
ಬೀದರ : “ರಕ್ತದಾನವು ಅತ್ಯಂತ ಮಹತ್ವದ ಮಾನವೀಯ ಸೇವೆಯಾಗಿದ್ದು, ನಾವು ನೀಡುವ ರಕ್ತವು ಅಪಘಾತಕ್ಕೊಳಗಾದವರು, ಶಸ್ತ್ರಚಿಕಿತ್ಸೆಗೆ ಒಳಗಾಗುವವರು, ಗರ್ಭಿಣಿಯರು ಹಾಗೂ ವಿವಿಧ ತುರ್ತು ಚಿಕಿತ್ಸೆಯಲ್ಲಿರುವ ರೋಗಿಗಳ ಜೀವ ಉಳಿಸಲು ನೆರವಾಗುತ್ತದೆ. ಆರೋಗ್ಯವಂತ ಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಸಮಾಜದ ಜೀವ ಉಳಿಸುವ ಕಾರ್ಯದಲ್ಲಿ ಕೈಜೋಡಿಸಬೇಕು” ಎಂದು ಹಣ್ಣು ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಡಾ. ಶ್ರೀನಿವಾಸ ಎನ್. ಕರೆ ನೀಡಿದರು.
ಬೀದರನ ತೋಟಗಾರಿಕಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರನ ತೋಟಗಾರಿಕಾ ಮಹಾವಿದ್ಯಾಲಯ, ರೆಡ್ ಕ್ರಾಸ್ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆ (ಓSS) ಘಟಕ-1 ಮತ್ತು 2, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ ಬೀದರ ಹಾಗೂ ರಕ್ತನಿಧಿ ಕೇಂದ್ರ ಬ್ರಿಮ್ಸ್ ಆಸ್ಪತ್ರೆ ಬೀದರ, ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತನಿಧಿ ಕೇಂದ್ರ, ಬ್ರಿಮ್ಸ್ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಖುರಾತ್ ಮಾತನಾಡಿ, ರಕ್ತದಾನ ಮಾಡುವ ಬಗ್ಗೆ ಅರಿವು ಮೂಡಿಸುವಂತಹ ಇಂತಹ ಕಾರ್ಯಕ್ರಮಗಳು ಹಾಗೂ ತುರ್ತು ಸಂದರ್ಭಗಳಲ್ಲಿ ರಕ್ತದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಈ ಶಿಬಿರಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ಜಿಲ್ಲಾ ಆರೋಗ್ಯ ಕೇಂದ್ರದ ಅಧೀಕ್ಷಕರಾದ ಸೂರ್ಯಕಾಂತ ರವರು ಮಾತನಾಡಿ, “ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಆರೋಗ್ಯವಂತ ವ್ಯಕ್ತಿಗಳು ಸ್ವಯಂಪ್ರೇರಿತರಾಗಿ ನೀಡುವ ರಕ್ತವೇ ಅಗತ್ಯವಿರುವ ರೋಗಿಗಳಿಗೆ ಜೀವದಾನವಾಗುತ್ತದೆ” ಎಂದರು. ತದನಂತರ ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲ ಸಿಬ್ಬಂದಿ ವರ್ಗದವರಿಗೆ ಮತ್ತು ವಿದ್ಯಾರ್ಥಿಗಳಿಗೆ ರಕ್ತದಾನದ ವಿಷಯದ ಕುರಿತು ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಅಧಿಕಾರಿಗಳಾದ ಡಾ. ವಿಜಯಮಹಾಂತೇಶ ಮಾತನಾಡಿ, ರಕ್ತದಾನದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ರಕ್ತದಾನಕ್ಕೆ ಸಂಬಂಧಿಸಿದ ಅನಗತ್ಯ ಭಯ ಮತ್ತು ತಪ್ಪು ಕಲ್ಪನೆಗಳನ್ನು ದೂರಮಾಡಿಕೊಂಡು, ಇಂತಹ ಶಿಬಿರಗಳಲ್ಲಿ ಭಾಗವಹಿಸಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಕರೆ ನೀಡಿದರು.
ಇದೇ ವೇಳೆ ರಕ್ತದಾನ ಮಾಡಿದ ದಾನಿಗಳಾದ ಡಾ. ಶ್ರೀನಿವಾಸ ಎನ್., ಡಾ. ವಿಜಯಮಹಾಂತೇಶ, ಶ್ರೀ ಶಿವಾನಂದ ಕೋಳಿ ಹಾಗೂ ಕು. ಸುಪ್ರಿಯಾ ಅವರಿಗೆ ಸತ್ಕರಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಡಾ. ಪ್ರವೀಣ ನಾಯಕೋಡಿ, ಡಾ. ರಮೇಶ ನಾಯಕ, ಡಾ. ಕರೀಮ್ ಎಂ., ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬ್ರಿಮ್ಸ್ ಆಸ್ಪತ್ರೆಯ ರಕ್ತನಿಧಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ವೈದ್ಯಾಧಿಕಾರಿಗಳಾದ ಡಾ. ಕವಿತಾ ರಾಠೋಡ ಸ್ವಾಗತಿಸಿದರು, ಡಾ. ವಿಜಯಮಹಾಂತೇಶ ವಂದಿಸಿದರು, ಕು. ವಿದ್ಯಾಶ್ರೀ ಪ್ರಾರ್ಥನಾ ಗೀತೆ ಹಾಡಿದರು. ಬೀದರ ಎಲ್‍ಬಿಇಎಸ್ ಎನ್‍ಜಿಓ ಸಿ.ಇ.ಓ. ವಿಶ್ವನಾಥ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು























