Home ಜಿಲ್ಲೆ ತುಮಕೂರು ಸಾಮಾಜಿಕ ಪರಿವರ್ತನೆಯ ಹರಿಕಾರ ಅರಸು

ಸಾಮಾಜಿಕ ಪರಿವರ್ತನೆಯ ಹರಿಕಾರ ಅರಸು

ತರೀಕೆರೆ, ಆ. ೨೨- ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದ ಮಹಾನ್ ನಾಯಕರಾಗಿದ್ದು, ಸಮಾಜದಲ್ಲಿ ಶೋಷಣೆಗೆ ಒಳಗಾದವರನ್ನು ಮುಖ್ಯವಾಹಿನಿಗೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದು ತಹಶೀಲ್ದಾರ್ ರಶ್ಮಿ ಹೆಚ್.ಜೆ. ಹೇಳಿದರು.


ಪಟ್ಟಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪುರಸಭೆ ಹಾಗೂ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ, ಸಾಮಾಜಿಕ ಪರಿವರ್ತನೆಯ ಹರಿಕಾರ ಹಾಗೂ ಸಾಮಾಜಿಕ ನ್ಯಾಯದ ಪರ ಹೋರಾಡಿದ ದಿ. ಡಿ. ದೇವರಾಜ ಅರಸು ಅವರ ೧೧೧ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಯುವಜನರು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುವಂತಹ ದುಶ್ಚಟಗಳಿಗೆ ಒಳಗಾಗದೆ, ಜೀವನದಲ್ಲಿ ಸ್ಪಷ್ಟವಾದ ಗುರಿಯನ್ನು ಹೊಂದಬೇಕು. ದೇವರಾಜ ಅರಸು ಅವರ ಜೀವನ ಮತ್ತು ಸಾಧನೆಗಳನ್ನು ಆದರ್ಶವಾಗಿಟ್ಟುಕೊಂಡು ಮುನ್ನಡೆಯಬೇಕು ಎಂದು ಕರೆ ನೀಡಿದರು.


ದೇವರಾಜ ಅರಸು ವೇದಿಕೆಯ ಅಧ್ಯಕ್ಷ ಟಿ.ವಿ. ಶಿವಶಂಕರಪ್ಪ ಮಾತನಾಡಿ, ಇಂದಿನ ಯುವ ಸಮುದಾಯ ತಂದೆ-ತಾಯಿಯರನ್ನು ಪ್ರೀತಿ, ವಿಶ್ವಾಸದಿಂದ ನೋಡಿಕೊಳ್ಳುವ ಜವಾಬ್ದಾರಿಯನ್ನು ಮರೆಯಬಾರದು. ಪೋಷಕರನ್ನು ಕಡೆಗಣಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ವಿಷಾದನೀಯವಾಗಿದ್ದು, ಕುಟುಂಬದ ಬಾಂಧವ್ಯವನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.ದೇವರಾಜ ಅರಸು ಅವರು ಕೈಗೊಂಡ ಪ್ರಮುಖ ಸಾಮಾಜಿಕ ಸುಧಾರಣಾ ಕ್ರಮಗಳಿಂದ ದಲಿತರು ಮಲಹೊರುವ ಪದ್ಧತಿಯಿಂದ ಮುಕ್ತಿ ಪಡೆದರು. ಅದೇ ರೀತಿ ?ಉಳುವವನೇ ಭೂಮಿಯ ಒಡೆಯ? ಕಾಯ್ದೆಯ ಮೂಲಕ ಶೋಷಿತ ಸಮುದಾಯಗಳಿಗೆ ಭೂಮಿಯ ಹಕ್ಕು ದೊರೆಯುವಂತಾಯಿತು. ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದು ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಿದ ಅರಸು ಅವರ ಕೊಡುಗೆ ಅಪಾರವಾಗಿದೆ ಎಂದು ವಿವರಿಸಿದರು.


ಕಾರ್ಯಕ್ರಮದಲ್ಲಿ ಅಜ್ಜಂಪುರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ.ಕೆ. ವಿಜಯಕುಮಾರ್, ತರೀಕೆರೆ ಪುರಸಭೆ ಸದಸ್ಯ ದಾದಾಪೀರ್, ಬಿಇಒ ಪರಶುರಾಮಪ್ಪ, ಮುಖ್ಯಾಧಿಕಾರಿ ತಾಹೇರಾ ತಸ್ನೀಮ್, ಟಿ.ಆರ್. ಅಶೋಕ್ ರಾಜ್ ಅರಸ್, ಉಪವಿಭಾಗಾಧಿಕಾರಿ ನಟೇಶ್ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.ತರೀಕೆರೆ ಟೌನ್ ಕ್ಲಬ್ ವತಿಯಿಂದ ಅಧ್ಯಕ್ಷ ನರೇಂದ್ರ ಹಾಗೂ ಸದಸ್ಯರ ಸಹಯೋಗದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಟಿ.ಆರ್. ಅಶೋಕ್ ರಾಜ್ ಅರಸ್ ಸ್ವಾಗತಿಸಿದರು. ಲೋಕೇಶ್ ವಂದಿಸಿದರು.