
ಕೊರಟಗೆರೆ, ಜು. ೧೮- ಇತಿಹಾಸ ಪ್ರಸಿದ್ದ ಪುಣ್ಯ ಕ್ಷೇತ್ರವಾದ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದೇವಾಲಯ ರಾಜಗೋಪುರದ ಕಟ್ಟಡ ಕಾಮಗಾರಿ ಭರದಿಂದ ಸಾಗುತ್ತಿದ್ದು, ಆಂಧ್ರ ಪ್ರದೇಶದ ಉದ್ಯಮಿ ವೆಂಕಟೇಶ್ ಅವರು ಗೋಪುರ ನಿರ್ಮಾಣಕ್ಕೆ ೫ ಲಕ್ಷ ದೇಣಿಗೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಶ್ವತ್ಥ್‌ನಾರಾಯಣ್, ನಮ್ಮ ಕೋಡ್ಲಹಳ್ಳಿ ಗ್ರಾಮದ ವಾಸಿಯಾದ ಕೋಟೆ ವೆಂಕಟಚಲಪ್ಪ ಅವರ ಹೆಸರಿನಲ್ಲಿ ಆಂಧ್ರ ಪ್ರದೇಶದಲ್ಲಿ ಉದ್ಯಮಿಯಾಗಿರುವ ವೆಂಕಟೇಶ್ ಅವರು ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದೇವಾಲಯದ ರಾಜಗೋಪುರಕ್ಕೆ ೫ ಲಕ್ಷ ರೂ. ದೇಣಿಗೆ ನೀಡಿದ್ದು, ಅವರ ಕುಟುಂಬಕ್ಕೆ ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ಸದಾ ಒಳಿತು ಮಾಡಲಿ ಎಂದು ತಿಳಿಸಿದರು.
ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ಅಭಿವೃದ್ಧಿ ಸೇವಾ ಸಮಿತಿ ಅಧ್ಯಕ್ಷ ರಾಮಮೂರ್ತಿ ಮಾತನಾಡಿ, ಸಾವಿರಾರು ವರ್ಷಗಳ ಪುರಾತನ ದೇವಾಲಯವನ್ನು ಅಭಿವೃದ್ಧಿಪಡಿಸಲು ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ಅಭಿವೃದ್ಧಿ ಸೇವಾ ಸಮಿತಿಯನ್ನು ರಚಿಸಲಾಗಿದ್ದು, ಆಂಧ್ರಪ್ರದೇಶದ ಉದ್ಯಮಿ ವೆಂಕಟೇಶ್ ಅವರು ಗೋಪುರ ನಿರ್ಮಾಣಕ್ಕೆ ೫ ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಈಗಾಗಲೇ ದೇವಸ್ಥಾನದ ರಾಜಗೋಪುರ ಕಾಮಗಾರಿ ನಡೆಯುತ್ತಿದ್ದ ೧ ಕೋಟಿ ಗೂ ಅಧಿಕ ಹಣ ಬೇಕಾಗಿರುವುದರಿಂದ ಇನ್ನಷ್ಟು ದಾನಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಮಿತಿಯ ಜಯರಾಮು, ಎಲ್. ರಾಜಣ್ಣ, ಮಹಾಲಿಂಗಪ್ಪ, ಉಮಾಶಂಕರ್, ಟಿ.ಸಿ.ರಾಮಯ್ಯ, ಶ್ರೀನಿವಾಸ್, ಪುರೋಹಿತರಾದ ರಾಮಾಚಾರ್ಯ ಮತ್ತಿತರರು ಉಪಸ್ಥಿತರಿದ್ದರು.


































