
ಬೀದರ, ಆ 21 : ಸದ್ಭಾವನೆ ಎಂಬುದು ಕೇವಲ ಒಂದು ದಿನದ ಆಚರಣೆಯಾಗದೇ, ಪ್ರತಿಯೊಬ್ಬರ ದೈನಂದಿನ ಜೀವನದ ಭಾಗವಾಗಬೇಕು ಬೀದರನ ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ. ಎಸ್.ವಿ. ಪಾಟೀಲ್ ಅವರು ಹೇಳಿದರು.
ಗುರುವಾರ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಬೀದರನ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್‍ಎಸ್‍ಎಸ್) ಘಟಕ-1 ಮತ್ತು 2ರ ವತಿಯಿಂದ ‘ಸದ್ಭಾವನಾ ದಿನಾಚರಣೆ’ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಿನ್ನಾಭಿಪ್ರಾಯಗಳನ್ನು ಮರೆತು ಪರಸ್ಪರ ಗೌರವ, ಸಹಕಾರ ಮತ್ತು ಶಾಂತಿಯನ್ನು ಕಾಪಾಡುವುದೇ ನಿಜವಾದ ಸದ್ಭಾವನೆ. ಯುವಜನರು ಜಾತಿ, ಧರ್ಮ, ಭಾಷೆ ಹಾಗೂ ಪ್ರಾದೇಶಿಕ ಭೇದಭಾವಗಳನ್ನು ಮೀರಿ ದೇಶದ ಏಕತೆ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯಬೇಕು ಎಂದು ಕರೆ ನೀಡಿದರು.
ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಜನ್ಮದಿನದ ನೆನಪಿಗಾಗಿ ಪ್ರತಿವರ್ಷ ಆಗಸ್ಟ್ 20ರಂದು ಸದ್ಭಾವನಾ ದಿನವನ್ನು ಆಚರಿಸಲಾಗುತ್ತದೆ. ದೇಶದ ಅಭಿವೃದ್ಧಿ, ತಂತ್ರಜ್ಞಾನ, ಶಿಕ್ಷಣ ಮತ್ತು ಯುವಜನರ ಸಬಲೀಕರಣಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದ ಅವರು, ವೈವಿಧ್ಯಮಯ ಭಾರತದಲ್ಲಿ ಸೌಹಾರ್ದತೆ ಮತ್ತು ಸಹೋದರತ್ವವನ್ನು ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯ ಎಂದರು.
ನಂತರ ಡಾ. ಎಸ್.ವಿ. ಪಾಟೀಲ್ ಅವರು ಸದ್ಭಾವನಾ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಸದ್ಭಾವನಾ ಪ್ರತಿಜ್ಞೆ ಸ್ವೀಕರಿಸಿದರು.
ಕಾರ್ಯಕ್ರಮದದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ಡಾ. ವಿಜಯಮಹಾಂತೇಶ ಹಾಗೂ ಡಾ. ರಮೇಶ ನಾಯಕ್ ಸೇರಿದಂತೆ ಮಹಾ ವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

































