Home ಜಿಲ್ಲೆ ತುಮಕೂರು ನಶೆ ಮುಕ್ತ ಮಧುಗಿರಿ ಕ್ಷೇತ್ರ ನಿರ್ಮಾಣಕ್ಕೆ ಸಂಕಲ್ಪ: ಕೆಎನ್‌ಆರ್

ನಶೆ ಮುಕ್ತ ಮಧುಗಿರಿ ಕ್ಷೇತ್ರ ನಿರ್ಮಾಣಕ್ಕೆ ಸಂಕಲ್ಪ: ಕೆಎನ್‌ಆರ್

ಮಧುಗಿರಿ, ಆ. ೧- ಜು. ೩೧- ಮಧುಗಿರಿ ಕ್ಷೇತ್ರವನ್ನು ನಶೆಮುಕ್ತ ಕ್ಷೇತ್ರ ಮಾಡುವ ಸಂಕಲ್ಪ ಮಾಡಲಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್. ರಾಜಣ್ಣ ಹೇಳಿದರು.
ಪಟ್ಟಣದ ಕನ್ನಡ ಭವನದಲ್ಲಿರುವ ಕೆ.ಎನ್ ರಾಜಣ್ಣ ನವರ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್, ಮಧುಗಿರಿ ಉಪ ವಿಭಾಗದ ಪೊಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಡ್ರಗ್ಸ್ ಮುಕ್ತ ಕರ್ನಾಟಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ಷೇತ್ರವನ್ನು ಡ್ರಗ್ಸ್ ಮುಕ್ತಗೊಳಿಸಲು ಅಧಿಕಾರಗಳ ಜತೆ ಚರ್ಚಿಸಿದ್ದು, ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದಿಂದ ನಶೆ ಮುಕ್ತ ಕ್ಷೇತ್ರ ಮಾಡಲಾಗುವುದು ಎಂದರು.


ವಿದ್ಯಾರ್ಥಿಗಳು ಸ್ವಯಂ ನಿಯಂತ್ರಣ ಅಳವಡಿಸಿಕೊಳ್ಳಬೇಕು. ಡ್ರಗ್ಸ್ ಸೇವನೆಯಿಂದ ಮಾನಸಿಕ ದೌರ್ಬಲ್ಯ ಉಂಟಾಗುತ್ತದೆ. ಮಕ್ಕಳು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗಬಾರದು. ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಪ್ರತಿಯೊಬ್ಬ ಮಕ್ಕಳಿಗೂ ಉಚಿತವಾಗಿ ಅಗತ್ಯಕ್ಕೆ ತಕ್ಕಂತೆ ನೋಟ್‌ಬುಕ್, ಸಮವಸ್ತ್ರ ವಿತರಣೆ ಮತ್ತು ವಸತಿಯುಕ್ತ ಪಾಠ ಶಾಲೆಗಳನ್ನು ಪ್ರಾರಂಭಿಸಲಾಗಿದೆ ಎಂದರು.
ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಮಾತನಾಡಿ, ಯುವ ಜನತೆ ಕೆಟ್ಟ ಅಭ್ಯಾಸಗಳಿಗೆ ಬಲಿಯಾಗಬಾರದು. ಉತ್ತಮವಾದ ಆಹಾರ ಚಟುವಟಿಕೆಗಳು, ಉತ್ತಮ ಆರೋಗ್ಯ ಅತ್ಯಮೂಲ್ಯ. ಯುವಕರು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದೇ ಉತ್ತಮ ರೀತಿಯಲ್ಲಿ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಡಿವೈಎಸ್ಪಿ ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳಿಗೆ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ರೈಸ್ ಬೇಡ ಬ್ರೋ ಎನ್ನುವ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಡ್ರಗ್ಸ್ ಸೇವನೆಯಿಂದ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಯುವಕರು ದಾರಿ ತಪ್ಪುತ್ತಿದ್ದಾರೆ. ಯಾವುದೇ ಕಾರಣಕ್ಕೂ ಯುವಕರು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ಡ್ರಗ್ ಸೇವನೆಯಿಂದ ಮೆದುಳಿಗೆ ತೊಂದರೆ ಉಂಟಾಗುತ್ತದೆ ಎಂದರು.


ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಂದಿನಿ, ಆರೋಗ್ಯ ಶಿಕ್ಷಣಾಧಿಕಾರಿ ಧರಣೀಶ್‌ಗೌಡ, ತಾ.ಪಂ ಇಓ ಉತ್ತಮ್, ಬಿಇಓ ಹನುಮಂತರಾಯಪ್ಪ, ಮುಖಂಡ ಕುರುಬರಹಳ್ಳಿ ಹರ್ಷ, ಮಿಡಿಗೇಶಿ ಪಿಎಸ್‌ಐ ರವೀಂದ್ರ, ಕೊಡಿಗೇನಹಳ್ಳಿ ಪಿಎಸ್‌ಐ ರಾಜೇಶ್, ಮಧುಗಿರಿ ಪಿಎಸ್‌ಐ ಚಂದ್ರಶೇಖರ್, ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ರವಿಪ್ರಕಾಶ್, ವಲಯ ಅರಣ್ಯಾಧಿಕಾರಿ ಸುರೇಶ್ ಮತ್ತಿತರರು ಭಾಗವಹಿಸಿದ್ದರು.