
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.28:- ಜಿಲ್ಲಾ ನ್ಯಾಯಾಲಯಕ್ಕೆ ಮತ್ತೊಮ್ಮೆ ಕಿಡಿಗೇಡಿಗಳು ಬಾಂಬ್ ಬೆದರಿಕೆ ಇ-ಮೇಲ್ ಸಂದೇಶವನ್ನು ಕಳುಹಿಸಿದ್ದು, ವಕೀಲರು ಹಾಗೂ ಸಾರ್ವಜನಿಕರು ಆತಂಕಗೊಂಡಿದ್ದಾರೆ.
ಚಾಮರಾಜನಗರ ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಲಯಕ್ಕೆ ಡಾರ್ಕ್ ವೆಬ್ ಮೂಲಕ ಇ-ಮೇಲ್ ಕಳುಹಿಸಲಾಗಿದ್ದು, ಅದರಲ್ಲಿ ತಮಿಳುನಾಡು ಮಾಜಿ ಸಿಎಂ ಸ್ಟಾಲಿನ್ ಪತ್ನಿ ದುರ್ಗಾ ಸ್ಟಾಲಿನ್ ಪ್ರವಾದಿ ಮಹಮ್ಮದ್ಗೆ ಅಪಮಾನ ಮಾಡಿದ್ದು, ಚಾಮರಾಜನಗರ ಕೋರ್ಟ್ ರಸ್ತೆಯಲ್ಲಿ 3 ಸಿಲಿಕಾನ್ ಬಾಂಬ್, ನ್ಯಾಯಾಲಯದ ರೆಕಾರ್ಡ್ ರೂಂ ನಲ್ಲಿ 3 ಹಾಗೂ ಇ-ಸೇವಾ ಕೇಂದ್ರದಲ್ಲಿ 2 ಬಾಂಬ್ ಇಡಲಾಗಿದೆ. ಶನಿವಾರ ಮಧ್ಯಾಹ್ನ 2:25ಕ್ಕೆ ಸ್ಫೋಟಗೊಳ್ಳಲಿವೆ ಎಂದು ಇ-ಮೇಲ್ ಕಳುಹಿಸಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಇ-ಮೇಲ್ ಬಂದ ಮಾಹಿತಿ ಅರಿತು, ನ್ಯಾಯಾಲಯದ ಸಿಬ್ಬಂದಿಗಳು, ವಕೀಲರು ಹಾಗೂ ಸಾರ್ವಜನಿಕರು ಆತಂಕಗೊಂಡಿದ್ದರು. ಈ ವೇಳೆ ಎಲ್ಲರನ್ನೂ ನ್ಯಾಯಾಲಯದಿಂದ ಹೊರಗೆ ಕಳುಹಿಸಿ ಜಿಲ್ಲಾ ಪೆÇಲೀಸರು ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳಗಳ ಮೂಲಕ ಪರಿಶೀಲನೆ ನಡೆಸಿದ್ದಾರೆ.
ಎರಡು ದಿನಗಳ ಹಿಂದೆಯೂ ಬಾಂಬ್ ಇಟ್ಟಿರುವ ಬೆದರಿಕೆ: ಕಳೆದ ಎರಡು ದಿನಗಳ ಹಿಂದೆಯೂ ಕೂಡ ಇದೇ ನ್ಯಾಯಾಲಯಕ್ಕೆ ಅಜ್ಮಲ್ ಕಸಬ್ ಎಂಬಾತನ ಹೆಸರಿನಲ್ಲಿ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಇಂದು ಮತ್ತೊಮ್ಮೆ ಅದೇ ರೀತಿಯ ಬೆದರಿಕೆಯ ಸಂದೇಶ ಬಂದಿದೆ.
ಕೋರ್ಟ್ ಸಮಯ ವ್ಯರ್ಥ:
ಈ ಕುರಿತು ವಕೀಲ ಪ್ರಸನ್ನಕುಮಾರ್ ಮಾತನಾಡಿ, ಕೆಲ ಕಿಡಿಗೇಡಿಗಳು ನ್ಯಾಯಾಂಗ ವ್ಯವಸ್ಥೆಯನ್ನೇ ಗುರಿಯಾಗಿಸಿ ಬಾಂಬ್ ಬೆದರಿಕೆ ಕಳುಹಿಸುತ್ತಿದ್ದಾದೆ. ಎರಡು ದಿನದ ಅಂತರದಲ್ಲಿ ಎರಡನೇ ಬಾರಿ ಇ-ಮೇಲ್ ಸಂದೇಶ ಬಂದಿದ್ದು ನ್ಯಾಯಾಧೀಶರು, ವಕೀಲರು, ಕಕ್ಷಿದಾರರು ಆತಂಕದಲ್ಲಿದ್ದಾರೆ. ಕಲಾಪಗಳು ನಡೆಯದಿರುವುದರಿಂದ ಸಮಯ ವ್ಯರ್ಥವಾಗಿದೆ. ಕಕ್ಷಿದಾರರು ದೂರದ ಊರುಗಳಿಂದ ಬಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಚಾಮರಾಜನಗರ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ಮೇಲ್ ಐಡಿಗೆ ಇವತ್ತೊಂದು ಕ್ರಿಯೇಟೆಡ್ ಮೇಲ್ ನಿಂದ ನ್ಯಾಯಾಲಯದಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಸಂದೇಶ ಬಂದಿದೆ. ಹೀಗಾಗಿ ಬಾಂಬ್ ಸ್ಕ್ವಾಡ್ ನವರು, ಪೆÇಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಮೊನ್ನೆ 24ನೇ ತಾರಿಕು ಇದೇ ರೀತಿ ಸಂದೇಶ ಬಂದಿತ್ತು, ತಪಾಸಣೆ ನಡೆಸಿದಾಗ ಅದೊಂದು ಹುಸಿ ಬಾಂಬ್ ಕರೆ ಅಂತಾ ಗೊತ್ತಾಯ್ತು. ಈ ಹಿಂದೆ ಒಂದೂವರೆ ತಿಂಗಳ ಹಿಂದೆ ಮೈಸೂರಿನ ನ್ಯಾಯಾಲಯಕ್ಕೂ ಬಾಂಬ್ ಹಾಕಿದ್ದೇವೆ ಅಂತಾ ಸಂದೇಶ ಬಂದಿತ್ತು. ಅಲ್ಲೂ ಸಹ ನ್ಯಾಯಾಧೀಶರನ್ನು, ಕೋರ್ಟ್ ಸಿಬ್ಬಂದಿಯನ್ನು, ವಕೀಲರನ್ನು ಹೊರಗೆ ಕಳಹಿಸಿ ಪೆÇಲೀಸರು ತಪಾಸಣೆ ಮಾಡಿದ್ದರು. ಬಳ್ಳಾರಿ, ತುಮಕೂರು, ಶಿವಮೊಗ್ಗದಲ್ಲೂ ಹೀಗೆ ಆಗಿತ್ತು. ಹಿಂದೆ ಬೆಂಗಳೂರಿನಲ್ಲೂ ಸಹ ಇದೇ ತರ ಮಾಡಿದ್ದರು ಅಂತಾ ಅವರು ತಿಳಿಸಿದರು.
ಈ ರೀತಿ ಪದೇ ಪದೆ ಬೆದರಿಕೆ ಹಾಕಿ ಜನರನ್ನು ಭಯಗೊಳಿಸುತ್ತಾ ಇದ್ದಾರೆ. ಈ ರೀತಿ ಆಗ್ತಾ ಇರೋದರಿಂದ ನಮಗೆಲ್ಲಾ ಪ್ಯಾನಿಕ್, ನ್ಯಾಯಾಧೀಶರು ಭಯ ಪಡಬೇಕು, ವಕೀಲರು ಭಯ ಪಡಬೇಕು, ಜನರಿಗೂ ಭಯ. ಯಾಕೆ ಹೀಗೆ ಮಾಡ್ತಾರೆ ಅನ್ನೋದು, ಅದರಲ್ಲೂ ನ್ಯಾಯಾಲಯಗಳಿಗೆ ಈ ರೀತಿ ಮೆಸ್ಸೇಜ್ ಹಾಕೋದು ಏಕೆ ಅನ್ನೋ ಪ್ರಶ್ನೆ ಕಾಡುತ್ತೆ. ನ್ಯಾಯಲಯಗಳನ್ನು ಗುರಿಯಾಗಿಸಿಕೊಂಡು ಈ ರೀತಿ ಸಂದೇಶ ಕಳಿಸುವ ಮೂಲಕ ಸಾರ್ವಜನಿಕರನ್ನು ಭಯಬೀಳಿಸುವ ಕೆಲಸ ನಡೀತಿದೆ. ಪರೋಕ್ಷವಾಗಿ ಇದು ಉಗ್ರಗಾಮಿ ಕೃತ್ಯ. ಹಾಗಾಗಿ ಇದರ ಬಗ್ಗೆ ಕರ್ನಾಟಕ ಸರ್ಕಾರ, ಹೋಮ್ ಮಿನಿಸ್ಟರ್ ಪರಿಶೀಲನೆ ಮಾಡಬೇಕು. ಸ್ಪೆಷಲ್ ಟೀಂ ಮಾಡಿ ತನಿಖೆಗೆ ವಹಿಸಬೇಕು ಮತ್ತು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ವಕೀಲರು ಒತ್ತಾಯಿಸಿದ್ದಾರೆ.

























