
ಬೆಂಗಳೂರು, ಅ.02: ಕ್ರೀಡಾ ಮನೋಭಾವದೊಂದಿಗೆ ರಾಷ್ಟ್ರನಾಯಕರ ಆದರ್ಶಗಳನ್ನು ಯುವಜನತೆಯಲ್ಲಿ ಬಿತ್ತುವ ಆಶಯದೊಂದಿಗೆ, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಮಹಾಲಕ್ಷ್ಮೀ ಲೇಔಟ್ನ ಕೆ.ಜಿ. ಗ್ರೌಂಡ್ನಲ್ಲಿ ಆಯೋಜಿಸಿರುವ ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿ `ಸಿಎಂ ಕಪ್’ನಲ್ಲಿ ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವನ್ನು ಗೌರವಪೂರ್ವಕವಾಗಿ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಕೆಪಿವೈಸಿಸಿ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಗೌಡ, ಗಾಂಧೀಜಿ ಅವರ ಸತ್ಯ, ಅಹಿಂಸೆ ಮತ್ತು ಸರಳತೆಯ ತತ್ವಗಳು ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಶಿಸ್ತು, ಪ್ರಾಮಾಣಿಕತೆ ಮತ್ತು ದೇಶಪ್ರೇಮ ಇಂದಿನ ಯುವಜನತೆಗೆ ಸದಾ ಸ್ಫೂರ್ತಿಯಾಗಬೇಕು. ಈ ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಯುವಕರು ಸಮಾಜದ ಬದಲಾವಣೆಯ ಶಕ್ತಿಯಾಗಬೇಕು'' ಎಂದರು. ಯುವಕರು ಕೇವಲ ಕ್ರೀಡೆಯಲ್ಲಿ ಸಾಧನೆ ಮಾಡುವುದಷ್ಟೇ ಅಲ್ಲದೆ, ಶಿಕ್ಷಣ, ಸಾಮಾಜಿಕ ಸೇವೆ ಹಾಗೂ ರಾಷ್ಟ್ರ ನಿರ್ಮಾಣದಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಕ್ರೀಡೆ ದೈಹಿಕ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ಶಿಸ್ತು, ನಾಯಕತ್ವ, ಪರಸ್ಪರ ಗೌರವ, ತಂಡದ ಮನೋಭಾವ ಮತ್ತು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣಗಳನ್ನು ಬೆಳೆಸುತ್ತದೆ. ಆರೋಗ್ಯವಂತ, ಶಿಸ್ತಿನ ಹಾಗೂ ಜವಾಬ್ದಾರಿಯುತ ಯುವಶಕ್ತಿಯೇ ಬಲಿಷ್ಠ ಸಮಾಜದ ಅಡಿಪಾಯ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ, ಅವರ ಆದರ್ಶಗಳನ್ನು ಪಾಲಿಸುವ ಸಂಕಲ್ಪ
ಮಾಡಲಾಯಿತು.
ಈ ವೇಳೆ ಬಿಬಿಎಂಪಿ ಮಾಜಿ ಸದಸ್ಯರು ಹಾಗೂ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಅಭ್ಯರ್ಥಿಗಳಾದ ಎಸ್.ಕೇಶವಮೂರ್ತಿ, ಯುವ ಕಾಂಗ್ರೆಸ್ ಕಾನೂನು ಘಟಕದ ರಾಜ್ಯಾಧ್ಯಕ್ಷರಾದ ಶ್ರೀಧರ್ ಜಾಧವ್, ಸಾಂಸ್ಕೃತಿಕ ಮತ್ತು ಕ್ರೀಡಾ ಘಟಕದ ಅಧ್ಯಕ್ಷರಾದ ಭರತ್ ಯಾದವ್ ಜೆ., ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ರಾಹುಲ್ ಗೌಡ, ಕೆಪಿವೈಸಿಸಿ ರಾಜ್ಯ ಕಾರ್ಯದರ್ಶಿ ಅನಿಲ್ ಕುಮಾರ್, ಅಸೆಂಬ್ಲಿ ಅಧ್ಯಕ್ಷರಾದ ಸ್ಯಾಮ್ಯುಯೆಲ್ ಸೇರಿದಂತೆ ಯುವ ಕಾಂಗ್ರೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
























