Home ಜಿಲ್ಲೆ ಮೈಸೂರು ಯುವ ದಸರಾಗೆ ಪ್ರಭುದೇವ್ ಚಾಲನೆ

ಯುವ ದಸರಾಗೆ ಪ್ರಭುದೇವ್ ಚಾಲನೆ

ಮೈಸೂರು:ಅ.14:- ಯುವಜನರು ತಮ್ಮ ವೈಯಕ್ತಿಕ ಬದುಕಿನಲ್ಲಿ ಸಾಧನೆ ಮಾಡುವುದರ ಜೊತೆಗೆ ಸಮಾಜದ ಉದ್ಧಾರ ಮತ್ತು ದೇಶದ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದ ಹೊರವಲಯದ ಉತ್ತನಹಳ್ಳಿಯಲ್ಲಿ ಇಂದು ಆಯೋಜಿಸಿದ್ದ ಯುವ ದಸರಾ ಕಾರ್ಯಕ್ರಮವನ್ನು ಖ್ಯಾತ ನೃತ್ಯ ನಿರ್ದೇಶಕ ಪ್ರಭುದೇವ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.


ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ಮೈಸೂರು ದಸರಾದಲ್ಲಿ ಅತಿ ಹೆಚ್ಚು ಜನರನ್ನು ಆಕರ್ಷಿಸುವ ಯುವ ದಸರಾ ಕಾರ್ಯಕ್ರಮ ಇಡೀ ಭಾರತದಲ್ಲೇ ಅತ್ಯಂತ ದೊಡ್ಡ ಮಟ್ಟದಲ್ಲಿ ಸರ್ಕಾರದ ವತಿಯಿಂದ ಆಯೋಜನೆಗೊಳ್ಳುತ್ತಿರುವ ಏಕೈಕ ಸಂಗೀತ ಕನ್ಸರ್ಟ್ ಆಗಿದೆ ಎಂದು ಹೇಳಿದರು.
ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ದೇಶದ ನಾನಾ ಮೂಲೆಗಳಿಂದ ಪ್ರಸಿದ್ಧ ನೃತ್ಯ ಸಂಯೋಜಕರು, ನಟರು, ನಿರ್ದೇಶಕರು ಮತ್ತು ಕಲಾವಿದರನ್ನು ಆಹ್ವಾನಿಸಿ ಮೈಸೂರಿನ ಜನತೆಗೆ ಮನರಂಜನೆ ನೀಡಲು ಈ ವೇದಿಕೆ ಕಲ್ಪಿಸಲಾಗಿದೆ ಎಂದರು.
ನವರಾತ್ರಿ ಸಂದರ್ಭದಲ್ಲಿ ಎಲ್ಲರೂ ಮಳೆಗಾಗಿ ದೇವರಲ್ಲಿ ಪ್ರಾರ್ಥನೆ ಮಾಡಬೇಕು. ಎಲ್ಲರೂ ಪ್ರಾರ್ಥಿಸಿದರೆ ಮಳೆ ಬಂದು ರೈತರು ಮತ್ತು ಜನಸಾಮಾನ್ಯರಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಹೇಳಿದರು.


ಮೈಸೂರು ನಗರದಲ್ಲಿ ಗಣಪತಿ ಉತ್ಸವವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಗಿದ್ದು, ಎಲ್ಲೆಡೆ 16 ರಿಂದ 21 ಅಡಿ ಎತ್ತರದ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಯಾವುದೇ ಗಲಭೆ ಇಲ್ಲದೆ ಗಣಪತಿ ಹಬ್ಬ ಯಶಸ್ವಿಯಾಗಿ ನಡೆದಿರುವುದು ಮೈಸೂರು ನಗರಕ್ಕೆ ಕೀರ್ತಿ ತಂದಿದೆ ಎಂದರು.
ಈ ಎಲ್ಲ ಕಾರ್ಯಕ್ರಮಗಳ ಯಶಸ್ಸಿಗೆ ಪೆÇಲೀಸ್ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಿದ್ದು, ಅವರಿಗೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಯುವ ದಸರಾ, ಜಂಬೂ ಸವಾರಿ, ಫ್ಲವರ್ ಶೋ ಮತ್ತು ಕುಸ್ತಿ ಪಂದ್ಯಾವಳಿಗಳು ಎಲ್ಲವೂ ಶಾಂತಿಯುತವಾಗಿ ನಡೆಯಬೇಕು. ದೇಶ ವಿದೇಶಗಳಿಂದ ಬರುವ ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸಬೇಕು ಎಂದು ಅವರು ಮನವಿ ಮಾಡಿದರು.


ಕಾರ್ಯಕ್ರಮದಲ್ಲಿ ಶಾಸಕರಾದ ತನ್ವೀರ್ ಸೇಠ್, ಕೆ. ಹರೀಶ್ ಗೌಡ, ಡಿ. ರವಿಶಂಕರ್, ವಿಧಾನ ಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ, ರಘು ಆರ್., ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಕೆ. ರಂಗಸ್ವಾಮಿ, ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಅನಂತ್, ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್, ಐಜಿಪಿ ಡಾ. ಬೋರಲಿಂಗಯ್ಯ, ಮೈಸೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬೀರಿಹುಂಡಿ ಬಸವಣ್ಣ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.