
ನವದೆಹಲಿ, ಅ. ೨- ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ವಿಚಾರವಾಗಿ ಚರ್ಚೆ ಹಾಗೂ ಟೀಕೆಗಳು ಮುಂದುವರಿದಿರುವ ಬೆನ್ನಲ್ಲೇ, ಚುನಾವಣಾ ಆಯೋಗವು ಮಹತ್ವದ ಕ್ರಮ ಕೈಗೊಂಡಿದೆ. ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಂಡಿರುವ ೨೦ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯಿಂದ ಹೊರಗುಳಿದ ಅರ್ಹ ಮತದಾರರು ಹಾಗೂ ಹೊಸದಾಗಿ ಮತದಾನಕ್ಕೆ ಅರ್ಹರಾದವರನ್ನು ಸೇರ್ಪಡೆಗೊಳಿಸಲು ವಿಶೇಷ ಅಭಿಯಾನ ನಡೆಸುವಂತೆ ಆಯೋಗ ಸೂಚಿಸಿದೆ.
ಸೆಪ್ಟೆಂಬರ್ ೨೯ರಂದು ಹೊರಡಿಸಲಾದ ನಿರ್ದೇಶನದ ಬಳಿಕ ನಡೆದ ಎಲ್ಲ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳ (ಸಿಇಒ) ವಿಡಿಯೋ ಸಭೆಯಲ್ಲೂ ಪುನರುಚ್ಚರಿಸಲಾಗಿದೆ. ಎಸ್ಐಆರ್ ವೇಳೆ ಅಥವಾ ಅದರ ಬಳಿಕ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದೆ ಉಳಿದಿರುವ ಅರ್ಹರು ಹಾಗೂ ಮೊದಲ ಬಾರಿಗೆ ಮತದಾನಕ್ಕೆ ಅರ್ಹರಾದ ಯುವಜನರಿಗೆ ನಿರಂತರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಡಿ ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸುವಂತೆ ಸಿಇಒ, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮತದಾರರ ನೋಂದಣಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಸಾಮಾನ್ಯ ಫಾರಂ-೬ ಮೂಲಕ ಸೇರ್ಪಡೆ
ಎಸ್ಐಆರ್ ಪೂರ್ಣಗೊಂಡಿರುವ ೨೦ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೆಸರು ಕೈತಪ್ಪಿರುವ ಅರ್ಹ ಮತದಾರರು ಹಾಗೂ ಮೊದಲ ಬಾರಿಗೆ ಮತದಾರರಾಗುವವರು ಸಾಮಾನ್ಯ ಶಾಸನಬದ್ಧ ಫಾರಂ-೬ ಮೂಲಕ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಬಹುದು. ಎಸ್ಐಆರ್ ಅವಧಿಯಲ್ಲಿ ಫಾರಂ-೬ಗೆ ಸೇರಿಸಲಾಗಿದ್ದ ಹೆಚ್ಚುವರಿ ಘೋಷಣಾ ನಮೂನೆ ಈ ವಿಶೇಷ ಅಭಿಯಾನದಲ್ಲಿ ಅಗತ್ಯವಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.
ಅರ್ಹ ಮತದಾರರು ತಮ್ಮ ಕ್ಷೇತ್ರದ ಚುನಾವಣಾ ನೋಂದಣಿ ಅಧಿಕಾರಿಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಈ ಪ್ರಕ್ರಿಯೆಯನ್ನು ಸುಗಮಗೊಳಿಸಲು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಚುನಾವಣಾ ಅಧಿಕಾರಿಗಳು ವಿಶೇಷ ಕ್ರಮ ಕೈಗೊಳ್ಳಬೇಕಾಗಿದೆ.
೧೩.೩೭ ಕೋಟಿ ಹೆಸರುಗಳು ಕರಡು ಪಟ್ಟಿಯಿಂದ ಹೊರಗೆ
ಎಸ್ಐಆರ್ನ ವಿವಿಧ ಹಂತಗಳಲ್ಲಿ ೩೦ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕರಡು ಮತದಾರರ ಪಟ್ಟಿಯಿಂದ ೧೩.೩೭ ಕೋಟಿಗೂ ಹೆಚ್ಚು ಹೆಸರುಗಳು ಹೊರಗುಳಿದಿವೆ. ಇದು ಎಸ್ಐಆರ್ಗೂ ಮುನ್ನಿದ್ದ ಒಟ್ಟು ಮತದಾರರ ಸಂಖ್ಯೆಯ ಸುಮಾರು ೧೪.೧ರಷ್ಟು ಎಂದು ವರದಿಯಾಗಿದೆ. ಆದರೆ ಕರಡು ಪಟ್ಟಿಯಿಂದ ಹೆಸರು ಹೊರಗುಳಿದಿರುವುದೇ ಅಂತಿಮವಾಗಿ ಮತದಾರರ ಹೆಸರನ್ನು ಅಳಿಸಲಾಗಿದೆ ಎಂದರ್ಥವಲ್ಲ; ಹಕ್ಕು ಮತ್ತು ಆಕ್ಷೇಪಣೆಗಳ ಪ್ರಕ್ರಿಯೆಯಲ್ಲಿ ಅರ್ಹರು ಮರುಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು.
ದೆಹಲಿಯಲ್ಲಿ ಕರಡು ಪಟ್ಟಿಯಿಂದ ಹೊರಗುಳಿದ ಮತದಾರರ ಪ್ರಮಾಣ ಶೇ.೩೨.೮ರಷ್ಟಿದ್ದರೆ, ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯುನಲ್ಲಿ ಶೇ.೨೯.೬, ತೆಲಂಗಾಣದಲ್ಲಿ ಶೇ.೨೧.೭ ಮತ್ತು ಮಹಾರಾಷ್ಟ್ರದಲ್ಲಿ ಶೇ.೨೧.೧ರಷ್ಟಿದೆ ಎಂದು ಲಭ್ಯವಿರುವ ಅಂಕಿಅಂಶಗಳು ತಿಳಿಸಿವೆ.
ಕರ್ನಾಟಕದಲ್ಲಿ ಎಸ್ಐಆರ್ ಪ್ರಕ್ರಿಯೆ ಜೂನ್ ೨೦ರಿಂದ ಆರಂಭಗೊಂಡಿದ್ದು, ರಾಜ್ಯದಲ್ಲಿ ಅಂತಿಮ ಮತದಾರರ ಪಟ್ಟಿ ಅಕ್ಟೋಬರ್ ೭ರಂದು ಪ್ರಕಟಿಸುವ ವೇಳಾಪಟ್ಟಿ ನಿಗದಿಯಾಗಿತ್ತು. ರಾಜ್ಯದಲ್ಲಿ ೫.೫೫ ಕೋಟಿಗೂ ಹೆಚ್ಚು ಮತದಾರರಿದ್ದು, ಸುಮಾರು ೫೯,೦೫೦ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಹಾಗೂ ೬,೦೦೦ ಬಿಎಲ್ಒ ಮೇಲ್ವಿಚಾರಕರು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು.
ಎಸ್ಐಆರ್ ಇನ್ನೂ ನಡೆಯುತ್ತಿರುವ ಮಹಾರಾಷ್ಟ್ರದಲ್ಲಿ ಯಾವುದೇ ಅರ್ಹ ಮತದಾರರ ಹೆಸರನ್ನು ಆತುರದಲ್ಲಿ ಪಟ್ಟಿಯಿಂದ ತೆಗೆದುಹಾಕದಂತೆ ಚುನಾವಣಾಧಿಕಾರಿಗಳಿಗೆ ಸೂಚಿಸಲಾಗಿದೆ. ಹೆಸರು ಕೈಬಿಡುವ ಮುನ್ನ ಪರಿಶೀಲನೆ, ವಿಚಾರಣೆ ಹಾಗೂ ದಾಖಲೆ ಸಲ್ಲಿಸಲು ಅಗತ್ಯ ಅವಕಾಶ ಕಲ್ಪಿಸಬೇಕು ಎಂದು ಆಯೋಗ ನಿರ್ದೇಶಿಸಿದೆ.
ಮತದಾರರ ಪಟ್ಟಿಯಲ್ಲಿ ಹೆಸರು ಕೈತಪ್ಪಿರುವ ಅರ್ಹ ನಾಗರಿಕರು ಮತ್ತು ಹೊಸದಾಗಿ ೧೮ ವರ್ಷ ಪೂರೈಸಿ ಮತದಾನಕ್ಕೆ ಅರ್ಹರಾಗಿರುವ ಯುವಜನರಿಗೆ ನೋಂದಣಿ ಅವಕಾಶ ಕಲ್ಪಿಸುವುದೇ ಈ ವಿಶೇಷ ಅಭಿಯಾನದ ಉದ್ದೇಶ ಎಂದು ಚುನಾವಣಾ ಆಯೋಗ ತಿಳಿಸಿದೆ. ಎಸ್ಐಆರ್ನ ಅಂತಿಮ ಹಂತಗಳು ಪೂರ್ಣಗೊಂಡ ಬಳಿಕವೇ ದೇಶದಾದ್ಯಂತ ಮತದಾರರ ಪಟ್ಟಿಯ ಅಂತಿಮ ಚಿತ್ರಣ ಸ್ಪಷ್ಟವಾಗಲಿದೆ.
























