Home ಜಿಲ್ಲೆ ಮಂಗಳೂರು ೧೫ ದಿನದೊಳಗೆ ಮಳೆ ಮಾಪಕ ಸರಿಪರಿಸಲು ಸಚಿವ ಖಾದರ್ ಖಡಕ್ ಸೂಚನೆ

೧೫ ದಿನದೊಳಗೆ ಮಳೆ ಮಾಪಕ ಸರಿಪರಿಸಲು ಸಚಿವ ಖಾದರ್ ಖಡಕ್ ಸೂಚನೆ

ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ನೇತೃತ್ವದಲ್ಲಿ ಸುಳ್ಯದಲ್ಲಿ ಪ್ರಾಕೃತಿಕ ವಿಕೋಪ ಮುಂಜಾಗೃತಾ ಸಭೆ
ಸುಳ್ಯ: ಸುಳ್ಯ ತಾಲೂಕಿನ ೨೫ ಗ್ರಾಮ ಪಂಚಾಯಿತಿಗಳಲ್ಲಿ ಇರುವ ಮಳೆ ಮಾಪಕಗಳು ದುರಸ್ಥಿಯಲ್ಲಿಲ್ಲ. ಮುಂದಿನ ೧೫ ದಿನಗಳಲ್ಲಿ ದುರಸ್ಥಿಯಾಗದ ಎಲ್ಲಾ ಮಳೆ ಮಾಪಕಗಳನ್ನು ದುರಸ್ಥಿ ಮಾಡಬೇಕು ಎಂದು ಆರೋಗ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸೂಚನೆ ನೀಡಿದರು.
ಮಳೆಯಿಂದ ಸಮಸ್ಯೆಗಳು ಉಂಟಾದ ಹಿನ್ನಲೆಯಲ್ಲಿ ಗುರುವಾರ ಸುಳ್ಯಕ್ಕೆ ಆಗಮಿಸಿದ ಅವರು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪ್ರಾಕೃತಿಕ ವಿಕೋಪ ಮುಂಜಾಗೃತಾ ಸಭೆ ನಡೆಸಿ ಮಳೆ ಹಾನಿ ಹಾಗೂ ಇಲಾಖಾವಾರು ಮಾಹಿತಿ ಪಡೆದುಕೊಂಡರು.
ಜಿಲ್ಲಾಧಿಕಾರಿ ದರ್ಶನ್.ಹೆಚ್.ವಿ ಮಳೆ ಮತ್ತು ಮಳೆಹಾನಿ ಬಗ್ಗೆ ಮಾಹಿತಿ ನೀಡಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ. ೧೨ ಮಳೆ ಕಡಿಮೆಯಾಗಿದೆ. ಮಳೆಯಿಂದ ೧೭ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಪ್ರಾಣ ಹಾನಿ, ಜಾನುವಾರು ಹಾನಿ ಸಂಭವಿಸಿಲ್ಲ ಎಂದು ಮಾಹಿತಿ ನೀಡಿದರು.
ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ತಾಲೂಕಿನಲ್ಲಿ ವಿಪರೀತ ಮಳೆಯಾಗಿದೆ. ಆದರೆ ಸುಳ್ಯ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಇರುವ ಮಳೆ ಮಾಪಕಗಳನ್ನು ದುರಸ್ಥಿ ಪಡಿಸುವ ಕೆಲಸ ಆಗಿಲ್ಲ ಎಂದರು.
ಈ ಬಗ್ಗೆ ಮಾಹಿತಿ ತಹಸೀಲ್ದಾರ್ ಅವರಲ್ಲಿ ಮಾಹಿತಿ ಕೇಳಿದರು. ಇದಕ್ಕೆ ಉತ್ತರಿಸಿದ ಅವರು ತಾಲೂಕಿನ ೨೫ ಗ್ರಾಮ ಪಂಚಾಯಿತಿಗಳಲ್ಲಿ ಕೂಡ ಮಳೆ ಮಾಪಕಗಳ ದುರಸ್ಥಿ ಆಗಿಲ್ಲ ಎಂದರು. ಈ ವೇಳೆ ತಹಸೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು ತಾಲೂಕಿನಲ್ಲಿ ಮಳೇ ಮಾಪಕಗಳ ಸಮಸ್ಯೆ ಕಳೆದ ವರ್ಷವೇ ಇತ್ತು. ಆದರೆ ಅದನ್ನು ಇಲ್ಲಿಯವರೆಗೆ ಸರಿಪಡಿಸುವ ಕೆಲಸ ಆಗಿಲ್ಲ. ಈ ವರ್ಷ ಇದ್ದ ಸಮಸ್ಯೆ ಮುಂದಿನ ವರ್ಷಕ್ಕೆ ಮರುಕಳಿಸಬಾರದು. ಮರುಕಳಸಿದರೇ ಅಧಿಕಾರಿಗಳೇ ಹೊಣೆಯಾಗುತ್ತಾರೆ ಎಂದು ಹೇಳಿದರು. ಬೆಂಗಳೂರಿನ ಅಧಿಕಾರಿಗಳಿಗೆ ಕರೆ ಮಾಡಿ ೧೫ ದಿನಗಳ ಒಳಗೆ ಮಳೆಮಾಪಕಗಳನ್ನು ಸರಿಪಡಿಸಬೇಕು ಎಂದು ಸೂಚಿಸಿದರು.
ಸುಳ್ಯ ತಾಲೂಕಿನಲ್ಲಿ ಸುಮಾರು ೧೭ ರಷ್ಟು ಮನೆಗಳು ಹಾನಿಯಾಗಿರುವ ಕುರಿತು ತಹಸೀಲ್ದಾರ್ ಮಂಜುಳಾ ಮಾಹಿತಿ ನೀಡಿದರು. ಅಪಾಯದಲ್ಲಿರುವ ಶಾಲೆಗಳ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಅಂಗನವಾಡಿಗಳ ಕುರಿತು ಸಿಡಿಪಿಒ ಮಾಹಿತಿ ನೀಡಿದರು. ದುರಸ್ಥಿಗೆ ಇರುವ ಎಲ್ಲಾ ಶಾಲೆ ಮತ್ತು ಅಂಗನವಾಡಿ ದುರಸ್ಥಿಗಳ ಬಗ್ಗೆ ನಿಖರವಾದ ಮಾಹಿತಿ ನೀಡಬೇಕು. ಇದರ ಬಗ್ಗೆ ಶಿಕ್ಷಣಾಧಿಕಾರಿಗಳಲ್ಲಿ ಸರಿಯಾದ ಮಾಹಿತಿ ಇಲ್ಲ. ಕೂಡಲೇ ಎಲ್ಲಾ ಶಾಲೆಗಳಿಗೆ ಹೋಗಿ ನಿಖರವಾದ ಮಾಹಿತಿ ಕೊಡಬೇಕು. ಮನೆಗಳಿಗೆ ಹಾನಿಯಾದರೆ, ತುರ್ತು ಪರಿಹಾರ ಒದಗಿಸಬೇಕು, ವಿಳಂಬ ಮಾಡಬಾರದು ಎಂದು ಸಚಿವ ಖಾದರ್ ಸೂಚಿಸಿದರು.
ಮಳೆಹಾನಿ ಪರಿಹಾರ ವಿತರಣೆಯಲ್ಲಿ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಸರಕಾರದ ಬಳಿ ಹಣದ ಕೊರತೆಯಿಲ್ಲ. ಈಗಾಗಲೇ ಮಳೆಹಾನಿ ಪರಿಹಾರಕ್ಕಾಗಿ ಸರಕಾರ ಹಣ ಬಿಡುಗಡೆ ಮಾಡಿದೆ ಎಂದರು.
ಗುಂಡಿ ಬಿದ್ದ ರಸ್ತೆಗಳನ್ನು ದುರಸ್ಥಿ ಮಾಡಿ :
ಮಳೆಗೆ ತಾಲೂಕಿನಲ್ಲಿ ಸುಮಾರು ೮.೫ ಕಿ.ಮೀ ಉದ್ದ ಪಿಆರ್‌ಡಿ ರಸ್ತೆಗಳು ಹಾಳಾಗಿದೆ. ಅಲ್ಲದೇ ಸುಮಾರು ೨.೫ ಕಿಮೀ ಹೆದ್ದಾರಿ ಹಾನಿಯಾಗಿದೆ ಎಂದು ಇಂಜಿನಿಯರ್ ಮಾಹಿತಿ ನೀಡಿದರು. ರಸ್ತೆಯಲ್ಲಿ ಇರುವ ದೊಡ್ಡ ಗುಂಡಿಗಳನ್ನು ಕೂಡಲೇ ದುರಸ್ಥಿ ಮಾಡಿ. ಸ್ಕೂಟರ್, ಬೈಕ್‌ನಲ್ಲಿ ಸಂಚಾರಿಸುವವರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು. ಗುಂಡಿಗೆ ಬಿದ್ದು ಪ್ರಾಣಹಾನಿಯಾದರೇ ಇಂಜಿನಿಯರ್‌ರನ್ನು ಹೊಣೆ ಮಾಡಲಾಗುವುದು ಎಂದರು.
ಗ್ರಾಮ ಪಂಚಾಯಿತಿಗಳಿಗೆ ಮೀಸಲಿರುವ ಸರಕಾರದ ಅನುದಾನವನ್ನು ಸಾರ್ವಜನಿಕ ಉದ್ದೇಶಕ್ಕಷ್ಟೇ ಬಳಸಿ ಎಂದು ಗ್ರಾಪಂ ಪಿಡಿಒಗಳಿಗೆ ಕಿವಿಮಾತು ಹೇಳಿದ ಯು.ಟಿ.ಖಾದರ್, ಪಂಚಾಯಿತಿ ಕಟ್ಟಡ ಅಭಿವೃದ್ಧಿಯೇ ಮೊದಲಾದವುಗಳಿಗೆ ಜನಪ್ರತಿನಿಧಿಗಳ ತೀರ್ಮಾನ ಅಲ್ಲಿಯವರೆಗೆ ಆಯ್ಕೆ ಕೈಗೊಳ್ಳಬಹುದು. ಬಳಕೆಯಾಗುವ ನಿಧಿಯ ಕುರಿತು ನಿಗಾ ವಹಿಸುವಂತೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಅವರಿಗೆ ಸೂಚಿಸಿದರು.
ಸುಳ್ಯ ಸರಕಾರಿ ಆಸ್ಪತ್ರೆಯ ಎದುರು ಭಾಗವನ್ನು ಉತ್ತಮವಾಗಿ ರೂಪಿಸಬೇಕು. ಇದಕ್ಕಾಗಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದ ಸಚಿವರು ಆಸ್ಪತ್ರೆಯನ್ನು ಸ್ವಚ್ಚವಾಗಿ ಇಡಬೇಕು. ಬಂದ ಸಾರ್ವಜನಿಕರಿಗೆ ಸಮಸ್ಯೆ ಆಗಬಾರದು ಎಂದರು.
ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾರ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ, ಜಿಲ್ಲಾಧಿಕಾರಿ ದರ್ಶನ್.ಹೆಚ್.ವಿ, ಎಸ್.ಪಿ ಡಾ.ಕೆ.ಅರುಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರ್ವಾಡೆ ವಿನಾಯಕ್ ಕಾರ್ಭಾರಿ, ತಹಸೀಲ್ದಾರ್ ಮುಂಜುಳಾ, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾ.ಪಂ ಪಿಡಿಒಗಳು ಉಪಸ್ಥಿತರಿದ್ದರು.