
ನವದೆಹಲಿ,ಆ.20- ಕೀನ್ಯಾದ ಸಂಬೂರು ಕೌಂಟಿಯ ಮೌಂಟ್ ಒಲೋಲೋಕ್ವೆ ಬೆಟ್ಟದ ಬಳಿ ಬುಧವಾರ ಬೆಳಿಗ್ಗೆ ಸಂಭವಿಸಿದ ಭೀಕರ ಸಫಾರಿ ಹೆಲಿಕಾಪ್ಟರ್ ಅಪಘಾತದಲ್ಲಿ ಈಕ್ವೆಡಾರ್ ದೇಶದ ರಾಷ್ಟ್ರೀಯ ಗೂಢಚಾರ ಸಂಸ್ಥೆಯ (ಇಂಟೆಲಿಜೆನ್ಸ್) ಮುಖ್ಯಸ್ಥ ಮೈಕೆಲ್ ಸೆನ್ಸಿ-ಕೊಂಟುಗಿ, ಅವರ ಪತ್ನಿ ಸ್ಟೆಫನಿ, ಐದು ಮಂದಿ ಅಮೆರಿಕನ್ ನಾಗರಿಕರು (ಟೆಲಿಮುಂಡೋ ಸುದ್ದಿ ಸಂಸ್ಥೆಯ ಹಿರಿಯ ಅಧಿಕಾರಿ ಜೋಸ್ ಅಲ್ಬರ್ಟೊ ಸುವಾರೆಜ್ ಸೇರಿ) ಹಾಗೂ ಸ್ಥಳೀಯ ಪೈಲಟ್ ಒಳಗೊಂಡಂತೆ ಒಟ್ಟು 7 ಜನರು ದಾರುಣವಾಗಿ ಮೃತಪಟ್ಟಿದ್ದಾರೆ. ‘ಲೇಡಿ ಲೋರಿ ಹೆಲಿಕಾಪ್ಟರ್ಸ್’ ಸಂಸ್ಥೆಗೆ ಸೇರಿದ ಯೂರೋಕಾಪ್ಟರ್ ಇಸಿ130 ಬಿ4 ವಿಮಾನವು ಲೋಯ್ಸಾಬಾ ವನ್ಯಜೀವಿ ಸಂರಕ್ಷಣಾ ಪ್ರದೇಶದಿಂದ ಎವಾಸೊ ನ್ಯೀರೋ ನದಿಯತ್ತ ಸಾಗುತ್ತಿದ್ದಾಗ ಈ ದುರಂತ ಸಂಭವಿಸಿದ್ದು, ಕಡಿದಾದ ಬೆಟ್ಟದ ಪ್ರದೇಶದಲ್ಲಿ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡಿದ್ದರಿಂದ ಸ್ಥಳದಲ್ಲೇ ಎಲ್ಲರೂ ಹತಾಹತರಾಗಿದ್ದಾರೆ. ರಕ್ಷಣಾ ತಂಡಗಳು ಡ್ರೋನ್ ಬಳಸಿ ಪರಿಶೀಲನೆ ನಡೆಸಿದ್ದು, ಘಟನೆಗೆ ನಿಖರ ಕಾರಣ ತಿಳಿಯಲು ಕೀನ್ಯಾದ ಸಿವಿಲ್ ಏವಿಯೇಷನ್ ಅಥಾರಿಟಿ ಮತ್ತು ವಿಮಾನಯಾನ ಅಪಘಾತ ತನಿಖಾ ವಿಭಾಗ ಸುದೀರ್ಘ ತನಿಖೆಯನ್ನು ಕೈಗೆತ್ತಿಕೊಂಡಿವೆ.

































