Home ಜಿಲ್ಲೆ ಕಲಬುರಗಿ ಆನ್ಲೈನ್ ಮುಖಾಂತರ ರಸಮೇವು ಕಳುಹಿಸುವುದಾಗಿ ಹೇಳಿ 1.95 ಲಕ್ಷ ರೂ.ವಂಚನೆ

ಆನ್ಲೈನ್ ಮುಖಾಂತರ ರಸಮೇವು ಕಳುಹಿಸುವುದಾಗಿ ಹೇಳಿ 1.95 ಲಕ್ಷ ರೂ.ವಂಚನೆ

ಕಲಬುರಗಿ,ಅ.11-ಆನ್ಲೈನ್ ಮುಖಾಂತರ ರಸಮೇವು ಕಳುಹಿಸುವುದಾಗಿ ಹನುಗಾರಿಕೆ ವ್ಯಾಪಾರ ಮಾಡುತ್ತಿರುವ ವ್ಯಕ್ತಿಯೊಬ್ಬರಿಗೆ 1,95000 ರೂ.ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕಮಲಾಪುರದಲ್ಲಿ ಹೈನುಗಾರಿಕೆ ವ್ಯಾಪಾರ ಮಾಡುತ್ತಿರುವ ಕಲಬುರಗಿ ಜಗತ್ ಬಡಾವಣೆ ನಿವಾಸಿ ರಾಜಶೇಖರ್ ಸುಗೂರ್ ಎಂಬುವವರೆ ವಂಚನೆಗೆ ಒಳಗಾಗಿದ್ದು, ಅವರು ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಕಮಲಾಪುರದಲ್ಲಿ ಹೈನುಗಾರಿಕೆ ವ್ಯಾಪಾರ ಮಾಡುತ್ತಿರುವ ರಾಜಶೇಖರ್ ಸುಗೂರ್ ಅವರು ಆನ್ಲೈನ್ ಮುಖಾಂತರ ದನಗಳ ಮೇವು (ರಸಮೇವು) ಖರೀದಿಸಲೆಂದು ಸಂಬಂಧಿ ಹಾಗೂ ಪಶು ವೈದ್ಯಾಧಿಕಾರಿ ಡಾ.ವೈಜನಾಥ ಮಮ್ಮಾಣಿ ಅವರೊಂದಿಗೆ ಚರ್ಚೆ ನಡೆಸಿ ಅವರ ಮೊಬೈಲ್‍ನಲ್ಲಿಯೇ ಆನ್ಲೈನ್‍ನಲ್ಲಿ ಸರ್ಚ್ ಮಾಡಿದ್ದು, ವೆಬ್‍ಸೈಟ್ ಒಂದು ಓಪನ್ ಆಗಿದೆ. ಆಗ ಉತ್ತರ ಪ್ರದೇಶದ ಗಾಜಿಯಾಬಾದ್‍ನ ಮನೀಷ್ ಎಂಬಾತ ರಸಮೇವು ಬಗ್ಗೆ ಮಾಹಿತಿ ನೀಡಿ ಪ್ರತಿ ಕೆಜಿಗೆ 5 ರೂಪಾಯಿಯಂತೆ ಟ್ರಾನ್ಸಫೋರ್ಟ್ ಚಾರ್ಜ್ ಸೇರಿ ಪ್ರತಿ ಕೆಜಿಗೆ 6.5 ರೂಪಾಯಿ ಹಣ ನಿಗದಿ ಪಡಿಸಿದ್ದಾನೆ. ಅದಕ್ಕೆ ಇವರು ಒಪ್ಪಿಕೊಂಡು 30,000 ಕೆಜಿ (30 ಟನ್) ರಸಮೇವು ಖರೀದಿಸಲು ಒಪ್ಪಿದ್ದಾರೆ. ನಂತರ ಮನೀಷ್ ಖಾತೆಗೆ ರಾಜಶೇಖರ್ ಅವರು ತಮ್ಮ ಬ್ಯಾಂಕ್ ಖಾತೆಯಿಂದ 67,500 ಮುಂಗಣ ಹಣ ವರ್ಗಾವಣೆ ಮಾಡಿದ್ದಾರೆ. ನಂತರ ಮನೀಷ್ ರಸಮೇವು ಕಳುಹಿಸುತ್ತಿದ್ದು, ಉಳಿದ ಹಣ ವರ್ಗಾವಣೆ ಮಾಡುವಂತೆ ಸಂದೇಶ ಕಳುಹಿಸಿದ್ದಾರೆ. ಆಗ ಇವರ ಖಾತೆಯಿಂದ ಮತ್ತೆ 30 ಸಾವಿರ ಮತ್ತು ಇವರ ಸ್ನೇಹಿತ ಶಿವಪ್ರಸಾದ ಸಜ್ಜನ್ ಅವರ ತಾಯಿಯವರ ಖಾತೆಯಿಂದ 30 ಸಾವಿರ ರೂ.ವರ್ಗಾವಣೆ ಮಾಡಿದ್ದಾರೆ. ಒಟ್ಟು 1.95 ಲಕ್ಷ ರೂ.ವರ್ಗಾವಣೆ ಮಾಡಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಹಣ ವರ್ಗಾವಣೆ ಮಾಡಿ ಹತ್ತು ದಿನಗಳಾದರೂ ಮನೀಷ್ ರಸಮೇವು ಕಳುಹಿಸದೆ ವಂಚನೆ ಮಾಡಿದ್ದು, ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.