
ಸಂಜೆವಾಣಿ ವಾರ್ತೆ
ಹೊಸಪೇಟೆ.ಸೆ.22 ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಭಾರತ ಕಮ್ಯೂನಿಷ್ಟ ಪಕ್ಷ ಮಾರ್ಕ್ಸ್ ವಾದಿ ತಾಲೂಕು ಸಮಿತಿ ನೇತೃತ್ದದಲ್ಲಿ ಕಾರ್ಯಕರ್ತರು ಸೋಮವಾರ ಸ್ಥಳೀಯ ತಹಶೀಲ್ದಾರರ ಕಛೇರಿ ಎದುರು ಪ್ರತಿಭಟನೆ ನಡೆಸಿದರು.
ಅಕ್ರಮವಾಗಿ ಟೋಲ್ ಸಂಗ್ರಹ ಮಾಡುತ್ತಿರುವುದನ್ನು ವಿರೋಧಿಸಿ, ಪ್ರತಿಭಟನೆ ನಡೆಸುತ್ತಿದ್ದ ಸಿಪಿಐ(ಎಂ) ಮುಖಂಡರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿ, ಹಾಗೂ ರಾಯಚೂರಿನಲ್ಲಿ ಜರುಗಿದ ದಲಿತ ಮಹಿಳೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಸಿಪಿಐ(ಎಂ) ಕಾರ್ಯಕರ್ತರು ನಂತರ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಆರ್.ಭಾಸ್ಕರ್ ರೆಡ್ಡಿ, ರಾಜ್ಯ ಹೈಕೋರ್ಟ್ ಆದೇಶದಂತೆ ನೈಸ್ ಕಂಪನಿ ವಶಪಡಿಸಿಕೊಂಡಿರುವ ಭೂಮಿ ರೈತರಿಗೆ ವಾಪಸ್ ನೀಡಬೇಕು ಹಾಗೂ ಅಕ್ರಮ ಟೋಲ್ ವಸೂಲಿ ಸಂಗ್ರಹ ನಿಲ್ಲಿಸಬೇಕೆಂದು ಆಗ್ರಹಿಸಿ ಸಿಪಿಐ(ಎಂ)ರಾಜ್ಯ ಕಾರ್ಯದರ್ಶಿ ಕೆ.ಪ್ರಕಾಶ್ ರವರು ಸೇರಿದಂತೆ ಇತರೆ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರನ್ನೋಳಗೊಂಡ ಮುಖಂಡರು ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಮುಖಂಡರು, ಇತರರು ನೈಸ್ ಟೋಲ್ ಗೇಟ್ ಬಳಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಏಕಾಏಕಿ ಪೊಲೀಸರು ಬಂಧಿಸಿರುವುದು ತೀವ್ರವಾಗಿ ಖಂಡಿಸಿದರು.
ಅಲ್ಲದೆ ಪ್ರಜಾಪ್ರಭುತ್ವದ ಸೋಗಿನಲ್ಲಿ ಆಡಳಿತ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಕೇಂದ್ರ ಬಿಜೆಪಿ ಸರ್ಕಾರ ಕಾರ್ಪೋರೇಟ್ ನೀತಿಗಳನ್ನೇ ಅನುಸರಿಸುತ್ತಿದೆ ಎಂಬುದು ಹೋರಾಟಗಾರರ ಬಂಧನ ಮಾಡಿಸುವ ಮೂಲಕ ತನ್ನ ಅಂತರ್ಗತದ ಮುಖವಾಡವನ್ನು ಸಾಬೀತಾಗಿಸಿದೆ. ಸಿಪಿಐ(ಎಂ) ಪಕ್ಷದ ಮುಖಮಡರ ಬಂಧನದಿಂದ ಹೋರಾಟಕ್ಕೆ ಇನ್ನಷ್ಟು ಬಲ ಬಂದಿದೆ. ಎಂದ ಅವರು ಈ ಕೂಡಲೇ ಸರ್ಕಾರ ಹೋರಾಟಗಾರರನ್ನು ಬಂಧನದಿಂದ ಬಿಡುಗಡೆಗೊಳಿಸಬೇಕು ಹಾಗೂ ವಶಪಡಿಸಿಕೊಂಡಿರುವ ಭೂಮಿಯನ್ನು ರೈತರಿಗೆ ವಾಪಸ್ ಕೊಡಿಸಬೇಕು ಮತ್ತು ರೈತರ ಭೂಮಿಯ ಹಕ್ಕಗಳಿಗಾಗಿ ಧ್ವನಿ ಎತ್ತಿದವರಿಗೆ ಉತ್ತರ ನೀಡಬೇಕು ಇಲ್ಲವಾದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ಎನ್.ಯಲ್ಲಾಲಿಂಗ ಮಾತನಾಡಿ, ರಾಯಚೂರು ಜಿಲ್ಲೆಯಲ್ಲಿ ದಲಿತ ಶೋಷಿತ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ನಡೆಸಲಾಗಿದೆ. ಇಂತಹ ಪ್ರಕರಣಗಳು ರಾಜ್ಯದಲ್ಲಿ ನಡೆಯುತ್ತಲೇ ಇದ್ದರೂ ರಾಜ್ಯ ಸರ್ಕಾರ ಮತ್ತು ವಿರೋಧ ಪಕ್ಷಗಳು ದಲಿತ ಪರವಾದ ಗಟ್ಟಿ ನಿಲುವನ್ನು ತೆಗೆದುಕೊಳ್ಳದೇ ಅನಗತ್ಯ ವಿಷಯಗಳನ್ನು ಸದನಗಳಲ್ಲಿ ಎತ್ತುತ್ತಿವೆ. ಇದರಿಂದ ಕೊಲೆ ಪ್ರಕರಣಗಳ ಜೊತೆಗೆ ಜಾತಿ ದೌರ್ಜನ್ಯಗಳು ಸಹ ದಿನದಿಂದ ದಿನಕ್ಕೆ ಹೆಚ್ಚಾಗಿವೆ.
ಇದರಿಂದ ದಲಿತರು ಗೌರವಯುತವಾಗಿ ಜೀವನ ನಡೆಸದೇ ಇರುವ ಪರಿಸ್ಥಿತಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರಣವಾಗಿವೆ. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ನೈಸ್ ಹೋರಾಟಗಾರರ ಬೇಡಿಕೆಗಳನ್ನು ಈಡೇರಿಸಬೇಕು ಹಾಗೂ ರಾಯಚೂರಿನಲ್ಲಿ ದಲಿತ ಮಹಿಳೆಯನ್ನು ಕೊಲೆ ಮಾಡಿದವರಿಗೆ ತಕ್ಕ ಶಿಕ್ಷೆಯನ್ನು ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಹೈಕೋರ್ಟ್ ಆದೇಶದಂತೆ ನೈಸ್ ಕಂಪನಿ ವಶಪಡಿಸಿಕೊಂಡಿರುವ ರೈತರ ಜಮೀನುಗಳನ್ನು ವಾಪಸ್ ನೀಡಬೇಕು. ಅಕ್ರಮ ಟೋಲ್ ವಸೂಲಿ ಸಂಗ್ರಹ ನಿಲ್ಲಿಸಬೇಕು. ಭೂಮಿ ಕಳೆದುಕೊಂಡ ರೈತರಿಗೆ ಪುನರ್ವಸತಿಯ ನಿವೇಶನ ಮನೆ ಕಲ್ಪಿಸಬೇಕು. ರಾಯಚೂರಿನಲ್ಲಿ ದಲಿತ ಮಹಿಳೆಯನ್ನು ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿ ತಕ್ಕ ಶಿಕ್ಷೆಗೆ ಗುರಿ ಪಡಿಸಬೇಕು. ದಲಿತರಿಗೆ ನಿವೇಶನ ಮನೆ ವಸತಿ ಭೂಮಿ ಹಂಚಿಕೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾದ ಮನವಿಪತ್ರದಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಮುಖಂಡರಾದ ಕೆ.ನಾಗರತ್ನಮ್ಮ, ಎಂ. ಗೋಪಾಲ, ಎ.ಕರುಣಾನಿಧಿ, ಬಿ.ರಮೇಶ್ ಕುಮಾರ್, ಹೇಮಂತ್ ನಾಯ್ಕ್, ಈ.ಮಂಜುನಾಥ, ವಿ.ಸ್ವಾಮಿ, ಕೆ.ಎಂ.ಸ್ವಪ್ನ, ಎಸ್ ಯಲ್ಲಮ್ಮ, ಶಕುಂತಲಾ, ಎಂ. ಜಂಬಯ್ಯನಾಯಕ, ಬಿ.ತಾಯಪ್ಪ ನಾಯಕ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.





















