Home ಜಿಲ್ಲೆ ಮತದಾರರ ಹಕ್ಕು ಕಸಿಯುವ ಹುನ್ನಾರದ ವಿರುದ್ಧ ಹೋರಾಟಕ್ಕೆ ಪ್ರಕಾಶ್ ರಾಜ್ ಕರೆ

ಮತದಾರರ ಹಕ್ಕು ಕಸಿಯುವ ಹುನ್ನಾರದ ವಿರುದ್ಧ ಹೋರಾಟಕ್ಕೆ ಪ್ರಕಾಶ್ ರಾಜ್ ಕರೆ

Oplus_16908288

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಸೆ. 24: ಪ್ರಕಾಶ್ ರಾಜ್ ಹಾಗೂ ನಾಗರಿಕ ಸಂಘಟನೆಗಳು ಮತ್ತು ಜಾತ್ಯತೀತ ಪಕ್ಷಗಳ ಮುಖಂಡರ ರಾಜ್ಯ ಪ್ರವಾಸದ ಅಂಗವಾಗಿ ಗುರುವಾರ ನಗರದ ಖಾಸಗೀ ಹೊಟೇಲ್ ನಲ್ಲಿ  ಆಯೋಜಿಸಲಾಗಿದ್ದ ಸಮಾವೇಶದಲ್ಲಿ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಭಾಗವಹಿಸಿ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮದ ಆರೋಪ ಮಾಡಿದ ಅವರು, ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗವು ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ ಐ ಆರ್) ಹೆಸರಿನಲ್ಲಿ ಅರ್ಹ ಮತದಾರರ ಹಕ್ಕುಗಳನ್ನು ಕಸಿಯುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.

 1950 ರಿಂದಲೂ ಮತದಾರರ ಮನೆ ಮನೆಗೆ ತೆರಳಿ ಹೆಸರು ಸೇರ್ಪಡೆ ಮಾಡಲಾಗುತ್ತಿತ್ತು, ಆದರೆ ಈಗ ಕೇಂದ್ರಿಕೃತ ತಂತ್ರಾಂಶ ಹಾಗೂ ಆ್ಯಪ್ಗಳ ಮೂಲಕ ಅರ್ಹ ಮತದಾರರ ಹೆಸರುಗಳನ್ನು ಡಿಲೀಟ್ ಮಾಡುವ ಕೆಲಸ ನಡೆಯುತ್ತಿದೆ ಎಂದು ದೂರಿದರು.

   ಇತ್ತೀಚೆಗೆ ಬೆಳಗಾವಿ ಉತ್ತರ ಕ್ಷೇತ್ರದ 22 ಮತಗಟ್ಟೆಗಳಲ್ಲಿ, ಒಂದೇ ಬೂತ್ನಲ್ಲಿ ನೂರಾರು ಮುಸ್ಲಿಂ ಮತದಾರರ ಹೆಸರುಗಳನ್ನು ತೆಗೆದು ಹಾಕಲು ನಕಲಿ ಹಾಗೂ ಮುಂಚಿತವಾಗಿಯೇ ಮುದ್ರಿತವಾದ ಫಾರ್ಮ್-7 ಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿತ್ತು ಎಂಬ ಗಂಭೀರ ಆರೋಪವನ್ನು ಉಲ್ಲೇಖಿಸಿದರು. ಇದನ್ನು ಅಲ್ಲಿನ ಜಾಗೃತ ಬಿಎಲ್ಒಗಳು ಹಾಗೂ ಸ್ಥಳೀಯರು ಪತ್ತೆಹಚ್ಚಿ ವಿರೋಧಿಸಿದ್ದನ್ನು ವಿವರಿಸಿದರು.

ಚುನಾವಣಾ ಆಯೋಗದ ಸ್ವಾಯತ್ತತೆಗೆ ಧಕ್ಕೆಯಾಗಿದೆ ಎಂದರು. ಮುಖ್ಯ ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಕೈಬಿಟ್ಟು, ಕೇಂದ್ರ ಸರ್ಕಾರ ತನ್ನದೇ ಬಹುಮತವಿರುವ ಸಮಿತಿಯನ್ನು ರಚಿಸಿಕೊಂಡಿರುವುದನ್ನು ಕಟುವಾಗಿ ಟೀಕಿಸಿದರು. 140ಕ್ಕೂ ಹೆಚ್ಚು ಸಂಸದರನ್ನು ಅಮಾನತು ಮಾಡಿ ಇಂತಹ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ ಎಂದರು.

 ಹೋರಾಟದ ಮುಂದಿನ ಹೆಜ್ಜೆ ಬಗ್ಗೆ ವಿವರಿಸಿದ ಅವರು ಮತದಾರರ ಹಕ್ಕುಗಳ ರಕ್ಷಣೆಗಾಗಿ ಸೆಪ್ಟೆಂಬರ್ 30ರೊಳಗೆ ರಾಜ್ಯದ ಎಲ್ಲಾ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗುವುದು ಹಾಗೂ ರಾಜ್ಯವ್ಯಾಪಿ ‘ಸೋಷಿಯಲ್ ಆಡಿಟ್’ ನಡೆಸಲು ಒತ್ತಾಯಿಸಲಾಗುವುದು ಎಂದು ತಿಳಿಸಿದರು. ಅಷ್ಟೇ ಅಲ್ಲದೆ, ಅಕ್ಟೋಬರ್ 15 ರಂದು ದೆಹಲಿಯ ಜಂತರ್ ಮಂತರ್ನಲ್ಲಿ ದೇಶವ್ಯಾಪಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಘೋಷಿಸಿದರು.  ಹೋರಾಟಕ್ಕೆ ಜನಸಾಮಾನ್ಯರಿಗೆ ಕರೆ ನೀಡಿದ ಅವರು ಸಂವಿಧಾನದ ಪ್ರಕಾರ ಎಲ್ಲ ನಾಗರಿಕರಿಗೂ ಸಮಾನ ಮತದಾನದ ಹಕ್ಕಿದೆ. ಮತದಾರರ ಪಟ್ಟಿಯಿಂದ ಅನ್ಯಾಯವಾಗಿ ಹೆಸರು ಕೈಬಿಡಲಾದ ಸಂತ್ರಸ್ತರು ಹಾಗೂ ಸಾರ್ವಜನಿಕರು ಧ್ವನಿ ಎತ್ತಬೇಕು, ಅನ್ಯಾಯವನ್ನು ವಿಡಿಯೋಗಳ ಮೂಲಕ ಹಂಚಿಕೊಳ್ಳುವ ಮೂಲಕ ಈ ಹೋರಾಟವನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು.

ಸಮಾವೇಶದಲ್ಲಿ ಭಾಗವಹಿಸಿದ್ದ ವಿವಿಧ ನಾಗರಿಕ ಸಂಘಟನೆಗಳು, ಮುಖಂಡರು ಹಾಗೂ ಕಾರ್ಯಕರ್ತರು ಎಸ್ಐಆರ್ ರದ್ದುಪಡಿಸುವಂತೆ ಮತ್ತು ಸಂವಿಧಾನಬದ್ಧ ಮತದಾನದ ಹಕ್ಕನ್ನು ರಕ್ಷಿಸುವಂತೆ ಘೋಷಣೆಗಳನ್ನು ಕೂಗಿ ಬೆಂಬಲ ಸೂಚಿಸಿದರು.

ಸಭೆಯಲ್ಲಿ ಮುಖಂಡರಾದ ವೀರಸಂಗಯ್ಯ, ಸಿರಿಗೇರಿ ಪನ್ನರಜ್, ಹೆಚ್.ಸಿದ್ದಣ್ಣ, ಎನ್.ಡಿ.ಯಂಕಮ್ಮ,

ಸತ್ಯಬಾಬು, ಮಾಧವ ರೆಡ್ಡಿ ಮೊದಲಾದವರು ಇದ್ದರು.