
ಟ್ರೆಂಡಿಂಗ್ನಲ್ಲಿ ‘ಏಪರಿ ಸೌಂದರ್ಯಮಾ’!
ಮಧುರ ಸಂಗೀತ, ಮನಸೆಳೆಯುವ ಸಾಹಿತ್ಯ ಹಾಗೂ ಪ್ರಣಮ್ ದೇವರಾಜ್–ಸಂಜನಾ ಆನಂದ್ ಜೋಡಿಯ ಆಕರ್ಷಕ ಅಭಿನಯದೊಂದಿಗೆ ‘ಶ್ರೀರಸ್ತು’ ಚಿತ್ರದ ಮೊದಲ ಹಾಡು ‘ಏಪರಿ ಸೌಂದರ್ಯಮಾ’ ಸಂಗೀತಪ್ರಿಯರ ಗಮನ ಸೆಳೆಯುತ್ತಿದೆ. ನವೆಂಬರ್ 5ರಂದು ಟಿ-ಸೀರೀಸ್ ಮೂಲಕ ಬಿಡುಗಡೆಯಾದ ಈ ಹಾಡು ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದು ಟ್ರೆಂಡಿಂಗ್ನಲ್ಲಿದೆ.
ಹರಿ ಕ್ರಿಯೇಷನ್ಸ್ ಬ್ಯಾನರ್ನಲ್ಲಿ ಪೆಂಡ್ಲಿಮಡಗು ಹರಿ ಕೃಷ್ಣ ಗೌಡ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶಂಕರ್ ರೆಡ್ಡಿ ಸಿದ್ದರೆಡ್ಡಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಶೇಕರ್ ಚಂದ್ರ ಸಂಗೀತ ಸಂಯೋಜಿಸಿದ್ದು, ವರದರಾಜ್ ಚಿಕ್ಕಬಳ್ಳಾಪುರ ಸಾಹಿತ್ಯ ರಚಿಸಿದ್ದಾರೆ. ಕಪಿಲ್ ಕಪಿಲನ್ ಅವರ ಗಾಯನ ಹಾಡಿನ ಮೆರುಗನ್ನು ಹೆಚ್ಚಿಸಿದೆ. ಜೀತು ಮಾಸ್ಟರ್ ನೃತ್ಯ ನಿರ್ದೇಶನದಲ್ಲಿ ಮೂಡಿಬಂದಿರುವ ಪ್ರಣಮ್ ದೇವರಾಜ್ ಮತ್ತು ಸಂಜನಾ ಆನಂದ್ ಅವರ ಜೋಡಿ ಹಾಡಿನ ಪ್ರಮುಖ ಆಕರ್ಷಣೆಯಾಗಿದೆ.
ನಿರ್ದೇಶಕ ಶಂಕರ್ ರೆಡ್ಡಿ ಸಿದ್ದರೆಡ್ಡಿ ಮಾತನಾಡಿ, “ಚಿತ್ರದ ಕಥೆಯ ದೃಷ್ಟಿಯಿಂದ ಈ ಹಾಡು ಬಹಳ ಮಹತ್ವದ್ದಾಗಿದೆ. ಶೇಕರ್ ಚಂದ್ರ ಅದ್ಭುತ ಸಂಗೀತ ನೀಡಿದ್ದಾರೆ. ಚಿತ್ರದ ದೃಶ್ಯ ವೈಭವ ಪ್ರೇಕ್ಷಕರಿಗೆ ಚಿತ್ರಮಂದಿರಗಳಲ್ಲಿ ಉತ್ತಮ ಅನುಭವ ನೀಡಲಿದೆ. ಉಳಿದ ಮಾಹಿತಿಯನ್ನು ಶೀಘ್ರದಲ್ಲೇ ಹಂಚಿಕೊಳ್ಳುತ್ತೇವೆ” ಎಂದರು.
ನಿರ್ಮಾಪಕ ಪೆಂಡ್ಲಿಮಡಗು ಹರಿ ಕೃಷ್ಣ ಗೌಡ್ ಮಾತನಾಡಿ, “ಉತ್ತಮ ಕುಟುಂಬ ಮನರಂಜನಾ ಚಿತ್ರವನ್ನು ಪ್ರೇಕ್ಷಕರಿಗೆ ನೀಡುವ ಉದ್ದೇಶ ನಮ್ಮದು. ಮೊದಲ ಹಾಡಿಗೆ ಸಿಗುತ್ತಿರುವ ಪ್ರತಿಕ್ರಿಯೆ ಸಂತಸ ತಂದಿದೆ. ನಿರ್ಮಾಣ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಚಿತ್ರ ರೂಪಿಸುತ್ತಿದ್ದೇವೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಿದ್ದೇವೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ವೇಗವಾಗಿ ನಡೆಯುತ್ತಿವೆ” ಎಂದು ತಿಳಿಸಿದರು.
ಚಿತ್ರದಲ್ಲಿ ಪ್ರಣಮ್ ದೇವರಾಜ್, ಸಂಜನಾ ಆನಂದ್, ಸುಮನ್, ಆಮಣಿ, ಚೈತ್ರ, ಪ್ರಸಾದ್ ಬೆಹರಾ ಹಾಗೂ ಶಿವ ರವಿತೇಜ ನಟಿಸಿದ್ದಾರೆ. ಡೈನಾಮಿಕ್ ಸ್ಟಾರ್ ಪ್ರಜ್ವಲ್ ದೇವರಾಜ್ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಬಾಲ ಸರಸ್ವತಿ ಛಾಯಾಗ್ರಹಣ, ಶ್ರೀ ವರ್ಕಲ ಸಂಕಲನ, ಹರಿ ಕ್ರಿಯೇಷನ್ಸ್ ನಿರ್ಮಾಣದ ಈ ಚಿತ್ರದ ಬಿಡುಗಡೆಯ ದಿನಾಂಕದ ಬಗ್ಗೆ ಚಿತ್ರತಂಡ ಶೀಘ್ರದಲ್ಲೇ ಮಾಹಿತಿ ನೀಡಲಿದೆ.





















