
ಸಂಜೆವಾಣಿ ವಾರ್ತೆ
ಕೊಳ್ಳೇಗಾಲ.ಆ.23: ತಾಲ್ಲೂಕಿನ ಕುಣಗಳ್ಳಿ ಗ್ರಾಮದಲ್ಲಿ ಖಾಸಗಿ ಫೈನಾನ್ಸ್ ಸಂಸ್ಥೆಯ ಕಿರುಕುಳದಿಂದ ಮಹೇಶ್ (42) ಮೃತಪಟ್ಟಿದ್ದಾರೆ ಎಂದು ಆರೋಪಿಸಿ, ಮೃತರ ಕುಟುಂಬಕ್ಕೆ ನ್ಯಾಯ ಹಾಗೂ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಗ್ರಾಮಸ್ಥರು ಶವವನ್ನು ಮನೆಯ ಮುಂದೆ ಇಟ್ಟು ಪ್ರತಿಭಟನೆ ನಡೆಸಿದರು.
ಕುಣಗಳ್ಳಿ ಗ್ರಾಮದ ಯಜಮಾನ ಹಾಗೂ ಸಿಲ್ಕ್ ರೀಲರ್ ಆಗಿದ್ದ ಮಹೇಶ್ ಅವರ ಮನೆಗೆ ಕಳೆದ ತಿಂಗಳ 28ರಂದು ಖಾಸಗಿ ಫೈನಾನ್ಸ್ನವರು ಹಣ ವಾಪಸ್ ನೀಡುವಂತೆ ಒತ್ತಾಯಿಸಿ ಮನೆಗೆ ಬಂದಿದ್ದರು ಎನ್ನಲಾಗಿದೆ, ಇದರಿಂದ ಮಹೇಶ್ ತೀವ್ರವಾಗಿ ನೊಂದು ವ್ಯವಸಾಯಕ್ಕೆ ಬಳಸುವ ಕೀಟನಾಶಕ ಔಷಧಿಯನ್ನು ಕುಡಿದಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಬಳಿಕ ಅಸ್ವಸ್ಥಗೊಂಡ ಅವರನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮಹೇಶ್ ಮೃತಪಟ್ಟಿದ್ದಾರೆ.
ಮಹೇಶ್ ಅವರ ಸಾವಿಗೆ ಕಾರಣವಾದರೆಂದು ಆರೋಪಿಸಲಾಗಿರುವ ಖಾಸಗಿ ಫೈನಾನ್ಸ್ ಸಂಸ್ಥೆಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಶವವನ್ನು ಮಾಂಬಳ್ಳಿ ಪೆÇಲೀಸ್ ಠಾಣೆಗೆ ಕೊಂಡೊಯ್ದು ಪ್ರತಿಭಟನೆ ನಡೆಸಲು ಮುಂದಾಗಿದ್ದರು.
ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಶಶಿಧರ್ ಎಂ.ಎನ್., ಡಿವೈಎಸ್ಪಿ ಮೋಹನ್ ಜೆ., ವೃತ್ತ ನಿರೀಕ್ಷಕರಾದ ರವೀಂದ್ರ ಹಾಗೂ ಸುಬ್ರಮಣ್ಯ, ಪಿಎಸ್ಐಗಳಾದ ಕರಿಬಸಪ್ಪ, ಸುಪ್ರೀತ್ ಮತ್ತು ವರ್ಷ ಸೇರಿದಂತೆ ಪೆÇಲೀಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿ ನಿಯಂತ್ರಿಸಿದರು. ಪೆÇಲೀಸರು ಹಾಗೂ ಗ್ರಾಮಸ್ಥರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದ ಬಳಿಕ, ಶವವನ್ನು ಕುಣಗಳ್ಳಿ ಗ್ರಾಮದ ಮಹೇಶ್ ಅವರ ಮನೆಗೆ ಕೊಂಡೊಯ್ಯಲಾಯಿತು.
ಮನೆಯ ಮುಂದೆ ಶವವಿಟ್ಟು, ಮೃತರ ಕುಟುಂಬಕ್ಕೆ ನ್ಯಾಯ ಹಾಗೂ ಪರಿಹಾರ ನೀಡುವವರೆಗೆ ಅಂತ್ಯಸಂಸ್ಕಾರ ನಡೆಸುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ರಾತ್ರಿ ಸುಮಾರು 7.30ರವರೆಗೂ ಪ್ರತಿಭಟನೆ ಮುಂದುವರಿಯಿತು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಮೃತ ಮಹೇಶ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು, ವೈಯಕ್ತಿಕವಾಗಿ ಅಂತ್ಯಸಂಸ್ಕಾರಕ್ಕಾಗಿ 50 ಸಾವಿರ ನೆರವು ನೀಡಿದರು. ಖಾಸಗಿ ಫೈನಾನ್ಸ್ ಸಂಸ್ಥೆಯವರ ವಿರುದ್ಧದ ಆರೋಪದ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಡಿವೈಎಸ್ಪಿ ಮೋಹನ್ ಜೆ. ಅವರಿಗೆ ಸೂಚಿಸಿದರು.
ಮಹೇಶ್ ರವರಿಗೆ ಮೂರು ಸಣ್ಣ ಮಕ್ಕಳಿದ್ದು, ಕುಟುಂಬದ ಜೀವನ ನಿರ್ವಹಣೆಗಾಗಿ ಅವರ ಪತ್ನಿಗೆ ಉದ್ಯೋಗ ಕಲ್ಪಿಸುವ ಕುರಿತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಶಾಸಕ ಕೃಷ್ಣಮೂರ್ತಿ ರವರು ದೂರವಾಣಿ ಮುಖಾಂತರ ಮಾತುಕತೆ ನಡೆಸಿದರು.
ನಂತರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಅಂತ್ಯಸಂಸ್ಕಾರ ನೆರವೇರಿಸಿದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಗ್ರಾಮದಲ್ಲಿ ಪೆÇಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ಖಾಸಗಿ ಫೈನಾನ್ಸ್ ಸಂಸ್ಥೆಯ ಕಿರುಕುಳವೇ ಮಹೇಶ್ ಅವರ ಸಾವಿಗೆ ಕಾರಣ ಎಂಬ ಆರೋಪದ ಕುರಿತು ಪೆÇಲೀಸರು ತನಿಖೆ ನಡೆಸಿ, ಸತ್ಯಾಸತ್ಯತೆ ಆಧರಿಸಿ ಕ್ರಮ ಕೈಗೊಳ್ಳಬೇಕೆಂಬುದು ಗ್ರಾಮಸ್ಥರ ಪ್ರಮುಖ ಒತ್ತಾಯವಾಗಿದೆ.

































