Home ಜಿಲ್ಲೆ ಮಂಗಳೂರು ನೀವು ಕುಟುಂಬದ ಯಜಮಾನಿಯಲ್ಲ..! ಐತ್ತೂರು ಮಹಿಳೆ ‘ಗೃಹಲಕ್ಷ್ಮಿ ವಂಚಿತೆ

ನೀವು ಕುಟುಂಬದ ಯಜಮಾನಿಯಲ್ಲ..! ಐತ್ತೂರು ಮಹಿಳೆ ‘ಗೃಹಲಕ್ಷ್ಮಿ ವಂಚಿತೆ

ಪುತ್ತೂರು; ಈಕೆಯದ್ದು ಕಡುಬಡತನ. ಅವರಿವರ ಮನೆಯಲ್ಲಿ ಕೂಲಿ ಕೆಲಸ. ಆರೋಗ್ಯವೂ ಅಷ್ಟಕ್ಕಷ್ಟೆ. ಮನೆಯಲ್ಲಿ ಈಕೆಯನ್ನು ಬಿಟ್ಟರೆ ಬೇರೆ ಯಾರೂ ಇಲ್ಲ. ಒಬ್ಬಂಟಿಯಾಗಿರುವ ಈ ವಿಧವೆ ಮಹಿಳೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಂಚ ಗ್ಯಾರಂಟಿಯಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಭಾಗ್ಯದಿಂದ ವಂಚಿತರಾಗಿದ್ದಾರೆ.
ಕಡಬ ತಾಲೂಕಿನ ಐತ್ತೂರು ಗ್ರಾಮದ ಪಂಜೋಡಿ ಎಂಬಲ್ಲಿನ ನಿವಾಸಿಯಾದ ಸುಶೀಲ ಅವರು ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಕಳೆದ ೩ ವರ್ಷಗಳಿಂದ ಪರದಾಡುತ್ತಿದ್ದಾರೆ. ಯಾವ ರೀತಿಯಲ್ಲೂ ಅವರ ಅರ್ಜಿ ಸಲ್ಲಿಕೆಯಾಗುತ್ತಿಲ್ಲ. ಈ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿಯೂ ಈ ತನಕ ಇಲಾಖೆಯಿಂದ ಸ್ಪಂಧನೆ ಸಿಕ್ಕಿಲ್ಲ. ಸಿಡಿಪಿಒ ಇಲಾಖೆಯಲ್ಲಿ ಈ ಬಗ್ಗೆ ಮಾಹಿತಿ ಕೇಳಿದರೆ ಅವರು ಅರ್ಜಿ ಸಲ್ಲಿಕೆ ಮಾಡಿಲ್ಲ. ಹಾಗಾಗಿ ಯೋಜನೆಯಿಂದ ಹಿಂದೆ ಉಳಿದಿದ್ದಾರೆ ಎಂಬ ಮಾಹಿತಿ ಸಿಗುತ್ತಿದೆ.
ನೀವು ಕುಟುಂಬದ ಯಜಮಾನಿಯಲ್ಲ..!
ಗಂಡ ರೇಗಪ್ಪ ಗೌಡ ಅವರು ಮೃತಪಟ್ಟ ಬಳಿಕ ಈ ಮನೆಯಲ್ಲಿ ಸುಶೀಲಾ ಒಂಟಿ ಬದುಕು ನಡೆಸುತ್ತಿದ್ದಾರೆ. ಇವರ ಬಳಿ ರೇಷನ್ ಕಾರ್ಡು, ಆಧಾರ್ ಸೇರಿದಂತೆ ಎಲ್ಲಾ ಬಗೆಯ ದಾಖಲೆಗಳೂ ಇವೆ. ಮನೆಯ ಯಜಮಾನಿಗೆ ಸಿಗಬೇಕಾದ ಅಕ್ಕಿ ಕೂಡಾ ಸಿಗುತ್ತಿದೆ. ಅಕ್ಕಿ ಸಿಕ್ಕಿದರೆ ಆಕೆ ಮನೆಯ ಯಜಮಾನಿ ಅಂತಲೇ ಲೆಕ್ಕ. ಆಹಾರ ಇಲಾಖೆಯ ಪ್ರಕಾರ ಈಕೆಯೇ ಮನೆಯ ಯಜಮಾನಿ. ಆದರೆ ಗೃಹಲಕ್ಷಿ ಯೋಜನೆಗೆ ಆನ್‌ಲೈನ್ ಮೂಲಕ ಆರ್ಜಿ ಸಲ್ಲಿಸುವಾಗ ಮಾತ್ರ ನೀವು ಕುಟುಂಬದ ಯಜಮಾನಿಯಲ್ಲ ಆಗಿರುವುದಿಲ್ಲ. ಹಾಗಾಗಿ ಗೃಹಲಕ್ಷ್ಮಿ ಯೋಜನೆಗೆ ನೀವು ಅರ್ಹರಲ್ಲ ಎಂಬ ಮಾಹಿತಿ ಬರುತ್ತಿದೆ. ಗೃಹಲಕ್ಷ್ಮಿ ಯೋಜನೆ ಆರಂಭವಾದಂದಿನಿಂದಲೂ ಹಲವಾರು ಬಾರಿ ಅರ್ಜಿ ಸಲ್ಲಿಸಲು ಪ್ರಯತ್ನ ಪಟ್ಟಿರುವ ಸುಶೀಲಾ ಅವರ ಸಮಸ್ಯೆಗೆ ಯಾರೂ ಪರಿಹಾರ ನೀಡುವ ಪ್ರಯತ್ನ ಮಾಡಿಲ್ಲ. ಆಹಾರ ಇಲಾಖೆ ಅವರ ರೇಷನ್ ಕಾರ್ಡು ಅಪ್ಟೇಡ್ ವ್ಯವಸ್ಥೆಯಲ್ಲಿ ಇದೆ ಎಂದು ಸ್ಪಷ್ಟ ಪಡಿಸಿದ್ದಾರೆ. ಹಾಗಾದರೆ ಅರ್ಜಿ ಸಲ್ಲಿಕೆಗೆ ಆಗದೇ ಇರುವ ಕಾರಣ ಏನು ಎಂಬುವುದು ಯಾರಿಗೂ ಅರ್ಥವಾಗಿಲ್ಲ. ಇಲ್ಲಿರಬಹುದಾದ ತಾಂತ್ರಿಕ ಸಮಸ್ಯೆಯ ಮೂಲ ಹುಡುಕುವ ಪ್ರಯತ್ನವೂ ನಡೆದಿಲ್ಲ.
ಈ ಮಹಿಳೆಯ ಪಡಿತರ ಕಾರ್ಡಿನಲ್ಲಿ ಈಕೆಯ ಹೆಸರು ಫೋಟೊ ಮಾತ್ರ ಇದೆ. ಕಡಬ ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿಗೂ ಈಗಾಗಲೇ ಅವರು ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಸಿಗುವಂತೆ ಮಾಡಿ ಎಂದು ಮನವಿ ನೀಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೂ ವಿನಂತಿ ಮಾಡಿದ್ದಾರೆ. ಸ್ಥಳೀಯ ಆಡಳಿತ ವ್ಯವಸ್ಥೆಗೂ ದೂರು ನೀಡಿದ್ದಾರೆ. ಆದರೆ ಯಾವ ಪ್ರಯೋಜನವೂ ಆಗಿಲ್ಲ. ಇದೀಗ ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೂ ಮನವಿ ಮಾಡಲು ತಯಾರಿ ನಡೆಸಿದ್ದಾರೆ. ಒಂಟಿ ಮಹಿಳೆಯಾಗಿ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಸುಶೀಲಾ ಅವರು ಬದುಕುವುದಕ್ಕೆ ಹರಸಾಹಸ ಪಡುತ್ತಿದ್ದಾರೆ. ಅವರಿಗೆ ಬರುತ್ತಿರುವ ವಿಧವಾ ವೇತನ ಜತೆಗೆ ಅನಾರೋಗ್ಯದ ನಡುವೆಯೂ ಕೂಲಿ ಕೆಲಸ ಬದುಕಿಗೆ ದಾರಿಯಾಗಿದೆ. ಗೃಹಲಕ್ಷ್ಮಿ ಗಾಗಿ ಕಾಯುತ್ತಿರುವ ಅವರ ಕನಸಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಇಲಾಖೆ ಇನ್ನಾದರೂ ಪ್ರಯತ್ನ ಪಡಬಹುದು ಎಂಬ ಆಶಾವಾದ ಇನ್ನೂ ಅವರಲ್ಲಿದೆ. ರೇಷನ್ ಕಾರ್ಡಿನಲ್ಲಿರುವ ತಾಂತ್ರಿಕ ಸಮಸ್ಯೆಯ ಮೂಲ ಹುಡುಕುವ ಕೆಲಸಕ್ಕೆ ಇಲಾಖೆ ಹಾಗೂ ಗ್ಯಾರಂಟಿ ಯೋಜನೆಯ ಅನುಷ್ಟಾನ ಸಮಿತಿ ಪ್ರಯತ್ನ ಮಾಡಬೇಕಾಗಿದೆ. ಆ ಮೂಲಕ ಅರ್ಹ ಫಲಾನುಭವಿ ಗೃಹಲಕ್ಷ್ಮಿ ಯೋಜನೆಯಿಂದ ವಂಚಿತರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಹೊರಬೇಕಾಗಿದೆ.
ಗೃಹಲಕ್ಷ್ಮಿ ಬದುಕಿಗಾಸರೆ…
ನನಗೆ ಯಾರೂ ಇಲ್ಲ. ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದೇನೆ. ನಾನು ಕೆಲಸಕ್ಕೆ ಹೋಗುವ ಮನೆಗಳ ಯಜಮಾನಿಯರು ಗೃಹಲಕ್ಷ್ಮಿ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಆದರೆ ನನಗೆ ಸಿಕ್ಕಿಲ್ಲ. ಎರಡು ಬಾರಿ ಪುತ್ತೂರು ಸಿಡಿಪಿಒ ಕಚೇರಿಗೂ ಹೋಗಿದ್ದೇನೆ. ಅಲ್ಲಿ ನಿಮ್ಮ ಅರ್ಜಿಯನ್ನು ಬೆಂಗಳೂರಿಗೆ ಕಳಿಸಬೇಕಷ್ಟೆ ಎಂದು ಹೇಳಿದ್ದರು. ಬಳಿಕ ಏನಾಗಿದೆ ಎಂದು ಗೊತ್ತಿಲ್ಲ. ಆದರೆ ಪ್ರಯೋಜನ ಮಾತ್ರ ಆಗಿಲ್ಲ. ಗಂಡನನ್ನು ಕಳೆದುಕೊಂಡ ನನಗೆ ಮಕ್ಕಳೂ ಇಲ್ಲ. ಆರೋಗ್ಯವೂ ಸರಿಯಾಗಿಲ್ಲ. ಗೃಹಲಕ್ಷ್ಮಿಯಿಂದ ಹಣ ಸಿಕ್ಕಿದರೆ ಬದುಕಾದರೂ ಸಾಗಿಸಬಹುದು ಎಂಬ ಆಶೆ- ಸುಶೀಲಾ ಪಂಜೋಡಿ