
ಕಲಬುರಗಿ,ಸೆ.8-ನಗರದ ಶರಣ ಬಸವೇಶ್ವರರ ಅನುಭವ ಮಂಟಪದ ಪ್ರಾಂಗಣದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರದಂದು ಭಕ್ತದಿಗಳಿಗೆ ನೇತ್ರ ತಪಾಸಣೆ ಮತ್ತು ಕನ್ನಡಕ ವಿತರಣೆ ಕಾರ್ಯಕ್ರಮದ ನಡೆಯಿತು. ಅಲ್ಲದೆ ಪ್ರತಿ ಶ್ರಾವಣ ಸೋಮವಾರದಂದು ಉಚಿತ ನೇತ್ರ ತಪಾಸಣೆ ಶಿಬಿರ ಆಯೊಜಿಸಿ ಶರಣನ ಭಕ್ತರಿಗೆ ಉಚಿತ ಕನ್ನಡಕವನ್ನು ವಿತರಿಸಲಾಯಿತು. ಚಿರಂಜೀವಿ ದೊಡ್ಡಪ್ಪ ಅಪ್ಪಾ ಅವರು ದೃಷ್ಟಿ ದೋಷ ಉಳ್ಳವರಿಗೆ ಕನ್ನಡಕ ವಿತರಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಅಂಧತ್ವ ಮತ್ತು ದೃಷ್ಟಿ ಮಾಂಧ್ಯತೆ ನಿಯಂತ್ರಣ ಕಾರ್ಯಕ್ರಮ, ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ ಹಾಗೂ ಆಶಾಕಿರಣ ದೃಷ್ಟಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿಗಳು ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮಾಧಿಕಾರಿಗಳಾದ ಡಾ.ರವಿಕಾಂತಿ ಕ್ಯಾತನಾಳ್ ಅವರ ನೇತೃತ್ವದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಬಸವರಾಜ ದೇಶಮುಖ್, ಡಾ.ಅಲ್ಲಮ್ಮ ಪ್ರಭು ದೇಶಮುಖ, ನೇತ್ರಾಧಿಕಾರಿಗಳಾದ ಸಿದ್ದು ಹಿರೇಮಠ, ಆಯೇಷಾ ಉಪಸ್ಥಿತರಿದ್ದರು. 280ಕ್ಕೂ ಹೆಚ್ಚು ಜನರಿಗೆ ನೇತ್ರಾ ತಪಾಸಣೆ ಮಾಡಲಾಗಿದೆ ಎಂದು ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮಾಧಿಕಾರಿ ಡಾ.ರವಿಕಾಂತಿ ಕ್ಯಾತನಾಳ್ ಹೇಳಿದರು.
ಮಹಾ ದಾಸೋಹಿ ಶರಣಬಸವೇಶ್ವರರ ಭಕ್ತರಿಗೆ ಉಚಿತ ಆರೋಗ್ಯ ತಪಾಸಣೆ ಜೊತೆಗೆ ನೇತ್ರಾ ತಪಾಸಣೆ ಮಾಡುತ್ತಿರುವ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರ ಕಾರ್ಯವನ್ನು ಪ್ರಶಂಶಿಸಿದರು. ಸರ್ವಜನಿಕರು, ಶರಣನ ಭಕ್ತರು ಶಿಬಿರದ ಸದುಪಯೋಗ ಪಡೆದುಕೊಂಡರು.































