
ಕೋಮಲ್ ಕುಮಾರ್, ಮೇಘನಾ ರಾಜ್ ಹಾಗೂ ಅನುಷಾ ರೈ ಅಭಿನಯದ ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಚಿತ್ರದ ಪ್ರಚಾರಕ್ಕೆ ‘30 ಎಂ.ಎಲ್’ ಕಿಕ್ನೊಂದಿಗೆ ಚಾಲನೆ ದೊರೆತಿದೆ. ಚಿತ್ರದ ಫಸ್ಟ್ ಲುಕ್ ಮೋಶನ್ ಪೋಸ್ಟರ್ ಬಿಡುಗಡೆಯಾಗಿದ್ದು, ಕೋಮಲ್ ಆಸ್ಥಾನದ ವರ್ಣಚಿತ್ರ ಕಲಾವಿದನಾಗಿ ಹಾಗೂ ಮೇಘನಾ ರಾಜ್ ರಾಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ನಲ್ಲಿ ಹಿಂದೂ–ಮುಸ್ಲಿಂ ಧಾರ್ಮಿಕ ಹಿನ್ನೆಲೆಯ ಅಂಶಗಳೂ ಗಮನ ಸೆಳೆಯುತ್ತವೆ.
ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ ಈ ಚಿತ್ರವನ್ನು ವಿಕಾಸ್ ಶೆಟ್ಟಿ ನಿರ್ಮಿಸಿದ್ದಾರೆ. ಎರಡು ಕಾಲಘಟ್ಟಗಳಲ್ಲಿ ಸಾಗುವ ಕಥೆಯನ್ನು ಹೊಂದಿರುವ ಸಿನಿಮಾದ ಚಿತ್ರೀಕರಣ ಎರಡು ಹಂತಗಳಲ್ಲಿ 75 ದಿನಗಳ ಕಾಲ ನಡೆದಿದೆ. ಕುಂದಾಪುರ, ಶಿವಮೊಗ್ಗ, ತೀರ್ಥಹಳ್ಳಿ ಸೇರಿದಂತೆ ಕರಾವಳಿ–ಮಲೆನಾಡು ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ಕುಂದಾಪುರದ ಅಂಪಾರಿನ ವಾಲ್ತೂರು ಗ್ರಾಮದಲ್ಲಿ ಸುಮಾರು ಎರಡು ಎಕರೆ ಪ್ರದೇಶದಲ್ಲಿ ಏಳು ವಿಭಿನ್ನ ಬೃಹತ್ ಸೆಟ್ಗಳನ್ನು ನಿರ್ಮಿಸಲಾಗಿದ್ದು, ಚಿತ್ರದ ಶೇ.90ರಷ್ಟು ಚಿತ್ರೀಕರಣ ಇದೇ ಸೆಟ್ಗಳಲ್ಲಿ ನಡೆದಿರುವುದು ವಿಶೇಷ.
ಚಿತ್ರಕ್ಕೆ ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಹಾಗೂ ‘ದೇವರ ತಾಣ’ ಎಂಬ ಎರಡು ಶೀರ್ಷಿಕೆಗಳಿವೆ. ಕಥೆಯ ಮೊದಲಾರ್ಧ ಬಾರ್ ಸುತ್ತ ಸಾಗಿದರೆ, ದ್ವಿತೀಯಾರ್ಧ ‘ದೇವರ ತಾಣ’ದ ಹಿನ್ನೆಲೆಯಲ್ಲಿ ಮೂಡಿಬರಲಿದೆ. ಸೆನ್ಸಾರ್ ನಿಯಮದಂತೆ ಸಿನಿಮಾ ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಹೆಸರಿನಲ್ಲಿ ತೆರೆಗೆ ಬರಲಿದೆ.
ಕೋಮಲ್ ಮೊದಲ ಬಾರಿಗೆ ಎರಡು ವಿಭಿನ್ನ ಕಾಲಘಟ್ಟದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದರಲ್ಲಿ ಆಸ್ಥಾನದ ವರ್ಣಚಿತ್ರ ಕಲಾವಿದನಾದರೆ, ಮತ್ತೊಂದರಲ್ಲಿ ಸಿನಿಮಾ ನಿರ್ದೇಶಕನ ಪಾತ್ರ ನಿರ್ವಹಿಸಿದ್ದಾರೆ. ಮೇಘನಾ ರಾಜ್ ಕೂಡ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡ್, ವಜ್ರಧೀರ್ ಜೈನ್, ಉತ್ಸವ್, ಕಾರ್ತಿಕ್ ರಾವ್, ರಾಘು ರಾಮನಕೊಪ್ಪ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ನಾಲ್ಕು ಹಾಡುಗಳು, ಆಕ್ಷನ್, ಕಾಮಿಡಿ, ಭಾವನಾತ್ಮಕ ಸನ್ನಿವೇಶಗಳ ಜತೆಗೆ ಆಧ್ಯಾತ್ಮಿಕ ಕಥಾಹಂದರವೂ ಸಿನಿಮಾದಲ್ಲಿದೆ ಎಂದು ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ತಿಳಿಸಿದ್ದಾರೆ.






















