
ನವದೆಹಲಿ,ಅ.14-ಇಂಡಿಯಾ ಸ್ಟಾರ್ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಸದ್ಯ ಮೈದಾನದಿಂದ ದೂರವಿದ್ದು, ಫಾರ್ಮ್ ಕೊರತೆ ಹಾಗೂ ಮುಂಬೈನಲ್ಲಿ ನಡೆದ ಸ್ಥಳೀಯ ಟಿ20 ಟೂರ್ನಮೆಂಟ್ನಿಂದ ಸುದ್ದಿಯಲ್ಲಿದ್ದ ಅವರು, ಇದೀಗ ದುಬೈನಲ್ಲಿ ಹೊಸ ಮನೆ ಖರೀದಿಸುವ ಮೂಲಕ ಮತ್ತೊಮ್ಮೆ ಮುಂಚೂಣಿಗೆ ಬಂದಿದ್ದಾರೆ.
ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆ ಮೂಲಕ ದುಬೈನಲ್ಲಿ ಹೊಸ ಆಸ್ತಿ ಖರೀದಿಸಿರುವುದನ್ನು ಖಚಿತಪಡಿಸಿರುವ ಅವರು, ಈ ನಿರ್ಧಾರದ ಹಿಂದಿನ ಪ್ರಮುಖ ಕಾರಣಗಳನ್ನು ಹಂಚಿಕೊಂಡಿದ್ದಾರೆ. ಡ್ಯಾನ್ಯೂಬ್ ಪ್ರಾಪರ್ಟೀಸ್ ಮೂಲಕ ದುಬೈನಲ್ಲಿ ತಮ್ಮ ಮೊದಲ ಮನೆಯನ್ನು ಪಡೆದುಕೊಂಡಿರುವ ಸೂರ್ಯಕುಮಾರ್, ಬಾಲಿವುಡ್ ಬಾದ್ಷಾ ಶಾರುಖ್ ಖಾನ್ ಅವರ ಕಟ್ಟಡ ನಿರ್ಮಾಣವಾಗುತ್ತಿರುವ ಅದೇ ಪ್ರದೇಶದಲ್ಲಿ ಈ ಐಷಾರಾಮಿ ಪಡೆಯುವುದು ವಿಶೇಷವಾಗಿದೆ. ದುಬೈನಲ್ಲಿ ಹೂಡಿಕೆ ಮಾಡಲು ಪ್ರಮುಖ ಕಾರಣವೇನು ಎಂಬುದನ್ನು ವಿವರಿಸಿರುವ ಅವರು, 2014ರಲ್ಲಿ ಐಪಿಎಲ್ ಆಡಲು ಮೊದಲ ಬಾರಿಗೆ ದುಬೈಗೆ ಬಂದಿದ್ದೆ ಹಾಗೂ 2020ರಲ್ಲಿ ಎರಡನೇ ಬಾರಿಗೆ ಭೇಟಿ ನೀಡಿದ್ದೆ, ಆದರೆ ಪ್ರಸ್ತುತ ಇಡೀ ಭಾರತವೇ ದುಬೈಗೆ ಬರುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿನ ಜೀವನಶೈಲಿ ಸಂಪೂರ್ಣವಾಗಿ ವಿಭಿನ್ನ ಹಾಗೂ ಅತ್ಯಂತ ಐಷಾರಾಮಿಯಿಂದ ಕೂಡಿದೆ ಎಂದು ಬಣ್ಣಿಸಿರುವ ಅವರು, ಇಲ್ಲಿನ ಭದ್ರತಾ ವ್ಯವಸ್ಥೆಯನ್ನೂ ಸಹ ಪ್ರಮುಖ ಅಂಶವಾಗಿ ಉಲ್ಲೇಖಿಸಿದ್ದಾರೆ. ತಾವೀಗ ವಾಸಿಸುತ್ತಿರುವ ಮುಂಬೈನಲ್ಲೂ ಅತ್ಯುತ್ತಮ ಭದ್ರತೆಯಿದೆ ಎಂಬುದನ್ನು ಒಪ್ಪಿಕೊಳ್ಳುವ ಜೊತೆಗೆ, ಪ್ರತಿ ಬಾರಿ ದುಬೈಗೆ ಭೇಟಿ ನೀಡಿದಾಗಲೂ ತಮಗೆ ತೀವ್ರ ಖುಷಿಯಾಗುತ್ತದೆ ಎಂದು ತಿಳಿಸಿದ್ದಾರೆ. ಮ್ಯಾರಿಟೈಮ್ ಸಿಟಿಯ ಹೃದಯಭಾಗದಲ್ಲಿರುವ ಐಷಾರಾಮಿ ವಾಟರ್ಫ್ರಂಟ್ ವಸತಿ ಪ್ರದೇಶದಲ್ಲಿ ಈ ಮನೆಯಿದ್ದು, 40ಕ್ಕೂ ಅಧಿಕ ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ.
ಅದರಲ್ಲೂ ವಿಶೇಷವಾಗಿ ಅಲ್ಲಿನ ‘ಲಾಂಗ್ವಿಟಿ ಲೌಂಜ್’ ಸೌಲಭ್ಯವು ಇಂತಹ ವಸತಿ ಯೋಜನೆಗಳಲ್ಲಿ ಸುಲಭವಾಗಿ ಸಿಗುವುದಿಲ್ಲವಾದ್ದರಿಂದ ಅದು ತನ್ನ ಮನಸೆಳೆಯಿತು ಎಂದು ಸೂರ್ಯಕುಮಾರ್ ಯಾದವ್ ಹರ್ಷ ವ್ಯಕ್ತಪಡಿಸಿದ್ದಾರೆ.























