Home ಮುಖಪುಟ ಸುದ್ದಿ ಬಸವಣ್ಣನವರ ಕುರಿತ ಅವಹೇಳನಕಾರಿ ಹೇಳಿಕೆ ಕಾನೂನು ಕ್ರಮದ ಎಚ್ಚರಿಕೆ

ಬಸವಣ್ಣನವರ ಕುರಿತ ಅವಹೇಳನಕಾರಿ ಹೇಳಿಕೆ ಕಾನೂನು ಕ್ರಮದ ಎಚ್ಚರಿಕೆ

ಬೆಂಗಳೂರು, ನ. ೧೯- ವಿಶ್ವಗುರು ಬಸವಣ್ಣನವರ ಬಗ್ಗೆ ಅವಹೇಳನಕಾರಿ ಪುಸ್ತಕ ಪ್ರಕಟಿಸಿ ವಿಡಿಯೋಗಳ ಮೂಲಕ ಬಸವಣ್ಣನವರ ಚಾರಿತ್ರ್ಯಕ್ಕೆ ಮಸಿ ಬಳಿಯುವ ಪ್ರಯತ್ನಗಳ ವಿರುದ್ಧ ಲಿಂಗಾಯತ ಸಮುದಾಯದ ಪ್ರಮುಖ ನಾಯಕರುಗಳು ಆಕ್ರೋಶ ವ್ಯಕ್ತಪಡಿಸಿದ್ದು, ಸಚಿವರಾದ ಎಂ.ಬಿ. ಪಾಟೀಲ್, ಡಾ. ಶರಣ ಪ್ರಕಾಶ್ ಪಾಟೀಲ್ ಸೇರಿದಂತೆ ಲಿಂಗಾಯತ ಸಮುದಾಯದ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.


ಅಮೆರಿಕ ಮೂಲಕ ಲೇಖಕ ರವಿ ಹಂಜ್ ಅವರು ರಾಜ್ಯದ ಸಾಂಸ್ಕೃತಿಕ ನಾಯಕ, ೧೨ನೇ ಶತಮಾನದ ಸಮಾನತೆಯ ಹರಿಕಾರ ಬಸವಣ್ಣನವರ ಚಾರಿತ್ರ್ಯಕ್ಕೆ ಮಸಿ ಬಳಿಯುವ ರೀತಿಯಲ್ಲಿ ಪುಸ್ತಕಗಳನ್ನು ಪ್ರಕಟಿಸಿ ವಿಡಿಯೋಗಳ ಮೂಲಕ ಅವರನ್ನು ಅಪಮಾನಿಸಿರುವುದನ್ನು ಖಂಡಿಸಿದ ಇವರುಗಳು, ರವಿ ವಿರುದ್ಧ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.


ಬೆಂಗಳೂರಿನ ಬಸವ ಸಮಿತಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಭಾಗಿಯಾದ ಸಚಿವರಾದ ಎಂ.ಬಿ. ಪಾಟೀಲ್, ಡಾ. ಶರಣ ಪ್ರಕಾಶ್ ಪಾಟೀಲ್, ಶಾಸಕರಾದ ಬಿ.ಆರ್. ಪಾಟೀಲ್, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಲಂಡನ್ ಮಾಜಿ ಮೇಯರ್ ಡಾ. ಧೀರಜ್ ಪಾಟೀಲ್ ಇವರುಗಳು ಬಸವಣ್ಣನವರ ವಿರುದ್ಧದ ಬರಹಗಳನ್ನು ಕಟುವಾಗಿ ಖಂಡಿಸಿದರು.


ಇಡೀ ಜಗತ್ತಿಗೆ ಸಮಾನತೆಯ ಸಂದೇಶ ಮತ್ತು ಸಂಸತ್ತಿನ ಪರಿಕಲ್ಪನೆಗೆ ಕಾರಣವಾದ ಅನುಭವ ಮಂಟಪವನ್ನು ಕೊಟ್ಟ ಕ್ರಾಂತಿ ಪುರುಷ ಬಸವಣ್ಣನವರನ್ನು ಕೊಲೆಗಡುಕು, ದರೋಡೆಕೋರ, ಲೂಟಿಕೋರ ಎಂಬಂತೆ ಬಿಂಬಿಸಿ ರವಿ ಹಂಜ್ ಲೇಖನ ಬರೆದಿದ್ದಾರೆ. ಇದನ್ನು ಸಹಿಸುವ ಪ್ರಶ್ನೆಯೇ ಇಲ್ಲ. ರವಿ ಹಂಜ್ ಅವರ ಕೈಯಲ್ಲಿ ಯಾರು ಇದನ್ನೆಲ್ಲಾ ಬರೆಸಿದ್ದಾರೆ ಎಂಬುದನ್ನು ಪತ್ತೆ ಹಚ್ಚುತ್ತೇವೆ ಎಂದರು.


ಬಸವಣ್ಣನವರ ಬಗ್ಗೆ ಈ ರೀತಿ ಮಾಡುವುದ ಸಲ್ಲದು. ಮಹಾರಾಷ್ಟ್ರಕ್ಕೆ ಹೋಗಿ ಶಿವಾಜಿ ಮಹಾರಾಜರ ಬಗ್ಗೆ ಲಘುವಾಗಿ ಮಾತನಾಡಿ ನೋಡೋಣ. ಅಲ್ಲಿನ ಜನ ಅಟ್ಟಾಡಿಸಿಕೊಂಡು ಹೊಡೆಯುತ್ತಾರೆ ಎಂದು ಗುಡುಗಿದ ಎಂ.ಬಿ. ಪಾಟೀಲ್ ಅವರು, ನಾವು ಸೌಮ್ಯ ಸ್ವಭಾವದವರು, ಕಚ್ಚಾಡುವವರಲ್ಲ. ಆದರೆ ಬಸವ ಧರ್ಮ ಮತ್ತು ವಚನಗಳ ಮೇಲೆ ಇಂತಹ ದಾಳಿ ನಡೆದರೆ ತಾಳಿಕೊಳ್ಳುವುದಿಲ್ಲ ಎಂದು ಗುಡುಗಿದರು.


ಬಸವಣ್ಣನವರ ವಿಚಾರಧಾರೆಯ ಬೆಳಕು ಜಗತ್ತಿನಾದ್ಯಂತ ಪಸರಿಸುತ್ತಿದೆ. ಇದನ್ನು ತಡೆದುಕೊಳ್ಳುವ ಶಕ್ತಿ ವಿಕೃತ ಮನಸ್ಸುಗಳಿಗೆ ಇಲ್ಲ. ಹಾಗಾಗಿಯೇ ಈ ರೀತಿ ಲೇಖನಗಳನ್ನು ಬರೆಯಲಾಗಿದೆ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಇದನ್ನೆಲ್ಲಾ ನಾವು ಸಹಿಸಲ್ಲ. ಹೋರಾಟ ನಡೆಸುತ್ತೇವೆ ಎಂದು ಶಾಸಕ ಬಿ.ಆರ್. ಪಾಟೀಲ್ ಹೇಳಿದರು.


ಈ ಸಂದರ್ಭದಲ್ಲಿ ಮಾತನಾಡಿದ ಡಾ. ಧೀರಜ್ ಪಾಟೀಲ್, ಲಂಡನ್‌ನ ಪಾರ್ಲಿಮೆಂಟ್ ಆವರಣದಲ್ಲಿ ಬಸವಣ್ಣನವರ ಪ್ರತಿಮೆ ಸ್ಥಾಪಿಸುವಾಗ ನಮಗೆ ಯಾವುದೇ ವಿರೋಧವಾಗಲಿಲ್ಲ. ಏಕೆಂದರೆ ಜಗತ್ತಿಗೆ ಬಸವಣ್ಣನವರ ವಿಚಾರಧಾರೆ ಮತ್ತು ವ್ಯಕ್ತಿತ್ವ ಏನೆಂಬುದು ಗೊತ್ತಿದೆ ಎಂದರು.
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಒಬ್ಬ ಮಹಾಪುರುಷನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಅಧಿಕಾರ ಯಾರಿಗೂ ಇಲ್ಲ. ನಾವು ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇವೆ. ಇದರ ಹಿಂದಿರುವ ಎಲ್ಲರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.