
ಬೆಂಗಳೂರು.ಅ.೨- ಸತ್ಯ, ಅಹಿಂಸೆ ಮತ್ತು ಸರಳತೆಯ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕು ನೀಡಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಆದರ್ಶಗಳು ಸದಾ ನಮ್ಮ ಜೀವನಕ್ಕೆ ಮಾರ್ಗದರ್ಶಿಯಾಗಲಿ ಅವರ ಸತ್ಯ ಮತ್ತು ಅಹಿಂಸೆಯ ಸಂದೇಶವನ್ನು ನಾವೆಲ್ಲರೂ ಪಾಲಿಸೋಣ ಎಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್ ಈ ಸುಧೀಂದ್ರ ತಿಳಿಸಿದ್ದಾರೆ.
ವಿವೇಕಾನಂದ ಗೆಳೆಯರ ಬಳಗ ಬೆಂಗಳೂರಿನ ಗಿರಿನಗರದ ವಿವೇಕಾನಂದ ಪಾರ್ಕ್ ನಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿಯವರ ೧೫೭ನೇ ಜನ್ಮ ದಿನಾಚರಣೆ ಹಾಗೂ ಮಾಜಿ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ೧೨೨ ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಲಾಲ್ ಬಹದ್ದೂರ್ ಶಾಸ್ತ್ರಿ ಕುರಿತು ಅವರ ಪುತ್ರ ಅನಿಲ್ ಶಾಸ್ತ್ರಿ ಸ್ನೇಹ ನೆನೆಯುತ್ತಾ ಸರಳತೆ, ಪ್ರಾಮಾಣಿಕತೆ, ಶಿಸ್ತು ಮತ್ತು ದೇಶಭಕ್ತಿಯ ಪ್ರತೀಕವಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನ ನಮಗೆ ಸದಾ ಸ್ಫೂರ್ತಿಯಾಗಿದೆ ಎಂದು ತಿಳಿಸಿದರು.
ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನದಂದು ಇಬ್ಬರು ಮಹಾನ್ ನಾಯಕರಿಗೆ ಗೌರವಪೂರ್ವಕ ನಮನ ಸಲ್ಲಿಸುತ್ತಾ ಅವರ ಆದರ್ಶಗಳು ನಮ್ಮ ದೇಶದ ಪ್ರಗತಿಗೆ ಸದಾ ದಾರಿದೀಪವಾಗಲಿ ಎಂದು ಆಶಿಸಿದರು.
ಈ ಅರ್ಥಪೂರ್ಣ ಆಚರಣೆಯನ್ನು ಆಯೋಜಿಸಲು ವಿವೇಕಾನಂದ ಯುವಕರ ಬಳಗದ ಕೊಡುಗೆ ಪ್ರಶಂಸಿಸಿ ೧೯೬೫ ರಿಂದಲೇ ಈ ಬಳಗ ಸಮಾಜಮುಖಿ, ಸೇವೆಯಲ್ಲಿ ತೊಡಗಿರುವುದನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಮುರಳಿ, ಶಿವು , ಶಿವಕುಮಾರ್, ಮಂಜುನಾಥ್, ರಾಮಚಂದ್ರಪ್ಪ, ಶಿವರಾಪುರ ನಾಗಣ್ಣ, ವಸಂತಕುಮಾರ್, ಚಿನ್ನಪ್ಪ ರೆಡ್ಡಿ ,ರಂಗಸ್ವಾಮಿ ಮುಂತಾದವರು, ಸಾರ್ವಜನಿಕರು ಭಾಗಿಯಾಗಿದ್ದರು.

























