Home Lead News ವಿಶ್ವವಿಖ್ಯಾತ ದಸರಾಗೆ ಚಾಲನೆ

ವಿಶ್ವವಿಖ್ಯಾತ ದಸರಾಗೆ ಚಾಲನೆ

ಚಾಮುಂಡಿ ಬೆಟ್ಟದಲ್ಲಿ ಗವಿಸಿದ್ದೇಶ್ವರ ಶ್ರೀಗಳಿಂದ ನಾಡಹಬ್ಬ ಉದ್ಘಾಟನೆ: ಸಿಎಂ ಸೇರಿ ಗಣ್ಯರ ಸಮಾಗಮ


ವರದಿ: ಶ್ರೇಯಾಂಕ್.ಕೆ


ಮೈಸೂರು, ಅ.೧೧- ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಇಂದು ಚಾಮುಂಡಿ ಬೆಟ್ಟದಲ್ಲಿ ವಿಧ್ಯುಕ್ತ ಚಾಲನೆ ದೊರೆಯಿತು.


ಕೊಪ್ಪಳದ ಗವಿಮಠದ ಪೀಠಾಧಿಪತಿ ಪರಮಪೂಜ್ಯ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ದಸರಾ ಮಹೋತ್ಸಕ್ಕೆ ಚಾಲನೆ ನೀಡಿದರು. ಇದರೊಂದಿಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ೧೧ ದಿನಗಳ ನವರಾತ್ರಿ ಸಂಭ್ರಮಕ್ಕೆ ಅಧಿಕೃತವಾಗಿ ಚಾಲನೆ ದೊರೆಯಿತು.


ಬೆಳಿಗ್ಗೆ ೧೧.೫೦ರಿಂದ ೧೨.೧೩ರವರೆಗಿನ ಶುಭ ಧನುರ್ ಲಗ್ನದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಕೇಂದ್ರ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಸಚಿವರು, ಶಾಸಕರು ಹಾಗೂ ಗಣ್ಯರು ಭಾಗವಹಿಸಿದ್ದರು. ಶಾಸಕ ಜಿ.ಟಿ. ದೇವೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಚಾಮುಂಡಿ ಬೆಟ್ಟದಲ್ಲಿ ನಡೆದ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಹಾಗೂ ಗಣ್ಯರನ್ನು ನಂದಿಧ್ವಜ, ಮಂಗಳವಾದ್ಯ, ವೀರಗಾಸೆ ಮತ್ತು ನಾಡಿನ ಜಾನಪದ ಕಲಾತಂಡಗಳ ಮೆರವಣಿಗೆಯ ಮೂಲಕ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಬಳಿಕ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ನಾಡಹಬ್ಬಕ್ಕೆ ಶುಭಾರಂಭ ನೀಡಲಾಯಿತು.


ಧರ್ಮಗುರುಗಳ ಉಪಸ್ಥಿತಿ ವಿಶೇಷ:
ಈ ಬಾರಿಯ ದಸರಾ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಧರ್ಮಗಳ ಧರ್ಮಗುರುಗಳು ಮತ್ತು ಮಠಾಧೀಶರು ಭಾಗವಹಿಸಿದ್ದು ವಿಶೇಷವಾಗಿತ್ತು. ಅವರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು.

ಸಾರ್ವಜನಿಕರು ಹಾಗೂ ಗಣ್ಯರಿಗಾಗಿ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.


ನಾಡಹಬ್ಬವನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಮೈಸೂರಿಗೆ ಆಗಮಿಸುವ ನಿರೀಕ್ಷೆಯಿದ್ದು, ಪ್ರವಾಸಿಗರ ಅನುಕೂಲಕ್ಕಾಗಿ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ.

ಚಾಮುಂಡೇಶ್ವರಿ ದೇವಿಯ ಆರಾಧನೆಯೊಂದಿಗೆ ಆರಂಭಗೊಂಡ ದಸರಾ ಮಹೋತ್ಸವ ಮುಂದಿನ ೧೧ ದಿನಗಳ ಕಾಲ ಮೈಸೂರಿನ ಕಲೆ, ಸಂಸ್ಕೃತಿ, ಪರಂಪರೆ ಮತ್ತು ವೈಭವವನ್ನು ಜಗತ್ತಿಗೆ ಪರಿಚಯಿಸಲಿದೆ.

ದೀಪಾಲಂಕಾರದಲ್ಲಿ ಕಂಗೊಳಿಸಿದ ಮೈಸೂರು:
ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆ, ಜಂಬೂಸವಾರಿ ಸಾಗುವ ರಾಜಮಾರ್ಗ ಸೇರಿದಂತೆ ನಗರದ ಪ್ರಮುಖ ರಸ್ತೆಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ದಸರಾ ಕುಸ್ತಿ, ಪುಸ್ತಕ ಮೇಳ, ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಸ್ತುಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳು ದಸರಾ ಸಂಭ್ರಮಕ್ಕೆ ಮೆರುಗು ನೀಡಲಿವೆ.


ಚಾಮುಂಡೇಶ್ವರಿಗೆ ವಿಶೇಷ ಪೂಜೆ
ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಇಂದು ಶೈಲಪುತ್ರಿ, ೧೨ರಂದು ಬ್ರಹ್ಮಚಾರಿಣೀ, ೧೩ರಂದು ಚಂದ್ರಘಂಟ, ೧೪ರಂದು ಕೂಷ್ಮಾಂಡಾ, ೧೫ರಂದು ಸ್ಕಂದಮಾತಾ, ೧೬ರಂದು ಕಾತ್ಯಾಯಿನಿ, ೧೭ರಂದು ಕಾಲರಾತ್ರಿ, ೧೮ರಂದು ಮಹಾಗೌರಿ, ೧೯ರಂದು ಸಿದ್ಧಿದಾತ್ರೀ ಅಲಂಕಾರ ಮಾಡಲಾಗುತ್ತದೆ ಎಂದು ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ತಿಳಿಸಿದರು.


೧೧ ದಿನಗಳ ಕಾಲ ನಿತ್ಯವೂ ಚಾಮುಂಡೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ ನೆರವೇರುತ್ತದೆ. ಮೈಸೂರು ಅರಮನೆಗೂ ಚಾಮುಂಡಿಬೆಟ್ಟಕ್ಕೂ ಅವಿನಾಭಾವ ಸಂಬಂಧವಿದೆ. ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆ ಆಗುತ್ತಿದ್ದಂತೆ, ಅರಮನೆಯಲ್ಲಿ ಮಹಾರಾಜರು ಖಾಸಗಿ ದರ್ಬಾರ್ ಆರಂಭಿಸುತ್ತಾರೆ. ಚಾಮುಂಡೇಶ್ವರಿ ತಾಯಿಗೂ ದರ್ಬಾರ್ ಉತ್ಸವ ನೆರವೇರುತ್ತದೆ. ರಾಜ್ಯದಲ್ಲಿ ಉತ್ತಮ ಮಳೆ ಬೆಳೆಯಾಗಲಿ ಎಂದು ಎಲ್ಲರೂ ಪ್ರಾರ್ಥಿಸೋಣ ಎಂದು ತಿಳಿಸಿದರು.

ಖಾಸಗಿ ದರ್ಬಾರ್‌ಗೆ ಯದುವೀರ್ ಚಾಲನೆ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ರಾಜಮನೆತನದ ಖಾಸಗಿ ದರ್ಬಾರ್‌ಗೆ ಮೈಸೂರು ಅರಮನೆಯಲ್ಲಿ ಚಾಲನೆ ದೊರೆಯಿತು. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಾಂಪ್ರದಾಯಿಕ ರಾಜಪೋಷಾಕು ಧರಿಸಿ, ರತ್ನಖಚಿತ ಸಿಂಹಾಸನದಲ್ಲಿ ವಿರಾಜಮಾನರಾಗಿ ಖಾಸಗಿ ದರ್ಬಾರ್ ನಡೆಸಿದರು.


ದಸರಾ ಮಹೋತ್ಸವದ ಸಂದರ್ಭದಲ್ಲಿ ರಾಜಮನೆತನದ ಸಂಪ್ರದಾಯ, ಸಂಸ್ಕೃತಿ ಹಾಗೂ ಹಿಂದಿನ ರಾಜವೈಭವವನ್ನು ಪ್ರತಿಬಿಂಬಿಸುವ ಖಾಸಗಿ ದರ್ಬಾರ್ ವಿಶೇಷ ಮಹತ್ವ ಪಡೆದಿದೆ. ಈ ಬಾರಿ ಯದುವೀರ ಒಡೆಯರ್ ಅವರು ೧೨ನೇ ಬಾರಿಗೆ ದರ್ಬಾರ್ ನಡೆಸುತ್ತಿರುವುದು ವಿಶೇಷವಾಗಿದೆ.


ಸಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನ:
ದರ್ಬಾರ್‌ಗೂ ಮುನ್ನ ಯದುವೀರ ಒಡೆಯರ್, ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಹಾಗೂ ಪುತ್ರ ಆದ್ಯವೀರ್ ಅವರಿಗೆ ಸಂಪ್ರದಾಯದಂತೆ ಕಂಕಣಧಾರಣೆ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಬಳಿಕ ಅರಮನೆಯ ಸಂಪ್ರದಾಯದಂತೆ ಸಿಂಹಾಸನಕ್ಕೆ ಸಿಂಹಜೋಡಣೆ ಕಾರ್ಯ ಹಾಗೂ ಪೂಜಾ ಕೈಂಕರ್ಯಗಳು ನಡೆದವು.


ನಿಗದಿತ ಶುಭ ಮುಹೂರ್ತದಲ್ಲಿ ಸಿಂಹಾಸನಾರೂಢರಾದ ಯದುವೀರ ಒಡೆಯರ್ ಅವರು ಖಾಸಗಿ ದರ್ಬಾರ್ ನಡೆಸಿದರು. ರಾಜಮನೆತನದ ಸಂಪ್ರದಾಯದಂತೆ ಪಾದಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳು ದರ್ಬಾರ್‍ನ ಪ್ರಮುಖ ಭಾಗವಾಗಿವೆ.


ದಸರಾ ಮುಗಿಯುವವರೆಗೆ ದರ್ಬಾರ್:
ದಸರಾ ಮಹೋತ್ಸವದ ಅಂಗವಾಗಿ ಅ.೧೧ರಿಂದ ಅ.೨೦ರವರೆಗೆ ಅರಮನೆಯಲ್ಲಿ ಸಂಜೆ ವೇಳೆ ಖಾಸಗಿ ದರ್ಬಾರ್ ನಡೆಯಲಿದೆ. ಅ.೧೬ರಂದು ಸರಸ್ವತಿ ಪೂಜೆ, ಅ.೧೮ರಂದು ದುರ್ಗಾಷ್ಟಮಿ ಪೂಜೆ ಹಾಗೂ ಅ.೨೦ರಂದು ಮಹಾನವಮಿ ಮತ್ತು ಆಯುಧಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.


ವಿಜಯದಶಮಿಯಂದು ಅರಮನೆಯ ಸಂಪ್ರದಾಯಬದ್ಧ ಪೂಜಾ ವಿಧಿವಿಧಾನಗಳು ನೆರವೇರಿದ ಬಳಿಕ ಜಂಬೂಸವಾರಿ ಮೆರವಣಿಗೆಗೆ ಚಾಲನೆ ದೊರೆಯಲಿದೆ. ಇದರೊಂದಿಗೆ ಮೈಸೂರು ದಸರಾ ಮಹೋತ್ಸವದ ರಾಜಪರಂಪರೆಯ ವೈಭವ ಮತ್ತೊಮ್ಮೆ ಅನಾವರಣಗೊಳ್ಳಲಿದೆ.