Home ಮುಖಪುಟ ಸುದ್ದಿ ದಸರಾ ಭೂತ, ವರ್ತಮಾನ, ಭವಿಷ್ಯದ ಸಂಗಮ

ದಸರಾ ಭೂತ, ವರ್ತಮಾನ, ಭವಿಷ್ಯದ ಸಂಗಮ

ಮೈಸೂರು, ಅ. ೧೧- ದಸರಾ ಎಂದರೆ ಭೂತ, ವರ್ತಮಾನ, ಭವಿಷ್ಯದ ಸಂಗಮ – ಜಾತಿ ನೋಡಿ ನಾಡು ಕಟ್ಟಬೇಡಿ, ನೀತಿ ನೋಡಿ ನಾಡು ಕಟ್ಟಿ ಎಂದು ಕೊಪ್ಪಳದ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಹೇಳಿದರು.
ಮೈಸೂರು ದಸರಾ ೨೦೨೬ರ ಉದ್ಘಾಟನಾ ವೇದಿಕೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.


ಮೊದಲಿಗೆ ಸುತ್ತೂರು ಶ್ರೀಗಳಿಗೆ ವಂದನೆ ಸಲ್ಲಿಸಿದ ಸ್ವಾಮೀಜಿ, ದಸರಾ ಇತಿಹಾಸವನ್ನು ನೆನಪಿಸಿದರು. ಕೊಪ್ಪಳದ ಗಂಡುಗಲಿ ಕುಮಾರರಾಮನಿಂದಲೇ ದಸರಾ ಆರಂಭವಾಯಿತು. ತುಂಗಭದ್ರಾ ತೀರದಿಂದ ಕಾವೇರಿ ತೀರಕ್ಕೆ ದಸರಾ ಹರಿದು ಬಂದಿದೆ. ಒಂದು ಕಾಲದಲ್ಲಿ ದೊರೆಯ ಹಬ್ಬವಾಗಿದ್ದದ್ದು, ಇಂದು ಧರೆಯ ಹಬ್ಬವಾಗಿದೆ ಎಂದು ಹೇಳಿದರು.


ತಾವು ದೊಡ್ಡ ವ್ಯಕ್ತಿಯಲ್ಲ ಎಂದು ವಿನಮ್ರತೆ ವ್ಯಕ್ತಪಡಿಸಿದ ಶ್ರೀಗಳು, ನಾನು ದಸರಾ ಉದ್ಘಾಟಿಸುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ನಾನು ದಸರಾ ಉದ್ಘಾಟಿಸಲು ಬಂದಿಲ್ಲ. ಈ ಹಿಂದೆ ದಸರಾ ಉದ್ಘಾಟಿಸಿದ ಜ್ಞಾನಿಗಳು ಹಚ್ಚಿದ ಪ್ರಾರ್ಥನೆಯ ದೀಪ ಆರದಿರಲಿ ಎಂದು ಚಾಮುಂಡಿ ದೇವಿಯ ಬಳಿ ಪ್ರಾರ್ಥಿಸಲು ಬಂದಿದ್ದೇನೆ. ನಾನು ಜೋಳಿಗೆ ಜಂಗಮ ಅಷ್ಟೆ. ನನ್ನಿಂದ ಪ್ರಾರ್ಥನೆ ಮಾತ್ರ ಸಾಧ್ಯ. ಚಾಮುಂಡಿ ತಾಯಿ ಶಕ್ತಿ ದೇವತೆ, ಅದಕ್ಕಾಗಿ ಇಲ್ಲಿಗೆ ಪ್ರಾರ್ಥನೆಗೆ ಬಂದಿದ್ದೇನೆ ಎಂದರು.

ಮುಂದುವರೆದು ಮಾತನಾಡಿದ ಅವರು, ದಸರಾ ಎಂಬುದು ಭೂತ, ವರ್ತಮಾನ ಮತ್ತು ಭವಿಷ್ಯದ ಸಂಗಮ. ನಾಡನ್ನು ಜಾತಿ ನೋಡಿ ಕಟ್ಟಬೇಡಿ, ನೀತಿ ನೋಡಿ ನಾಡು ಕಟ್ಟಿ ಎಂದು ಹೇಳಿದ ಭೂಮಿ ಇದು ಕರ್ನಾಟಕ. ಇಲ್ಲಿ ಪಂಥ ಭಿನ್ನ ಇರಬಹುದು, ಸಂತರು ಭಿನ್ನ ಇರಬಹುದು, ಗ್ರಂಥ ಭಿನ್ನ ಇರಬಹುದು. ಆದರೆ ಎಲ್ಲರ ಆಶಯ ಒಂದೇ ಎಂದು ಪ್ರತಿಪಾದಿಸಿದರು.

ಮೈಸೂರು ರಾಜಮನೆತನವನ್ನು ಹೊರಗಿಟ್ಟು ಕರ್ನಾಟಕದ ಇತಿಹಾಸ ನೋಡಲು ಸಾಧ್ಯವಿಲ್ಲ. ಅಂದಿನ ಕಾಲದಲ್ಲೇ ಅಭಿವೃದ್ಧಿ ರಾಜ್ಯ ಕಟ್ಟಿದವರು ಮೈಸೂರು ಅರಸರು. ಮೈಸೂರು ಮಹಾರಾಜರು ಈ ನಾಡಿನ ನೆಲವನ್ನು ಆಳಲಿಲ್ಲ, ಜನರ ಮನಸ್ಸನ್ನು ಆಳಿದರು ಎಂದು ಶ್ಲಾಘಿಸಿದರು.

ಜನಪದ ಸಾಹಿತ್ಯ ಮಹಲಿನಲ್ಲಿ ಕುಳಿತವರಿಂದ ಬಂದಿಲ್ಲ, ಅದು ಮಣ್ಣಿನಿಂದ ಬಂದ ಸಾಹಿತ್ಯ. ತಾಯಿ ತನ್ನ ಮಗುವಿಗೆ ತುತ್ತು ನೀಡುತ್ತಾ ಜಾನಪದ ಸಾಹಿತ್ಯ ಕಟ್ಟಿದ್ದಾಳೆ ಎಂದು ಹೇಳಿದರು.

೧೦ ಮಕ್ಕಳನ್ನು ಸಾಕುವುದೇ ಕಷ್ಟ ಎನ್ನುತ್ತೇವೆ. ಆದರೆ ಬರಿ ಜೋಳಿಗೆ ನಂಬಿ ೧೦ ಸಾವಿರ ಮಕ್ಕಳನ್ನು ಸಾಕಿದ ಮಹಾ ಗುರುಗಳು ಸಿದ್ದಗಂಗಾ ಶ್ರೀಗಳು. ಪ್ರೀತಿಗೆ ಪ್ರೀತಿ ಕೊಟ್ಟ ನಾಡು ಇದು. ಕರ್ನಾಟಕ ರೈತರ ಬೆವರಿನಿಂದ, ಕಾರ್ಮಿಕರಿಂದ, ಹೋರಾಟಗಾರರ ತ್ಯಾಗದಿಂದ, ಕವಿಗಳು, ಸಂತರಿಂದ ಕಟ್ಟಿದ ನಾಡು ಇದು. ಈ ನಾಡು ಯಾರೋ ಒಬ್ಬರು ಕಟ್ಟಿದ್ದಲ್ಲ, ನಾವೆಲ್ಲ ಸೇರಿ ಕಟ್ಟಿಕೊಂಡಿದ್ದು ಎಂದು ಅವರು ಹೇಳಿದರು.

ಕೊನೆಯಲ್ಲಿ ಕತ್ತಲೆ ದೂರ ಮಾಡಲು ಕತ್ತಲೆಯ ಜೊತೆ ಗುದ್ದಾಡಬಾರದು. ದೀಪ ಹಚ್ಚಿದರೆ ಕತ್ತಲೆ ತಾನಾಗಿಯೇ ಮಾಯವಾಗುತ್ತದೆ. ಇದನ್ನು ನಮ್ಮ ಬದುಕಿಗೆ ಅಳವಡಿಸಿಕೊಳ್ಳಬೇಕು ಎಂಬ ಸಂದೇಶ ನೀಡಿ ತಮ್ಮ ಭಾಷಣ ಮುಗಿಸಿದರು.