
ಆಳಂದ: ಮಣ್ಣಿನ ಫಲವತ್ತತೆ, ರೈತರ ಆರೋಗ್ಯ ಹಾಗೂ ಗ್ರಾಹಕರ ಸುರಕ್ಷಿತ ಆಹಾರಕ್ಕಾಗಿ ಸಾವಯವ ಕೃಷಿಯತ್ತ ರೈತರು ಹೆಚ್ಚು ಒಲವು ತೋರಬೇಕಾದ ಅಗತ್ಯವಿದೆ ಎಂದು ಕೃಷಿ ತಜ್ಞ ಡಾ. ರಾಜು ತೆಗ್ಗಳ್ಳಿ ಅಭಿಪ್ರಾಯಪಟ್ಟರು.
ತಾಲೂಕಿನ ನೇಗಿಲಯೋಗಿ ಸಾವಯವ ಕೃಷಿ ಪರಿವಾರ ವತಿಯಿಂದ ಮದಗುಣಕಿ ಗ್ರಾಮದ ಪ್ರಗತಿಪರ ರೈತ ರಾಜುಶೇಖರ ಅಣ್ಣಾರಾವ್ ಸಣ್ಣಮನಿ ಅವರ ತೋಟದಲ್ಲಿ ಆಯೋಜಿಸಿದ್ದ ಸಾವಯವ ಕೃಷಿ ಚರ್ಚಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಭೂಮಿಯಲ್ಲಿನ ಸಾವಯವ ಇಂಗಾಲದ ಪ್ರಮಾಣ ಕೇವಲ ಶೇ.೧ರಷ್ಟಿದ್ದು, ಅದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಉತ್ತಮ ಇಳುವರಿ ಹಾಗೂ ಮಣ್ಣಿನ ಫಲವತ್ತತೆ ಕಾಪಾಡಲು ಕನಿಷ್ಠ ಶೇ.೫ರಷ್ಟು ಸಾವಯವ ಇಂಗಾಲ ಇರಬೇಕಾಗಿದೆ. ರಾಸಾಯನಿಕ ಕೃಷಿಯ ಅತಿಯಾದ ಬಳಕೆಯಿಂದ ಮಣ್ಣಿನ ಜೀವಂತಿಕೆ ಕುಂಠಿತವಾಗುತ್ತಿದ್ದು, ಇದನ್ನು ಸರಿಪಡಿಸಲು ಸಾವಯವ ಕೃಷಿಯೇ ಪರಿಣಾಮಕಾರಿ ಮಾರ್ಗವಾಗಿದೆ ಎಂದು ತಿಳಿಸಿದರು.
ಸಾವಯವ ಕೃಷಿ ಆರಂಭಿಸುವ ಮೊದಲು ಅದರ ಸಾಧಕ-ಬಾಧಕಗಳನ್ನು ಸಮಗ್ರವಾಗಿ ತಿಳಿದುಕೊಳ್ಳಬೇಕು. ಕೇವಲ ಉತ್ಪಾದನೆಗೆ ಸೀಮಿತವಾಗದೆ, ಮೌಲ್ಯವರ್ಧನೆ, ವೈಜ್ಞಾನಿಕ ತಂತ್ರಜ್ಞಾನ, ಮಾರುಕಟ್ಟೆ ವ್ಯವಸ್ಥೆ ಹಾಗೂ ರೈತರ ಗುಂಪುಗಳ ರಚನೆಗೆ ಆದ್ಯತೆ ನೀಡಬೇಕು. ಸ್ಥಳೀಯ ಬೆಳೆಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಯುವ ಮೂಲಕ ಉತ್ತಮ ಮಾರುಕಟ್ಟೆ ನಿರ್ಮಿಸಿಕೊಂಡ ಯಶಸ್ವಿ ರೈತರ ಉದಾಹರಣೆಗಳನ್ನು ನೀಡಿದ ಅವರು, ಪ್ರತಿಯೊಬ್ಬ ರೈತರೂ ತಮ್ಮ ಪ್ರದೇಶಕ್ಕೆ ಹೊಂದುವ ಬೆಳೆಗಳನ್ನು ಆಯ್ಕೆ ಮಾಡಿಕೊಂಡು ಆರೋಗ್ಯಕರ ಆಹಾರ ಉತ್ಪಾದನೆಯೊಂದಿಗೆ ಆರ್ಥಿಕ ಲಾಭ ಗಳಿಸಬಹುದು ಎಂದರು.
ಚರ್ಚಾಕೂಟದಲ್ಲಿ ರೈತರು ಕೇಳಿದ ಭೂ ಫಲವತ್ತತೆ, ಜೀವಕೋಶ ಸಂರಕ್ಷಣೆ, ಸಾವಯವ ಗೊಬ್ಬರ ಬಳಕೆ ಹಾಗೂ ನೈಸರ್ಗಿಕ ಕೃಷಿ ಪದ್ಧತಿಗಳಿಗೆ ಸಂಬAಧಿಸಿದ ಪ್ರಶ್ನೆಗಳಿಗೆ ಡಾ. ತೆಗ್ಗಳ್ಳಿ ಸಮಗ್ರವಾಗಿ ಉತ್ತರಿಸಿ ರೈತರಿಗೆ ಪ್ರಾಯೋಗಿಕ ಸಲಹೆಗಳನ್ನು ನೀಡಿದರು.
ಮಾದನಹಿಪ್ಪರಗಾ ಶ್ರೀ ಶಿವಲಿಂಗೇಶ್ವರ ವಿರಕ್ತ ಮಠದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರಕೃತಿಯೊಂದಿಗೆ ಹೊಂದಾಣಿಕೆ ಸಾಧಿಸುವ ಕೃಷಿಯೇ ಮಾನವ ಸಮಾಜಕ್ಕೆ ಶಾಶ್ವತ ನೆಮ್ಮದಿ ತರುತ್ತದೆ ಎಂದು ಆಶೀರ್ವಚನದಲ್ಲಿ ಹೇಳಿದರು.
ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಯಲ್ಲಪ್ಪ ಇಂಗಳೆ ಮಾತನಾಡಿ, ಕೃಷಿ ಮತ್ತು ಪಶುಸಂಗೋಪನೆ ಪರಸ್ಪರ ಪೂರಕವಾಗಿದ್ದು, ಹೈನುಗಾರಿಕೆ ಹಾಗೂ ಸಾವಯವ ಕೃಷಿಯನ್ನು ಸಮನ್ವಯಗೊಳಿಸಿದರೆ ರೈತರಿಗೆ ಹೆಚ್ಚುವರಿ ಆದಾಯದ ಜೊತೆಗೆ ಗುಣಮಟ್ಟದ ಸಾವಯವ ಗೊಬ್ಬರವೂ ಲಭ್ಯವಾಗುತ್ತದೆ ಎಂದು ತಿಳಿಸಿದರು. ಇಲಾಖೆಯ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಪ್ರಗತಿಪರ ರೈತ ಮಲ್ಲಿನಾಥ ಪಾಟೀಲ ಮಾತನಾಡಿ, ಇಂದಿನ ಯುವಕರು ಕೃಷಿಯಿಂದ ದೂರ ಸರಿಯದೆ ಅದನ್ನು ಆಧುನಿಕ ಹಾಗೂ ಲಾಭದಾಯಕ ವೃತ್ತಿಯನ್ನಾಗಿ ರೂಪಿಸಬೇಕು. ತಮ್ಮ ಕೃಷಿ ಜೀವನದ ಅನುಭವಗಳನ್ನು ಹಂಚಿಕೊAಡ ಅವರು, ಹೊಸ ತಂತ್ರಜ್ಞಾನ ಮತ್ತು ಸಾವಯವ ಪದ್ಧತಿಯನ್ನು ಅಳವಡಿಸಿಕೊಂಡರೆ ಕೃಷಿಯಲ್ಲಿಯೇ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ರೈತ ಮಿತ್ರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿನಾಥ ಪರೆಣಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ನಗರ ಜೀವನ ತೊರೆದು ಊರಿಗೆ ಮರಳಿ ಕೃಷಿ ಕೈಗೊಂಡ ಬಳಿಕ ಬದುಕಿನಲ್ಲಿ ಮಹತ್ತರ ಬದಲಾವಣೆ ಕಂಡಿದ್ದೇನೆ. ಇಂದಿನ ಪರಿಸ್ಥಿತಿಯಲ್ಲಿ ಆರೋಗ್ಯಕರ ಜೀವನಕ್ಕೆ ಸಾವಯವ ಕೃಷಿಯೇ ಅನಿವಾರ್ಯವಾಗಿದೆ ಎಂದು ಹೇಳಿದರು.
ರೈತರು ಕಾಶಿನಾಥ ಗೊಳೆ (ವಿ.ಕೆ.ಸಲಗರ), ಗುಂಡಪ್ಪ ಗುಳೆಗುಂಡ, ಅಭಿಷೇಕ ಬಿರಾದಾರ, ಆನಂದ ಬಿರಾದಾರ ಸೇರಿದಂತೆ ಹಲವರು ತಮ್ಮ ಸಾವಯವ ಕೃಷಿಯ ಅನುಭವಗಳನ್ನು ಹಂಚಿಕೊAಡು, ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನ ಹಾಗೂ ಹೆಚ್ಚಿನ ಆದಾಯ ಗಳಿಸಿರುವ ಉದಾಹರಣೆಗಳನ್ನು ವಿವರಿಸಿದರು.
ಸಾವಯವ ಕೃಷಿ ಸಲಹೆಗಾರ ಮಲ್ಲಿನಾಥ ಹೆಮಾಣೆ (ಕಲಬುರಗಿ) ಸಾವಯವ ಕೃಷಿಯ ತಾಂತ್ರಿಕ ಅಂಶಗಳು, ಭೂಮಿಯ ಆರೋಗ್ಯ ಕಾಪಾಡುವ ವಿಧಾನಗಳು ಹಾಗೂ ಮಾರುಕಟ್ಟೆ ಸಾಧ್ಯತೆಗಳ ಕುರಿತು ವಿಸ್ತೃತ ಮಾಹಿತಿ ನೀಡಿದರು.
ನೇಗಿಲಯೋಗಿ ಸಾವಯವ ಕೃಷಿ ಪರಿವಾರದ ಅಧ್ಯಕ್ಷ ಬಸವರಾಜ ಪವಾಡಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಡಿಮೆ ವೆಚ್ಚದಲ್ಲಿ ಅಧಿಕ ಉತ್ಪಾದನೆ, ರೈತರ ಆರೋಗ್ಯ ಹಾಗೂ ಗ್ರಾಹಕರಿಗೆ ವಿಷಮುಕ್ತ ಆಹಾರ ಒದಗಿಸುವ ಉದ್ದೇಶದಿಂದ ಪರಿವಾರ ಹಲವು ವರ್ಷಗಳಿಂದ ರೈತರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದು ಹೇಳಿದರು. ತಾವು ಅನುಸರಿಸಿರುವ ಯಶಸ್ವಿ ಕೃಷಿ ವಿಧಾನಗಳನ್ನು ರೈತರಿಗೆ ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಚನ್ನಬಸಪ್ಪ ಪಾಟೀಲ (ನಸೀರವಾಡಿ), ರಾಜು ತಲಂಗೆ (ಸುಂಟನೂರು), ಜಯಪ್ರಕಾಶ ಆರ್. ಪಾಟೀಲ, ಮಲ್ಲಿನಾಥ ಪಾಟೀಲ ಸಕ್ಕರಗಾ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ರೈತರು ಹಾಗೂ ರೈತ ಮಹಿಳೆಯರು ಭಾಗವಹಿಸಿ ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಸಾಮಾಜಿಕ ಹೋರಾಟಗಾರ ಮಹಾಂತೇಶ ಸಣ್ಣಮನಿ ಸ್ವಾಗತಿಸಿದರು. ರೈತ ಸುಲ್ತಾನಪ್ಪ ವಾಗ್ದರಿ ಕಾರ್ಯಕ್ರಮ ನಿರೂಪಿಸಿದರು. ಪ್ರಗತಿಪರ ರೈತ ರಾಜುಶೇಖರ ಅಣ್ಣಾರಾವ್ ಸಣ್ಣಮನಿ ವಂದಿಸಿದರು.
































