Home ಜಿಲ್ಲೆ ಮೈಸೂರು ಪ್ರೇಕ್ಷಕರ ಮನಸೂರೆಗೊಳಿಸಿದ ಕನ್ನಡದ ಕಂಪಿನ ರಸದೌತಣ

ಪ್ರೇಕ್ಷಕರ ಮನಸೂರೆಗೊಳಿಸಿದ ಕನ್ನಡದ ಕಂಪಿನ ರಸದೌತಣ

ಮೈಸೂರು:ಅ.14:- ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಕೇಳಿಸದೆ ಕಲ್ಲು ಕಲ್ಲಿನಲ್ಲಿ, ಏನೇ ಕನ್ನಡತಿ ನೀ ಯಾಕೆ ಹಿಂಗಾಡ್ತಿ ಹೀಗೆ ಒಂದರ ಹಿಂದೆ ಒಂದರಂತೆ ಕನ್ನಡದ ಸೊಗಡು ಸಾರುವ ಗೀತೆಗಳ ರಸದೌತಣ ಪ್ರೇಕ್ಷಕರ ಮನಸೂರೆಗೊಳಿಸಿತು.
ನಗರದ ಅರಮನೆ ಆವರಣದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಸ್ವರಯಾನ ಕಾರ್ಯಕ್ರಮದಲ್ಲಿ ಕಲಾವಿದರಾದ ಅಜಯ್ ವಾರಿಯರ್, ಅನುರಾಧಾ ಭಟ್ ಮತ್ತು ತಂಡದವರು ಪ್ರೇಕ್ಷಕರನ್ನು ಸ್ವರ ಸಾಗರದಲ್ಲಿ ತೇಲುವಂತೆ ಮಾಡಿದರು.


ಕಲಾವಿದ ಅಜಯ್ ವಾರಿಯರ್ ಅವರು ಶಾರದೆ ದಯೆ ತೋ ರಿದೆ ನಿನ್ನ ಕರುಣೆಯ ಕಡಲಲ್ಲಿ ಮುತ್ತಾದೆ ಹಾಡಿನ ಮೂಲಕ ಕಾರ್ಯಕ್ರಮ ಆರಂಭಿಸಿ ಪ್ರೇಕ್ಷಕರನ್ನು ರಸದೌತಣಕ್ಕೆ ಕರೆದೊಯ್ದರು.
ಗಾಯಕಿ ಅನುರಾಧಾ ಭಟ್ ಅವರು ಕೇಳಿಸದೆ ಕಲ್ಲು ಕಲ್ಲಿನಲ್ಲಿ ಹಾಡಿದರೆ, ಅವರ ಸಂಗಡಿಗರು ಚಾಮುಂಡಿ ತಾಯಿಯಾಣೆ ನಾನೆಂದು ನಿಮ್ಮೋನೆ, ಎಲ್ಲಿರುವೆ ಮನವ ಕಾಡುವ ರೂಪಸಿಯೇ, ಯಾರಿಗಾಗಿ ಆಟ ಯಾರಿಗಾಗಿ ನೋಟ ಹೇಳು ಜಾಣನೇ ಹೇಳು ಹಾಡುಗಳನ್ನು ಹಾಡಿದಾಗ ಪ್ರೇಕ್ಷಕರು ತಲೆದೂಗಿ ಆನಂದಿಸಿದರು.
ಪ್ರೀತಿ ಮಾಡಬಾರದು ಮಾಡಿದರೆ ಜಗಕ್ಕೆ ಹೆದರಬಾರದು, ಜೋಕೆ ನಾನು ಬಳ್ಳಿಯ ಮಿಂಚು, ಸುತ್ತಮುತ್ತಲು ಸಂಜೆಗತ್ತಲು, ಮೆತ್ತ ಮೆತ್ತಗೆ ಮೈಮುಟ್ಟಲು, ಯಾರೇ ನೀನು ರೋಜಾ ಹೂವೆ ಹಾಡುಗಳಿಗೆ ಯುವ ಸಮೂಹ ಕುಣಿದು ಕುಪ್ಪಳಿಸಿತು. ಹೊಸಬೆಳಕು ಮೂಡುತ್ತಿದೆ, ಸಂತೋಷಕ್ಕೆ ಹಾಡು ಸಂತೋಷಕ್ಕೆ, ಕಾಣದಂತೆ ಮಾಯವಾದನು ಶಿವ ಕೈಲಾಸ ಸೇರಿಕೊಂಡನು ಹಾಡುಗಳಿಗೆ ಹಿರಿಯರು ಮತ್ತು ಕಿರಿಯರು ಜೊತೆಯಾಗಿ ಕುಣಿದುಸಂಭ್ರಮಿಸಿದರು.


ಸ್ವರಯಾನ ಕಾರ್ಯಕ್ರಮಕ್ಕೂ ಮುನ್ನ ಗಾಯಕಿ ಭಾಗ್ಯಶ್ರೀ ಗೌಡ ಮತ್ತು ತಂಡದವರು ಐಗಿರಿ ನಂದಿನಿ ನಂದಿತ ಮೇದಿನಿ, ಮೈಸೂರು ರಾಜ್ಯದ ದೊರೆಯೇ ರಣಧೀರ ನಾಯ್ಕನೆ ಸೇರಿದಂತೆ ಹಲವು ಭಕ್ತಿಗೀತೆಗಳನ್ನು ಹಾಡಿ ಪ್ರೇಕ್ಷಕರ ಮನದಲ್ಲಿ ಚಾಮುಂಡಿ ತಾಯಿಯನ್ನು ಸ್ಮರಿಸುವಂತೆ ಮಾಡಿದರು.