಲ್ಲಿ ಭೇಟಿಗೆ ಅವಕಾಶ ಪಡೆಯುವುದು ಉತ್ತಮ. ಸಮಯ ನೀಡಿದ ತಕ್ಷಣ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದೊಯ್ಯುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಬರಗಾಲದ ಹಿನ್ನೆಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಸ್ತುತ ರೈತರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ನಾಲ್ಕೈದು ವರ್ಷಗಳ ಹಿಂದೆ ನೂರಾರು, ಸಾವಿರಾರು ಪ್ರಕರಣಗಳು ವರದಿಯಾಗುತ್ತಿದ್ದವು. ಕಳೆದ ವರ್ಷಕ್ಕೆ ಹೋಲಿಸಿದರೂ ಈ ವರ್ಷ ಪ್ರಕರಣಗಳು ಕಡಿಮೆಯಾಗಿವೆ ಎಂದು ತಿಳಿಸಿದರು.
ಮೈಕ್ರೋ ಫೈನಾನ್ಸ್ ಸಂಸ್ಥೆಗಳನ್ನು ನಿಯಂತ್ರಿಸಲು ಸರ್ಕಾರ ಕಾನೂನು ಜಾರಿಗೆ ತಂದಿದೆ. ಸಾಲ ವಸೂಲಾತಿ ಪ್ರಕ್ರಿಯೆಯಲ್ಲಿ ರೈತರಿಗೆ ತೊಂದರೆಯಾಗದಂತೆ ಆರು ತಿಂಗಳವರೆಗೆ ಮರುಪಾವತಿಯನ್ನು ಮುಂದೂಡುವ ನಿರ್ಧಾರವನ್ನೂ ಪ್ರಕಟಿಸಲಾಗಿದೆ. ಈ ಎರಡೂ ಕ್ರಮಗಳ ಸಂಯೋಜಿತ ಪರಿಣಾಮದಿಂದ ರೈತರು ಆತ್ಮಹತ್ಯೆಯಂತಹ ತೀವ್ರ ನಿರ್ಧಾರ ಕೈಗೊಳ್ಳುವ ಪರಿಸ್ಥಿತಿ ಕಡಿಮೆಯಾಗಲಿದೆ ಎಂದು ಹೇಳಿದರು.
ಆದರೆ, ಖಾಸಗಿಯಾಗಿ ಕೈ ಸಾಲ ಪಡೆಯುವ ಸಂದರ್ಭಗಳಲ್ಲಿ ಯಾವುದೇ ಕಾನೂನುಬದ್ಧ ದಾಖಲೆ ಅಥವಾ ನಿಯಂತ್ರಣ ಇರುವುದಿಲ್ಲ. ಇಂತಹ ವ್ಯವಹಾರಗಳು ವ್ಯಕ್ತಿಗಳ ನಡುವೆಯೇ ನಡೆಯುವುದರಿಂದ ಸರ್ಕಾರಕ್ಕೂ ಮಾಹಿತಿ ಸಿಗುವುದಿಲ್ಲ. ಈ ಸಂದರ್ಭದಲ್ಲಿ ಸಾಲ ನೀಡಿದವರು ಕಿರುಕುಳ ನೀಡಿದರೆ ಅದನ್ನು ಸಹಿಸಿಕೊಳ್ಳಲಾಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ನಡೆಯುತ್ತವೆ. ಇಂತಹ ಪ್ರಕರಣಗಳನ್ನೂ ತಡೆಗಟ್ಟುವ ಅಗತ್ಯವಿದೆ ಎಂದರು.
ಸಹಕಾರಿ ಬ್ಯಾಂಕ್ಗಳಿಂದ ರೈತರಿಗೆ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ನೋಟಿಸ್ಗಳು ಬರುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರ ಈಗಾಗಲೇ ಈ ಬಗ್ಗೆ ನಿರ್ದೇಶನ ನೀಡಿದೆ. ಸಹಕಾರ ಸಚಿವರು ಸರ್ಕಾರದ ತೀರ್ಮಾನದಂತೆ ಸಂಬಂಧಪಟ್ಟ ಬ್ಯಾಂಕ್ಗಳಿಗೆ ನಿರ್ದೇಶನ ನೀಡಲಿದ್ದಾರೆ ಎಂದು ತಿಳಿಸಿದರು.
























