
ಬೆಂಗಳೂರು, ಅ. 13: ಕರ್ನಾಟಕ ರಾಜ್ಯ ಕುಸ್ತಿ ಸಂಸ್ಥೆಯ ಅಧ್ಯಕ್ಷರಾಗಿ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಅವರು ಸತತ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ನಡೆದ ಸಂಸ್ಥೆಯ 2026-30ರ ಅವಧಿಯ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ಅವರು ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆಯಾದರು.
ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿವೃತ್ತ ನ್ಯಾಯಮೂರ್ತಿ ರಾಮಚಂದ್ರ ಎಂ ಚುನಾವಣಾ ಫಲಿತಾಂಶದ ಕುರಿತು ಮಾಹಿತಿ ನೀಡಿದರು.
ಗುಣರಂಜನ್ ಶೆಟ್ಟಿ ಅವರೊಂದಿಗೆ ಹಿರಿಯ ಉಪಾಧ್ಯಕ್ಷರಾಗಿ ನಿತ್ಯಾನಂದ ಶೆಟ್ಟಿ, ಉಪಾಧ್ಯಕ್ಷರಾಗಿ ಪ್ರಸಾದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಜೆ. ಶ್ರೀನಿವಾಸ ಹಾಗೂ ಖಜಾಂಚಿಯಾಗಿ ಶ್ರೀನಿವಾಸ ಅಂಗಾರಕೋಡಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರು, ಜಂಟಿ ಕಾರ್ಯದರ್ಶಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ನೂತನ ತಂಡವನ್ನು 2026?30ರ ಅವಧಿಗೆ ಆಯ್ಕೆ ಮಾಡಲಾಗಿದೆ.
ಚುನಾವಣೆಯನ್ನು ನಿವೃತ್ತ ನ್ಯಾಯಮೂರ್ತಿ ರಾಮಚಂದ್ರ ಎಂ. ಅವರು ಚುನಾವಣಾಧಿಕಾರಿಯಾಗಿ ನಡೆಸಿದರು. ಡಬ್ಲ್ಯೂ ಎಫ್ ಐ ಉಪಾಧ್ಯಕ್ಷ ವಿ.ಎನ್. ಪ್ರಸೂದ್ ಅವರು ಡಬ್ಲ್ಯೂ ಎಫ್ ಐ ವೀಕ್ಷಕರಾಗಿ ಹಾಗೂ ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಿದ್ಯಾ ವೈ. ಅವರು ಸರ್ಕಾರಿ ವೀಕ್ಷಕರಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಉಪಸ್ಥಿತರಿದ್ದರು.
ಸತತ ಎರಡನೇ ಅವಧಿಗೆ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿರುವ ಗುಣರಂಜನ್ ಶೆಟ್ಟಿ ಅವರು ರಾಜ್ಯದಲ್ಲಿ ಕುಸ್ತಿ ಕ್ರೀಡೆಯನ್ನು ಇನ್ನಷ್ಟು ಸಂಘಟಿತವಾಗಿ ಬೆಳೆಸುವುದು, ಜಿಲ್ಲಾ ಮತ್ತು ಗ್ರಾಮೀಣ ಮಟ್ಟದಲ್ಲಿ ಪ್ರತಿಭಾವಂತ ಕುಸ್ತಿಪಟುಗಳನ್ನು ಗುರುತಿಸುವುದು, ಯುವ ಕ್ರೀಡಾಪಟುಗಳಿಗೆ ಹೆಚ್ಚಿನ ಸ್ಪರ್ಧಾ ಮತ್ತು ತರಬೇತಿ ಅವಕಾಶಗಳನ್ನು ಕಲ್ಪಿಸುವುದು ಹಾಗೂ ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಸಾಧನೆಯನ್ನು ಹೆಚ್ಚಿಸುವುದು ಸಂಸ್ಥೆಯ ಮುಂದಿನ ಆದ್ಯತೆಯಾಗಲಿದೆ ಎಂದು ಹೇಳಿದರು.
ಕರ್ನಾಟಕಕ್ಕೆ ಸಾಂಪ್ರದಾಯಿಕ ಕುಸ್ತಿಯ ಗಟ್ಟಿಯಾದ ಪರಂಪರೆ ಇದ್ದು, ಅದನ್ನು ಆಧುನಿಕ ಸ್ಪರ್ಧಾತ್ಮಕ ಕುಸ್ತಿಯೊಂದಿಗೆ ಜೋಡಿಸಿ ಹೊಸ ಪೀಳಿಗೆಯ ಕ್ರೀಡಾಪಟುಗಳನ್ನು ರೂಪಿಸುವ ನಿಟ್ಟಿನಲ್ಲಿ ನೂತನ ಕಾರ್ಯಕಾರಿ ಸಮಿತಿ ಕಾರ್ಯನಿರ್ವಹಿಸಲಿದೆ ಎಂದರು.

























