
ಆಳಂದ,ಸೆ.8-ತಾಲೂಕಿನ ನರೋಣಾ ಗ್ರಾಮದ ಮನೆಯೊಂದರಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು, ಈ ಬಗ್ಗೆ ನರೋಣ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಮೃತ ಮಹಿಳೆಯನ್ನು ಅಷ್ಟೂರ ಗ್ರಾಮದ ನಾಗಮ್ಮ ಗಂಡ ಶ್ರೀಮಂತ ಕೆರಮಗಿ (35) ಎಂದು ಗುರುತಿಸಲಾಗಿದೆ. ನರೋಣಾ ಗ್ರಾಮದಲ್ಲಿ ವಾಸವಿದ್ದು ಅವರು ಸಮೀಪದ ಖಾಸಗಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು ಎಂದು ಪೆÇಲೀಸರು ತಿಳಿಸಿದ್ದಾರೆ.
ಘಟನೆ ಬೆಳಕಿಗೆ ಬಂದಿದ್ದು ಹೇಗೆ ?
ಸೆಪ್ಟೆಂಬರ್ 6ರಂದು ಸಂಜೆ ಸುಮಾರು 5.30ರ ವೇಳೆಗೆ ಮೃತ ಮಹಿಳೆಯ ಮನೆಯ ಬಾಗಿಲು ಮುಚ್ಚಿದ್ದು, ಒಳಗಿನಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಈ ವಿಷಯವನ್ನು ಸಂಬಂಧಿಕರಿಗೆ ತಿಳಿಸಿದ್ದರು. ಸುದ್ದಿ ತಿಳಿದ ಸಹೋದರ ಮಾಣಿಕ ಹಾಗೂ ಗ್ರಾಮಸ್ಥರು ಒಟ್ಟುಗೂಡಿ ರಾತ್ರಿ 8 ಗಂಟೆ ಸುಮಾರಿಗೆ ಮನೆಗೆ ತೆರಳಿ ಬಾಗಿಲು ತೆರೆದು ನೋಡಲಾಗಿ, ನಾಗಮ್ಮ ಮೃತಪಟ್ಟಿರುವುದು ಕಂಡುಬಂದಿದೆ. ಶವ ಊದಿಕೊಂಡು ಕೊಳೆಯಲಾರಂಭಿಸಿದ್ದು, ಕುತ್ತಿಗೆಯ ಕೆಳಭಾಗದಲ್ಲಿ ಗಾಯದ ಗುರುತುಗಳು ಪತ್ತೆಯಾಗಿವೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಮೃತಳ ಕುಟುಂಬ ಹಿನ್ನೆಲೆ
ಸುಮಾರು 6 ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ನಾಗಮ್ಮ, ತನ್ನ ಮೂವರು ಮಕ್ಕಳೊಂದಿಗೆ ಭಾವ ರಾಜೇಂದ್ರ ಅವರೊಂದಿಗೆ ನರೋಣಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮಕ್ಕಳನ್ನು ಕಲಬುರಗಿಯ ಶಾಲೆಯ ವಸತಿನಿಲಯದಲ್ಲಿ ಬಿಟ್ಟಿದ್ದರು. ಘಟನೆಗೆ ಸುಮಾರು 20 ದಿನಗಳ ಮೊದಲೇ ಭಾವ ರಾಜೇಂದ್ರ ತಮ್ಮ ಸ್ವಗ್ರಾಮಕ್ಕೆ ತೆರಳಿದ್ದರಿಂದ ನಾಗಮ್ಮ ಒಬ್ಬರೇ ಮನೆಯಲ್ಲಿದ್ದರು ಎಂದು ತಿಳಿದುಬಂದಿದೆ.
ಪ್ರಕರಣ ದಾಖಲು
ಸೆಪ್ಟೆಂಬರ್ 4ರ ಸಂಜೆ 5 ಗಂಟೆಯಿಂದ ಸೆಪ್ಟೆಂಬರ್ 6ರ ಸಂಜೆ 5.30ರ ಅವಧಿಯಲ್ಲಿ ದುಷ್ಕರ್ಮಿಗಳು ಕುತ್ತಿಗೆ ಹಿಸುಕಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಮೃತಳ ಸಹೋದರ ಮಾಣಿಕ ತಂದೆ ಕಾಮಶಾ ಪೂಜಾರಿ (ಬೋಧನವಾಡಿ ಗ್ರಾಮ) ಅವರ ದೂರಿನ ಮೇರೆಗೆ ನರೋಣ ಠಾಣೆಯಲ್ಲಿ ಗುನ್ನೆ ಸಂಖ್ಯೆ 137/2026ರ ಅಡಿ ಭಾರತೀಯ ನ್ಯಾಯ ಸಂಹಿತೆ (ಬಿ.ಎನ್.ಎಸ್) ಕಲಂ 103(1) ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪಿ.ಎಸ್.ಐ ಮಹಾಂತೇಶ ಪಾಟೀಲ ತನಿಖೆ ಕೈಗೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಪೆÇಲೀಸರು ಶೋಧ ನಡೆಸುತ್ತಿದ್ದಾರೆ.































