
ಪುತ್ತೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆಯನ್ನು ಮರು ಪರಿಶೀಲನೆಗೊಳಿಸುವ ಕಾರ್ಯ ಪುತ್ತೂರಿನಲ್ಲಿ ಮೆಸ್ಕಾಂ ಇಲಾಖೆಯ ಮೂಲಕ ನಡೆಯುತ್ತಿದ್ದು, ಈಗಾಗಲೇ ಶೇ. ೮೦ರಷ್ಟು ಪೂರ್ಣಗೊಂಡಿದೆ. ಶೇ. ೨೦ರಷ್ಟು ಬಾಕಿಯಾಗಿದ್ದು ತಕ್ಷಣವೇ ಎಲ್ಲಾ ಫಲಾನುಭವಿಗಳು ತಮ್ಮ ದಾಖಲೆಗಳೊಂದಿಗೆ ಪರಿಶೀಲನೆಗೆ ಒಳಪಟ್ಟು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪುತ್ತೂರು ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ತಿಳಿಸಿದ್ದಾರೆ.
ತಾಲೂಕಿನಾದ್ಯಂತ ಒಟ್ಟು ೬೦,೦೫೦ ಮಂದಿ ಗೃಹಜ್ಯೋತಿ ಉಚಿತ ಯೋಜನೆಯ ಫಲಾನುಭವಿಗಳಾಗಿದ್ದು, ತಾಲೂಕಿಗೆ ಕಳೆದ ೩ ವರ್ಷಗಳಲ್ಲಿ ರೂ. ೧೨೦,೬೦,೦೧,೦೦೦ ಪಾವತಿಸಲಾಗಿದೆ. ಕಳೆದ ವರ್ಷ ೧೦ ಸಾವಿರ ಫಲಾನುಭವಿಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮರು ಪರಿಶೀಲನೆ ಕಾರ್ಯ ನಡೆಯುತ್ತಿದ್ದು, ಆಗಸ್ಟ್ ಅಂತ್ಯದ ವರೆಗೆ ಪರಿಶೀಲನೆಗೆ ಅವಕಾಶ ಕಲ್ಪಿಸಲಾಗಿದೆ. ಮೆಸ್ಕಾ ಇಲಾಖೆಯ ಸಿಬ್ಬಂದಿಗಳು ಮೆಸ್ಕಾಂ ಕಚೇರಿ, ಗ್ರಾಮ ಪಂಚಾಯತ್ ಕಚೇರಿ ಹಾಗೂ ಮನೆ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ಗ್ರಾಮಾಂತರ ಪ್ರದೇಶಗಳಲ್ಲಿ ಈಗಾಗಲೇ ಶೇ. ೭೦ರಷ್ಟು ಪರಿಶೀಲನೆ ಕಾರ್ಯ ಪೂರ್ಣಗೊಂಡಿದೆ. ಆದಾಗ್ಯೂ ಗ್ರಾಮಾಂತರದಲ್ಲಿ ಇನ್ನೂ ೨೦ ಸಾವಿರ ಫಲಾನುಭವಿಗಳು ಇನ್ನೂ ಪರಿಶೀಲನೆಗೆ ಒಳಪಡಲು ಬಾಕಿಯಾಗಿದ್ದಾರೆ. ನಗರ ಪ್ರದೇಶದಲ್ಲಿ ೪೬೧೩ ಫಲಾನುಭವಿಗಳು ಇನ್ನೂ ಪರಿಶೀಲನೆಗೆ ಒಳಪಟ್ಟಿಲ್ಲ. ಗ್ರಾಮಾಂತರ ಮತ್ತು ನಗರ ಸೇರಿದಂತೆ ಒಟ್ಟು ೨೪೬೧೩ ಮಂದಿ ಪರಿಶೀಲನೆಗೆ ಬಾಕಿ ಉಳಿದಿದ್ದಾರೆ. ಶೇ. ೧೦೦ ಪರಿಶೀಲನೆಗೆ ಒಳಪಡಿಸುವ ನಿಟ್ಟಿನಲ್ಲಿ ಬಾಕಿ ಉಳಿದಿರುವ ಎಲ್ಲರೂ ಸಹಕರಿಸಿ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.
ಗ್ಯಾರಂಟಿ ಕಚೇರಿಯಲ್ಲಿ ವ್ಯವಸ್ಥೆ:
ನಗರದ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಆ.೩ರಿಂದ ೫ರ ತನಕ ಮೂರು ದಿನಗಳ ಕಾಲ ಪುತ್ತೂರು ತಾಪಂ ಕಚೇರಿಯಲ್ಲಿರುವ ಗ್ಯಾರಂಟಿ ಕಚೇರಿಯಲ್ಲಿ ಪರಿಶೀಲನೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನೂ ಪರಿಶೀಲನೆಗೆ ಒಳಪಡದ ನಗರದ ಫಲಾನುಭವಿಗಳು ಅಗತ್ಯ ದಾಖಲೆಗಳೊಂದಿಗೆ ಆಗಮಿಸಿ ಪರಿಶೀಲನೆಗೆ ಒಳಪಡಬಹುದಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಈ ಬಗ್ಗೆ ಜನರಿಗೆ ಏನಾದರೂ ಸಮಸ್ಯೆಗಳಿದ್ದಲ್ಲಿ ತನಗೆ ಅಥವಾ ಗ್ಯಾರಂಟಿ ಸಮಿತಿ ಸದಸ್ಯರಲ್ಲಿ ತಿಳಿಸಿದಲ್ಲಿ ಅವರ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ತಿಳಿಸಿದ್ದಾರೆ. ಮೆಸ್ಕಾಂ ಅಧಿಕಾರಿ ರಾಜೇಶ್ ಉಪಸ್ಥಿತರಿದ್ದರು,


































