
ಸಂಜೆ ವಾಣಿ ವಾರ್ತೆ
ಜಮಖಂಡಿ, ಜು. ೨೬: ತಮ್ಮ ವಿರುದ್ಧ ಮಹಿಳಾ ಮೋರ್ಚಾ ಸದಸ್ಯೆಯರು ನಡೆಸಿದ ಪತ್ರಿಕಾಗೋಷ್ಠಿಯ ಹಿಂದೆ ಕೆಲ ರಾಜಕೀಯ ವ್ಯಕ್ತಿಗಳ ಪ್ರಚೋದನೆ ಹಾಗೂ ಆಮಿಷವಿದೆ ಎಂದು ಬಿಜೆಪಿ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ್ ಆಲಮೇಲಕರ ಆರೋಪಿಸಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷೆ ಸವಿತಾ ಕಲ್ಯಾಣಿ ಹಾಗೂ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯೆ ಸುಜಾತಾ ಸಾರ್ವಾಡ್ ಸೇರಿದಂತೆ ಕೆಲವರು ತಮ್ಮ ವಿರುದ್ಧ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಯಾರೋ ಹೇಳಿಕೊಟ್ಟ ವಿಷಯಗಳನ್ನು ಆಧರಿಸಿ ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನ ನಡೆಸಲಾಗಿದೆ ಎಂದು ಹೇಳಿದರು.
ಜನವರಿ ತಿಂಗಳಲ್ಲಿ ಪಕ್ಷದ ಸಂಘಟನೆ ಹಾಗೂ ಆಂತರಿಕ ಅಸಮಾಧಾನದ ಹಿನ್ನೆಲೆಯಲ್ಲಿ ಅನೇಕ ಹಿರಿಯ ಕಾರ್ಯಕರ್ತರೊಂದಿಗೆ ಸಾಮೂಹಿಕ ರಾಜೀನಾಮೆ ನೀಡಲಾಗಿತ್ತು. ಆ ಸಭೆಗೆ ಸಂಬAಧಿಸಿದ ಮಹಿಳೆಯರನ್ನು ತಾವು ಆಹ್ವಾನಿಸಿರಲಿಲ್ಲ. ಅವರು ಸ್ವಯಂಪ್ರೇರಿತವಾಗಿ ಸಭೆಗೆ ಬಂದಿದ್ದರು ಎಂದು ತಿಳಿಸಿದರು.
ಆರ್‌ಟಿಐ ಮೂಲಕ ಮಾಹಿತಿ ಕೇಳಿದ ಬಳಿಕ ಅರ್ಜಿಯನ್ನು ಹಿಂಪಡೆಯುವAತೆ ಒತ್ತಡ ಹಾಗೂ ಬೆದರಿಕೆ ಬಂದಿತ್ತು. ಅದನ್ನು ಒಪ್ಪದ ಕಾರಣವೇ ತಮ್ಮ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಂಬ ಅನುಮಾನ ವ್ಯಕ್ತಪಡಿಸಿದರು.
ತಮ್ಮ ವಿರುದ್ಧದ ಆರೋಪಗಳಿಗೆ ಸಂಬAಧಿಸಿದ ಆಡಿಯೋ ಹಾಗೂ ವಿಡಿಯೋ ದಾಖಲೆಗಳು ತಮ್ಮ ಬಳಿ ಇದ್ದು, ಅಗತ್ಯವಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಪಕ್ಷಕ್ಕಾಗಿ ಹಲವು ವರ್ಷಗಳಿಂದ ದುಡಿದ ಕಾರ್ಯಕರ್ತರನ್ನು ಕಡೆಗಣಿಸಿ, ಮಹಿಳೆಯರನ್ನು ಮುಂದಿಟ್ಟು ರಾಜಕೀಯ ಷಡ್ಯಂತ್ರ ನಡೆಸುವುದು ಸರಿಯಲ್ಲ. ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ ಎಂದು ಉಮೇಶ್ ಆಲಮೇಲಕರ ಹೇಳಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಗದಗೆಪ್ಪ ಧಾರವಾಡ, ವಿಠ್ಠಲ ಕವಲಗಿಕರ, ಲಕ್ಷ್ಮಣ ಬಂಕಿ, ರಾಜೇಶ ಲಗಳಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
































