
ಸಂಜೆವಾಣಿ ವಾರ್ತೆ,
ವಿಜಯಪುರ , ಜು.೪: ಕೇಂದ್ರ ಸರ್ಕಾರದ “ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಅಜೀವಿಕಾ ಮಿಷನ್ ಗ್ರಾಮೀಣ (ಗಿಃ-ಉ ಖಂಒ ಉ)” ಯೋಜನೆ ಜುಲೈ ೧ರಿಂದ ಜಾರಿಗೆ ಬಂದಿದ್ದು, ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ತಿಕೋಟಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಆನಂದಕುಮಾರ ಮ್ಯಾಗೇರಿ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ ಅವರು, ಯೋಜನೆಯಡಿ ಗ್ರಾಮೀಣ ಕುಟುಂಬಗಳಿಗೆ ಹಿಂದಿನ ೧೦೦ ದಿನಗಳ ಬದಲಾಗಿ ೧೨೫ ದಿನಗಳ ಉದ್ಯೋಗ ಭರವಸೆ ನೀಡಲಾಗಿದ್ದು, ದಿನಗೂಲಿಯನ್ನು ?೩೭೦ರಿಂದ ?೩೮೨ಕ್ಕೆ ಹೆಚ್ಚಿಸಲಾಗಿದೆ ಎಂದು ಹೇಳಿದರು. ಪುರುಷ ಮತ್ತು ಮಹಿಳಾ ಕೂಲಿಕಾರರಿಗೆ ಸಮಾನ ಕೂಲಿ ನೀಡಲಾಗುವುದು ಎಂದರು.
ಕೂಲಿಕಾರರ ವೇತನವನ್ನು ಗರಿಷ್ಠ ೧೫ ದಿನಗಳೊಳಗೆ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಪಾವತಿಯಲ್ಲಿ ವಿಳಂಬವಾದರೆ ಪರಿಹಾರಧನ ನೀಡುವ ವ್ಯವಸ್ಥೆಯೂ ಇದೆ ಎಂದು ತಿಳಿಸಿದರು.
ಯೋಜನೆಯಡಿ ಕೆರೆ, ಕಾಲುವೆ, ರಸ್ತೆ, ಶಾಲಾ ಆವರಣ ಗೋಡೆ ಸೇರಿದಂತೆ ಗ್ರಾಮಗಳ ಶಾಶ್ವತ ಆಸ್ತಿಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಉದ್ಯೋಗದ ಜೊತೆಗೆ ಗ್ರಾಮೀಣ ಅಭಿವೃದ್ಧಿಗೂ ಒತ್ತು ನೀಡಲಾಗಿದೆ ಎಂದು ಹೇಳಿದರು.
ತಿಕೋಟಾ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಯೋಜನೆ ಸಮರ್ಪಕವಾಗಿ ಜಾರಿಯಾಗಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಹಾಗೂ ಕ್ಷೇತ್ರಮಟ್ಟದ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಜೂನ್ ೩೦ರವರೆಗೆ ಮನರೇಗಾ ಯೋಜನೆಯಡಿ ಪ್ರಗತಿಯಲ್ಲಿದ್ದ ಕಾಮಗಾರಿಗಳನ್ನು ಹೊಸ ಯೋಜನೆಯ ನಿಯಮಾವಳಿಯಂತೆ ಯಾವುದೇ ಅಡಚಣೆ ಇಲ್ಲದೆ ಮುಂದುವರಿಸಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿದರು.
ಗ್ರಾಮೀಣ ಕೂಲಿಕಾರರು ಉದ್ಯೋಗಕ್ಕಾಗಿ ಹೊರ ಊರುಗಳಿಗೆ ವಲಸೆ ಹೋಗದೆ ತಮ್ಮ ಗ್ರಾಮದಲ್ಲಿಯೇ ಯೋಜನೆಯಡಿ ಉದ್ಯೋಗ ಪಡೆದುಕೊಳ್ಳಬೇಕು. ಎಲ್ಲಾ ನೋಂದಾಯಿತ ಕೂಲಿಕಾರರು ಇ-ಕೆವೈಸಿ ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ಹೊಸದಾಗಿ ಉದ್ಯೋಗ ಚೀಟಿ ಪಡೆಯಲು ಅರ್ಹರು ತಮ್ಮ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸುವAತೆ ಮ್ಯಾಗೇರಿ ಮನವಿ ಮಾಡಿದ್ದಾರೆ.
ತಾಲೂಕು ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಂಯೋಜಕ ಕಲ್ಲಪ್ಪ ನಂದರಗಿ ಮಾತನಾಡಿ, ಯೋಜನೆಯ ಕುರಿತು ಮನೆಮನೆಗೆ ತೆರಳಿ ಜನಜಾಗೃತಿ ಮೂಡಿಸಲಾಗುವುದು ಹಾಗೂ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ವ್ಯಾಪಕ ಪ್ರಚಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಹೊಸ ಜಾಬ್ ಕಾರ್ಡ್ಗಳು ವಿತರಿಸುವವರೆಗೆ ಈಗಾಗಲೇ ಮನರೇಗಾ ಯೋಜನೆಯಡಿ ನೀಡಿರುವ ಜಾಬ್ ಕಾರ್ಡ್ಗಳೇ ಮಾನ್ಯವಾಗಿದ್ದು, ಅವುಗಳ ಆಧಾರದ ಮೇಲೆ ಕೆಲಸ ಪಡೆಯಬಹುದು. ಇ-ಕೆವೈಸಿ ಪೂರ್ಣಗೊಳಿಸದ ಕೂಲಿಕಾರರಿಗೆ ಯೋಜನೆಯ ಸೌಲಭ್ಯ ದೊರೆಯುವುದಿಲ್ಲವಾದ್ದರಿಂದ ಎಲ್ಲರೂ ಸ್ವಯಂಪ್ರೇರಿತವಾಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು































