
ಸಂಜೆವಾಣಿ ನ್ಯೂಸ್
ಮೈಸೂರು: ಅ.07:- ಮೈಸೂರು ದಸರಾ ಮಹೋತ್ಸವ-2026 ರ ಹಿನ್ನಲೆ ಅ.14 ರಿಂದ 19 ರವರೆಗೆ 4 ದಿನಗಳ ಕಾಲ ಯೋಗ ದಸರಾ ನಡೆಯಲಿದ್ದು, ಅ.14ರಂದು ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದು ಭೂ ದಾಖಲೆಗಳ ಉಪನಿರ್ದೇಶಕರು ಹಾಗೂ ಯೋಗ ದಸರಾ ಉಪವಿಶೇಷಾಧಿಕಾರಿ ರಮ್ಯ ಅವರು ತಿಳಿಸಿದ್ದಾರೆ.
ಮಂಗಳವಾರ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಅವರು ಅಕ್ಟೋಬರ್ 14, 16, 18 ಹಾಗೂ 19 ರಂದು ನಾಲ್ಕು ದಿನಗಳ ಕಾಲ ಯೋಗ ದಸರಾ ಹಮ್ಮಿಕೊಂಡಿದ್ದು ಅಕ್ಟೋಬರ್ 14 ರಂದು ಬೆಳಗ್ಗೆ 10 ಗಂಟೆಗೆ ನಗರದ ಜೆಕೆ ಮೈದಾನದಲ್ಲಿರುವ ಮೈಸೂರು ಮೆಡಿಕಲ್ ಕಾಲೇಜಿನ ಅಲ್ಯೂಮಿನಿ ಸಭಾಂಗಣದಲ್ಲಿ ಆರೋಗ್ಯ ಸಚಿವರಾದ ಯು.ಟಿ ಖಾದರ್ ಅವರು ಉದ್ಘಾಟನೆ ಮಾಡುವರು ಅಂದು ಅದೇ ವೇದಿಕೆಯಲ್ಲಿ ಒಂದು ದಿನದ ಯೋಗ ವೈಜ್ಞಾನಿಕ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಹೇಳಿದರು.
ವೈಜ್ಞಾನಿಕ ವಿಚಾರ ಸಂಕಿರಣದಲ್ಲಿ ಆರೋಗ್ಯಕರ ಜೀವನ ನಡೆಸಲು ಯೋಗದ ಪಾತ್ರ ಹಾಗೂ ಇನ್ನಿತರೆ ವಿಷಯಗಳ ಬಗ್ಗೆ ಡಾ: ಎಂ ಯು ಸುಜನ್, ಡಾ: ಪಿ ಸುಧಾಕರ್, ಡಾ ಹರೀಶ್ ಬಾಬು ಹಾಗೂ ಡಾ: ಅರುಣ್ ಪಿ.ಜಿ ಅವರುಗಳು ವಿಚಾರ ಸಂಕಿರಣ ನಡೆಸಿಕೊಡಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕೋರಿದೆ.
ಜಿಲ್ಲಾ ಆಯುಷ್ ಅಧಿಕಾರಿ ಡಾ: ರೇಣುಕಾ ದೇವಿ ಅವರು ಮಾತನಾಡಿ ಅ.16 ರಂದು ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆಯನ್ನು ವಸ್ತುಪ್ರದರ್ಶನ ಆವರಣದ ಪಿ.ಕಾಳಿಂಗರಾವ್ ಸಭಾಂಗಣದಲ್ಲಿ ಆಯೋಜಿಸಿದ್ದು, ಅಂದು ಬೆಳಗ್ಗೆ 10 ಗಂಟೆಗೆ ಶಾಸಕರಾದ ಟಿ.ಎ.ಸ್.ಶ್ರೀವತ್ಸ ಅವರು ಉದ್ಘಾಟನೆ ಮಾಡಲಿದ್ದಾರೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವ ಸ್ಪರ್ಧಿಗಳು ಆನ್ ಲೈನ್ ಮುಖಾಂತರ ರಿಜಿಸ್ಟರ್ ಮಾಡಿಕೊಳ್ಳಬಹುದು, ಪ್ರಥಮ ಬಹುಮಾನ 3000, ದ್ವಿತೀಯ ಬಹುಮಾನ 2500 ಹಾಗೂ ತೃತೀಯ ಬಹುಮಾನ 2000 ರೂ.ಗಳ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಅ.18 ರಂದು ಗ್ರಾಮೀಣ ಯೋಗ ದಸರಾ ಕಾರ್ಯಕ್ರಮವನ್ನು ನಂಜನಗೂಡು ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದು, ಶಾಸಕರಾದ ದರ್ಶನ್ ದೃವನಾರಾಯಣ್ ಅವರು ಉದ್ಘಾಟಿಸುವರು ಎಂದು ಮಾಹಿತಿ ನೀಡಿದರು.
ಯೋಗ ದಸರಾ ಉಪಸಮಿತಿ ಕಾರ್ಯಾಧ್ಯಕ್ಷೆ ನಿರೂಪ್ ವೆಸ್ಲಿ ಅವರು ಮಾತನಾಡಿ ಅ.19ರಂದು ಯೋಗ ಚಾರಣ ಹಾಗೂ ದುರ್ಗಾ ನಮಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅಂದು ಬೆಳಗ್ಗೆ 6 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲಿನಿಂದ ಮೆಟ್ಟಿಲುಗಳ ಮೂಲಕ ದೇವಸ್ಥಾನದವರೆಗೂ ಚಾರಣ ಮಾಡುವುದು ಹಾಗೂ ಬೆಳಗ್ಗೆ 8 ಗಂಟೆಗೆ ದೆವಸ್ಥಾನದ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು ದುರ್ಗಾ ನಮಸ್ಕಾರ ಯೋಗಾಸನ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಟಿ ದೇವೇಗೌಡ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಗಣ್ಯರಾದ ಸುಶೀಲ್, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕಾರಾದ ನಿರ್ಮಲಾ ಅವರು ಭಾಗವಹಿಸಿದ್ದರು.

























