Home ಮುಖಪುಟ ಸುದ್ದಿ ಇಸ್ರೋ ಖಾಸಗೀಕರಣ ಆತಂಕ: ಸ್ಪಷ್ಟನೆಗೆ ನೌಕರರ ಆಗ್ರಹ

ಇಸ್ರೋ ಖಾಸಗೀಕರಣ ಆತಂಕ: ಸ್ಪಷ್ಟನೆಗೆ ನೌಕರರ ಆಗ್ರಹ

ನವದೆಹಲಿ, ಸೆ. ೬-ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ಇಸ್ರೋ) ಖಾಸಗಿ ಸಹಭಾಗಿತ್ವ ಮತ್ತು ಖಾಸಗೀಕರಣದ ವೇಗ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಸಂಸ್ಥೆಯ ನೌಕರರಲ್ಲಿ ಭವಿಷ್ಯದ ಕುರಿತು ತೀವ್ರ ಆತಂಕ ಹಾಗೂ ಅನಿಶ್ಚಿತತೆ ವ್ಯಕ್ತವಾಗಿದೆ.


ಇಸ್ರೋದ ಪ್ರಮುಖ ಕೇಂದ್ರಗಳ ನೌಕರರ ಸಂಘಟನೆಗಳು ಒಗ್ಗೂಡಿ ಇಸ್ರೋ ಅಧ್ಯಕ್ಷರು ಹಾಗೂ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾದ ಡಾ.ವಿ.ನಾರಾಯಣನ್ ಅವರಿಗೆ ೫ ಪುಟಗಳ ಸುದೀರ್ಘ ಪತ್ರ ಬರೆದಿದ್ದು, ಸಂಸ್ಥೆಯ ಭವಿಷ್ಯದ ಪಾತ್ರ ಹಾಗೂ ಹಕ್ಕುಗಳ ಕುರಿತು ಅಧಿಕೃತ ಲಿಖಿತ ಸ್ಪಷ್ಟೀಕರಣ ನೀಡುವಂತೆ ಆಗ್ರಹಿಸಿವೆ.


ಇತ್ತೀಚೆಗೆ ಜಿಎಸ್‌ಎಲ್‌ವಿ ಎಫ್-೧೭/ಇಒಎಸ್-೦೫ ಯಶಸ್ವಿ ಉಡಾವಣೆಯ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ವಿಎಸ್‌ಎಸ್‌ಸಿ, ಎಸ್‌ಡಿಎಸ್‌ಸಿ , ಯುಆರ್‌ಎಸ್‌ಸಿ ಎಲ್‌ಪಿಎಸ್‌ಸಿ , ಎಸ್‌ಎಸಿ , ಎನ್‌ಆರ್‌ಎಸ್‌ಸಿ ಮತ್ತು ಐಪಿಆರ್‌ಸಿ ಸೇರಿದಂತೆ ಪ್ರಮುಖ ಕೇಂದ್ರಗಳ ೯ ಪ್ರಾತಿನಿಧಿಕ ಸಂಘಟನೆಗಳು ಈ ಪತ್ರಕ್ಕೆ ಸಹಿ ಹಾಕಿವೆ. ಈ ಸಂಘಟನೆಗಳು ಇಸ್ರೋದ ಒಟ್ಟು ೧೮,೧೦೦ ನೌಕರರ ಪೈಕಿ ಸುಮಾರು ೫,೦೦೦ ಸಿಬ್ಬಂದಿಯನ್ನು (ಶೇ. ೨೭ ರಷ್ಟು ನೌಕರರನ್ನು) ಪ್ರತಿನಿಧಿಸುತ್ತವೆ.


ನೌಕರರ ಆತಂಕಕ್ಕೆ ಮುಖ್ಯ ಕಾರಣಗಳೇನು?

ಇನ್‌ಸ್ಪೇಸ್ ಅಧ್ಯಕ್ಷ ಪವನ್ ಗೋಯೆಂಕಾ ಅವರು ಇತ್ತೀಚೆಗೆ ಮಾತನಾಡಿ, “ಮುಂದಿನ ದಿನಗಳಲ್ಲಿ ಇಸ್ರೋ ಯಾವುದೇ ರಾಕೆಟ್‌ಗಳನ್ನು ಸ್ವತಃ ತಯಾರಿಸುವುದಿಲ್ಲ ಈ ಕೆಲಸವನ್ನು ಖಾಸಗಿ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳು ನಿರ್ವಹಿಸಲಿವೆ” ಎಂದು ಹೇಳಿದ್ದರು. ಈ ಹೇಳಿಕೆ ನೌಕರರ ಆತಂಕವನ್ನು ಇಮ್ಮಡಿಗೊಳಿಸಿದೆ.


ಸಣ್ಣ ಉಪಗ್ರಹ ಉಡಾವಣಾ ವಾಹನ ತಂತ್ರಜ್ಞಾನವನ್ನು ಎಚ್‌ಎಎಲ್ ಸಂಸ್ಥೆಗೆ ಹಸ್ತಾಂತರಿಸುವುದು, ದೇಶದ ಅತಿದೊಡ್ಡ ಉಡಾವಣಾ ವಾಹನ ಎಲ್‌ವಿಎಂ೩ ಹಾಗೂ ಪಿಎಸ್‌ಎಲ್‌ವಿ ತಂತ್ರಜ್ಞಾನಗಳನ್ನು ಖಾಸಗಿಯವರಿಗೆ ವಹಿಸಲು ಬಿಡ್ ಕರೆದಿರುವುದು ನೌಕರರ ಅಸಮಾಧಾನಕ್ಕೆ ಕಾರಣವಾಗಿದೆ.


ದೈನಂದಿನ ಹಾಗೂ ವಾಡಿಕೆಯ ಉಪಗ್ರಹ ತಯಾರಿಕೆಯನ್ನು ಖಾಸಗಿಯವರಿಗೆ ವಹಿಸುವುದು ಮತ್ತು ತಮಿಳುನಾಡಿನ ಕುಲಶೇಖರಪಟ್ಟಣಂನಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಬಾಹ್ಯಾಕಾಶ ಉಡಾವಣಾ ಸಂಕೀರ್ಣದ ಮೂಲಸೌಕರ್ಯಗಳನ್ನು ಖಾಸಗಿ ಸಂಸ್ಥೆಗಳಿಗೆ ಮುಕ್ತಗೊಳಿಸುತ್ತಿರುವ ವರದಿಗಳು ಕಳವಳ ಹೆಚ್ಚಿಸಿವೆ.


ನೌಕರರ ಪ್ರಮುಖ ಕಳವಳಗಳು ಮತ್ತು ಪ್ರಶ್ನೆಗಳು
ರಾಕೆಟ್ ನಿರ್ಮಾಣ ಎನ್ನುವುದು ಕೇವಲ ಜೋಡಣೆಯಲ್ಲ. ದಶಕಗಳ ಕಾಲ ಶ್ರಮಿಸಿ ಗಳಿಸಿದ ತಾಂತ್ರಿಕ ಸಾಮರ್ಥ್ಯ, ಸುರಕ್ಷತಾ ನಿಯಮಗಳು ಮತ್ತು ಅನುಭವ ಸಂಸ್ಥೆಯಿಂದ ಹೊರಟುಹೋಗುವ ಅಪಾಯವಿದೆ.

ಹುದ್ದೆಗಳ ಕಡಿತ ಮತ್ತು ಬಡ್ತಿ ಅಭಾವ: ಉತ್ಪಾದನಾ ಚಟುವಟಿಕೆಗಳು ಹೊರಗಿನವರಿಗೆ ಹೋದರೆ ಇಸ್ರೋ ಒಳಗೆ ಕೆಲಸದ ಪ್ರಮಾಣ ಕಡಿಮೆಯಾಗಲಿದೆ. ಇದರಿಂದ ನೌಕರರ ಬಡ್ತಿ, ಕೌಶಲ್ಯ ಅಭಿವೃದ್ಧಿ ಮತ್ತು ಹೊಸ ನೇಮಕಾತಿ ಸಂಪೂರ್ಣವಾಗಿ ಕುಸಿಯಲಿದೆ.

ಸಾರ್ವಜನಿಕ ಹಣದ ತಂತ್ರಜ್ಞಾನ ಮತ್ತು ಉದ್ಯೋಗ ಭದ್ರತೆ: ಸಾರ್ವಜನಿಕರ ತೆರಿಗೆ ಹಣದಿಂದ ಅಭಿವೃದ್ಧಿಪಡಿಸಿದ ತಂತ್ರಜ್ಞಾನವನ್ನು ಖಾಸಗಿ ಗುತ್ತಿಗೆದಾರರು ಬಳಸಿಕೊಂಡು ಕೆಲಸ ಮಾಡುತ್ತಿದ್ದರೆ, ಇಸ್ರೋದ ಹಾಲಿ ಸಿಬ್ಬಂದಿ ಹೆಚ್ಚುವರಿಯಾಗುವ ಅಥವಾ ಕಾರ್ಯರಹಿತರಾಗುವ ಭೀತಿ ಇದೆ.

ಪ್ರಸ್ತುತ ಇಸ್ರೋದಲ್ಲಿ ೧೮,೧೪೨ ಮಂಜೂರಾದ ಹುದ್ದೆಗಳ ಪೈಕಿ ೧೫,೫೨೯ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ೨,೬೧೩ ಹುದ್ದೆಗಳು (ಶೇ. ೧೪.೪ ರಷ್ಟು) ಖಾಲಿ ಇವೆ. ಖಾಸಗೀಕರಣ ಹೆಚ್ಚಾದರೆ ಗ್ರೂಪ್ ’ಎ’, ’ಬಿ’ ಮತ್ತು ’ಸಿ’ ಹುದ್ದೆಗಳಿಗೆ ಹೊಸ ನೇಮಕಾತಿ ಸಾರ್ವಜನಿಕ ವಲಯದ ಕನಸು ಹೊತ್ತ ಯುವಕರಿಗೆ ದಕ್ಕದಂತಾಗುತ್ತದೆ. ಮಹತ್ವದ ಉಡಾವಣಾ ವಾಹನಗಳ ಅಭಿವೃದ್ಧಿ, ಪರೀಕ್ಷೆ ಮತ್ತು ಕಾರ್ಯಾಚರಣೆಗಳನ್ನು ಸರ್ಕಾರಿ ಸಂಸ್ಥೆಯ ಅಡಿಯಲ್ಲಿಡುವುದು ದೇಶದ ಆಯಕಟ್ಟಿನ ಭದ್ರತೆ, ಹೊಣೆಗಾರಿಕೆ ಮತ್ತು ಗುಣಮಟ್ಟದ ದೃಷ್ಟಿಯಿಂದ ಅತ್ಯಗತ್ಯ ಎಂದು ನೌಕರರು ಪ್ರತಿಪಾದಿಸಿದ್ದಾರೆ.

ನೌಕರರ ಅಂತಿಮ ಬೇಡಿಕೆ ಏನು?
ಸಂಘಟನೆಗಳು ತಾವು ಖಾಸಗಿ ವಲಯದ ಭಾಗವಹಿಸುವಿಕೆಗೆ ಅಥವಾ ಎನ್‌ಎಸ್‌ಐಎಲ್ ಮೂಲಕ ನಡೆಯುವ ವಾಣಿಜ್ಯೀಕರಣಕ್ಕೆ ವಿರೋಧಿಗಳಲ್ಲ ಎಂಬುದನ್ನು ಸ್ಪಷ್ಟಪಡಿಸಿವೆ. “ಖಾಸಗಿ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು” ಮತ್ತು “ಇಸ್ರೋದ ಸ್ವಂತ ತಯಾರಿಕಾ ಸಾಮರ್ಥ್ಯವನ್ನು ಹಂತ ಹಂತವಾಗಿ ನಾಶಪಡಿಸುವುದು” – ಈ ಎರಡರ ನಡುವೆ ಸ್ಪಷ್ಟ ಗೆರೆ ಎಳೆಯಬೇಕು ಎಂಬುದು ಅವರ ಆಗ್ರಹವಾಗಿದೆ.
ಬಾಹ್ಯಾಕಾಶ ಇಲಾಖೆಯು ಈ ಕೆಳಗಿನ ವಿಷಯಗಳ ಬಗ್ಗೆ ಅಧಿಕೃತ ಲಿಖಿತ ಸ್ಪಷ್ಟೀಕರಣ ನೀಡಬೇಕು ಮತ್ತು ಮಾನ್ಯತೆ ಪಡೆದ ನೌಕರರ ಸಂಘಟನೆಗಳೊಂದಿಗೆ ಮುಕ್ತ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ
ಉಡಾವಣಾ ವಾಹನಗಳು, ಉಪಗ್ರಹಗಳ ತಯಾರಿಕೆ ಹಾಗೂ ಮೂಲಸೌಕರ್ಯ ನಿರ್ವಹಣೆಯಲ್ಲಿ ಇಸ್ರೋದ ಭವಿಷ್ಯದ ಪಾತ್ರವೇನು?
ಭವಿಷ್ಯದ ಸಿಬ್ಬಂದಿ ಯೋಜನೆ ಹಾಗೂ ನೇಮಕಾತಿ ನೀತಿ ಹೇಗಿರಲಿದೆ,ಇಸ್ರೋ ಕೇವಲ ಸಂಶೋಧನಾ ಸಂಸ್ಥೆಯಾಗಿ ಉಳಿಯಲಿದೆಯೇ ಅಥವಾ ವಾಸ್ತವಿಕ ಬಾಹ್ಯಾಕಾಶ ವ್ಯವಸ್ಥೆಗಳನ್ನು ನಿರ್ಮಿಸುವ ಸಂಸ್ಥೆಯಾಗಿಯೂ ಮುಂದುವರಿಯಲಿದೆಯೇ ಎಂಬುದಕ್ಕೆ ಲಿಖಿತ ಸ್ಪಷ್ಟೀಕರಣ ನೀಡಬೇಕೆಂದು ಒತ್ತಾಯಿಸಿದೆ.

ಭಾರತೀಯ ಬಾಹ್ಯಾಕಾಶ ನೀತಿ ೨೦೨೩ರ ನೀತಿ ಏನಿದೆ?

ಸರ್ಕಾರೇತರ ಸಂಸ್ಥೆಗಳು ಉಪಗ್ರಹಗಳ ವಿನ್ಯಾಸ, ತಯಾರಿಕೆ, ಉಡಾವಣಾ ವಾಹನಗಳ (ರಾಕೆಟ್) ಅಭಿವೃದ್ಧಿ ಮತ್ತು ಉಡಾವಣಾ ಕೇಂದ್ರಗಳನ್ನು ಸ್ವತಂತ್ರವಾಗಿ ಸ್ಥಾಪಿಸಿ ನಿರ್ವಹಿಸಲು ಅವಕಾಶ ನೀಡಲಾಗಿದೆ. ಇಸ್ರೋ ಇನ್ನು ಮುಂದೆ ದೈನಂದಿನ ವಾಡಿಕೆಯ ರಾಕೆಟ್ ಹಾಗೂ ಉಪಗ್ರಹ ತಯಾರಿಕೆಯಿಂದ ಹಂತ-ಹಂತವಾಗಿ ಹೊರಬರಲಿದ್ದು, ಸುಧಾರಿತ ಸಂಶೋಧನೆ ಮತ್ತು ಅಭಿವೃದ್ಧಿ , ಚಂದ್ರಯಾನ/ಗಗನಯಾನದಂತಹ ಪ್ರಮುಖ ಅನ್ವೇಷಣೆಗಳು ಹಾಗೂ ಹೊಸ ತಂತ್ರಜ್ಞಾನಗಳ ಆವಿಷ್ಕಾರಕ್ಕೆ ಆದ್ಯತೆ ನೀಡಲಿದೆ.

ಇಸ್ರೋ ಅಭಿವೃದ್ಧಿಪಡಿಸಿದ ಪಕ್ವಗೊಂಡ ತಂತ್ರಜ್ಞಾನಗಳು ಹಾಗೂ ಉಡಾವಣಾ ಸೇವೆಗಳನ್ನು ವಾಣಿಜ್ಯೀಕರಣಗೊಳಿಸುವ ಜವಾಬ್ದಾರಿಯನ್ನು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ನಿರ್ವಹಿಸಲಿದೆ. ಇನ್-ಸ್ಪೇಸ್ ಸಂಸ್ಥೆಯ ಪಾತ್ರ ಮತ್ತು ಜವಾಬ್ದಾರಿಗಳು ಎನ್ನುವುದು ಬಾಹ್ಯಾಕಾಶ ಇಲಾಖೆಯ ಅಡಿಯಲ್ಲಿ ಕಾರ್ಯಾಚರಿಸುವ ಸ್ವಾಯತ್ತ ಹಾಗೂ ಏಕ-ಗವಾಕ್ಷಿ ನಿಯಂತ್ರಕ ಸಂಸ್ಥೆಯಾಗಿದೆ.

ಖಾಸಗಿ ಕಂಪನಿಗಳು ಬಾಹ್ಯಾಕಾಶ ಚಟುವಟಿಕೆಗಳನ್ನು ನಡೆಸಲು, ಉಪಗ್ರಹಗಳನ್ನು ಕಕ್ಷೆಗೆ ಉಡಾವಣೆ ಮಾಡಲು ಹಾಗೂ ಸಂವಹನ ಸೇವೆಗಳನ್ನು ಒದಗಿಸಲು ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಇನ್-ಸ್ಪೇಸ್ ನೀಡುತ್ತದೆ. ಖಾಸಗಿ ಸಂಸ್ಥೆಗಳು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಇಸ್ರೋದ ಉಡಾವಣಾ ಕೇಂದ್ರಗಳು ಪರೀಕ್ಷಾ ಸೌಲಭ್ಯಗಳು ಹಾಗೂ ತಾಂತ್ರಿಕ ಡೇಟಾಗಳನ್ನು ಬಳಸಿಕೊಳ್ಳಲು ಇನ್-ಸ್ಪೇಸ್ ಸೇತುವೆಯಾಗಿ ಕೆಲಸ ಮಾಡುತ್ತದೆ.

ತಂತ್ರಜ್ಞಾನ ಹಸ್ತಾಂತರ ಇಸ್ರೋ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳನ್ನು ಖಾಸಗಿ ರಂಗಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ. ಸುರಕ್ಷತೆ ಮತ್ತು ಮಾರ್ಗದರ್ಶಿ ಸೂತ್ರಗಳು, ಬಾಹ್ಯಾಕಾಶದಲ್ಲಿ ಕಸ/ತ್ಯಾಜ್ಯ ನಿರ್ವಹಣೆ , ಉಪಗ್ರಹಗಳ ಸುರಕ್ಷಿತ ಕಾರ್ಯಾಚರಣೆ ಹಾಗೂ ಅಂತರರಾಷ್ಟ್ರೀಯ ನಿಯಮಾವಳಿಗಳಿಗೆ ಅನುಗುಣವಾಗಿ ಖಾಸಗಿ ಸಂಸ್ಥೆಗಳು ಕೆಲಸ ಮಾಡುತ್ತಿವೆಯೇ ಎಂದು ಮೇಲ್ವಿಚಾರಣೆ ನಡೆಸುತ್ತದೆ.ಪ್ರಮುಖ ನಿಯಮಾವಳಿಗಳು