Home ಮುಖಪುಟ ಸುದ್ದಿ ಕೆಪಿಎಸ್‌ಸಿ ಅಕ್ರಮ: ಜ್ಞಾನೇಂದ್ರ, ಕನ್ನಾಳೆ ವಿರುದ್ಧ ಶೀಘ್ರ ಜಾರ್ಜ್‌ಶೀಟ್ ಸಲ್ಲಿಕೆ

ಕೆಪಿಎಸ್‌ಸಿ ಅಕ್ರಮ: ಜ್ಞಾನೇಂದ್ರ, ಕನ್ನಾಳೆ ವಿರುದ್ಧ ಶೀಘ್ರ ಜಾರ್ಜ್‌ಶೀಟ್ ಸಲ್ಲಿಕೆ

ಬೆಂಗಳೂರು,ನ.೨೦- ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶು ವೈದ್ಯಾಧಿಕಾರಿ ನೇಮಕ ಅಕ್ರಮದ ಸಂಬಂಧ ಐಎಎಸ್ ಅಧಿಕಾರಿ ಗ್ಯಾನೇಂದ್ರ ಹಾಗೂ ಮಧ್ಯವರ್ತಿ ಬಸವರಾಜ್ ಕನ್ನಾಳೆ ವಿರುದ್ಧ ವಿಶೇಷ ತನಿಖಾ ತಂಡ (ಎಸ್‌ಐಟಿ) ಒಂದೆರಡು ದಿನಗಳಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸುವ ಸಾಧ್ಯತೆಯಿದೆ.


ಹೈಕೋರ್ಟ್ ನಿರ್ದೇಶನದ ಮೇರೆಗೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ, ಪರೀಕ್ಷಾ ಅಕ್ರಮದಲ್ಲಿ ಹಲವು ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಹಾಗೂ ಉತ್ತರದ ಕೀಲಿ (ಆನ್ಸರ್ ಕೀ) ಸೋರಿಕೆ ಮಾಡಿರುವುದಕ್ಕೆ ಸಂಬಂಧಿಸಿದ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.


ಪ್ರಕರಣದ ಆರಂಭಿಕ ತನಿಖೆ ನಡೆಸಿದ್ದ ಅಪರಾಧ ತನಿಖಾ ದಳ (ಸಿಐಡಿ), ಪ್ರಮುಖ ಆರೋಪಿ ಗಂಗ್ವಾರ್ ಅವರನ್ನು ಆಗಸ್ಟ್ ೨೯ರಂದು ಬೆಂಗಳೂರಿನಲ್ಲಿ ಬಂಧಿಸಿತ್ತು. ಮರುದಿನ ದೆಹಲಿಯಲ್ಲಿ ಬಸವರಾಜ್ ಕನ್ನಾಳೆ ಅವರನ್ನು ವಶಕ್ಕೆ ಪಡೆಯಲಾಗಿತ್ತು. ನವೆಂಬರ್ ೨೬ಕ್ಕೆ ಗಂಗ್ವಾರ್ ಬಂಧನವಾಗಿ ೯೦ ದಿನಗಳು ಪೂರ್ಣಗೊಳ್ಳಲಿವೆ. ಪ್ರಸ್ತುತ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಎಡಿಜಿಪಿ ಆರ್. ಹಿತೇಂದ್ರ ನೇತೃತ್ವದಲ್ಲಿ ಎಸ್‌ಐಟಿ ತನಿಖೆ ಮುಂದುವರಿದಿದೆ.


ಒಂದೇ ರೀತಿಯ ಉತ್ತರ:


ಗಂಗ್ವಾರ್ ಮತ್ತು ಕನ್ನಾಳೆ ಹಲವು ಅಭ್ಯರ್ಥಿಗಳಿಗೆ ಉತ್ತರದ ಕೀಲಿ ಸೋರಿಕೆ ಮಾಡಿದ್ದರೆ, ಇನ್ನು ಕೆಲವರಿಗೆ ಪ್ರಶ್ನೆಪತ್ರಿಕೆ ಹಾಗೂ ಉತ್ತರಗಳೆರಡನ್ನೂ ಒದಗಿಸಿದ್ದರು ಎಂಬ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ.


ಆರೋಪಿಗಳಿಂದ ಉತ್ತರದ ಕೀಲಿ ಪಡೆದ ಅಭ್ಯರ್ಥಿಗಳ ಪೈಕಿ ಆರು ಮಂದಿಯ ಒಎಂಆರ್ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿದಾಗ ಅಚ್ಚರಿಯ ಸಂಗತಿ ಪತ್ತೆಯಾಗಿದೆ. ಆರು ಅಭ್ಯರ್ಥಿಗಳು ಒಂದೇ ಪ್ರಶ್ನೆಗಳಿಗೆ ಒಂದೇ ರೀತಿಯ ಸರಿಯಾದ ಉತ್ತರಗಳನ್ನು ನೀಡಿರುವುದಲ್ಲದೆ, ತಪ್ಪು ಉತ್ತರಗಳೂ ಒಂದೇ ಆಗಿವೆ. ಈ ಅಂಶವನ್ನು ಎಸ್‌ಐಟಿ ತನ್ನ ತನಿಖಾ ವರದಿಯಲ್ಲಿ ದಾಖಲಿಸಿದೆ.


ಉತ್ತರದ ಕೀಲಿ ಹಂಚಿಕೆ:


ಇನ್ನೊಂದೆಡೆ, ಅಮಾನತುಗೊಂಡಿರುವ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರು ಸುಮಾರು ೨೦ರಿಂದ ೨೫ ಅಭ್ಯರ್ಥಿಗಳಿಗೆ ಪರೀಕ್ಷಾ ಕೊಠಡಿಯಲ್ಲಿ ಆಸನ ವ್ಯವಸ್ಥೆ ಮಾಡಿಕೊಟ್ಟು, ಅವರಿಗೆ ಅಂದಾಜು ೮೦ ಉತ್ತರಗಳ ಕೀಲಿಯನ್ನು ಹಂಚಿಕೆ ಮಾಡಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ವಿವಿಧ ಅಭ್ಯರ್ಥಿಗಳಿಗೆ ಉತ್ತರಗಳನ್ನು ಬರೆದುಕೊಟ್ಟಿದ್ದ ಕೈಬರಹದ ಚೀಟಿಗಳನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.


ಸೂಚನೆ ನೀಡಿದ್ದ ಆರೋಪ:


ಪರೀಕ್ಷೆಯಲ್ಲಿ ಸಾಮಾನ್ಯ ಅಧ್ಯಯನ ಮತ್ತು ಪಶುವೈದ್ಯಕೀಯ ವಿಜ್ಞಾನ ಎಂಬ ಎರಡು ಪ್ರಶ್ನೆಪತ್ರಿಕೆಗಳಿದ್ದವು. ಪ್ರತಿಯೊಂದು ಪತ್ರಿಕೆಯನ್ನೂ ಎ, ಬಿ, ಸಿ ಮತ್ತು ಡಿ ಎಂಬ ನಾಲ್ಕು ಸರಣಿಗಳಲ್ಲಿ ಸಿದ್ಧಪಡಿಸಲಾಗಿತ್ತು. ಪ್ರತಿ ಪತ್ರಿಕೆಯಲ್ಲಿ ೧೦೦ ಪ್ರಶ್ನೆಗಳಿದ್ದವು. ಆದರೆ ಪ್ರತಿ ಸರಣಿಯಲ್ಲೂ ಪ್ರಶ್ನೆಗಳ ಕ್ರಮ ಬದಲಿಸಲಾಗಿತ್ತು.
ತಮ್ಮ ಅಭ್ಯರ್ಥಿಗಳಿಗೆ ಯಾವ ಸರಣಿಯ ಪ್ರಶ್ನೆಪತ್ರಿಕೆ ದೊರೆಯಲಿದೆ ಎಂಬ ಮಾಹಿತಿ ತಿಳಿದಿದ್ದ ಸಾಹುಕಾರ್, ಅದಕ್ಕೆ ಅನುಗುಣವಾಗಿ ಉತ್ತರಗಳನ್ನು ಬರೆದುಕೊಟ್ಟಿದ್ದರು ಎನ್ನಲಾಗಿದೆ. ಅಭ್ಯರ್ಥಿಗಳು ಉತ್ತರಗಳನ್ನು ೧೦ ಅಂಕಿಗಳ ಗುಂಪುಗಳಾಗಿ ನೆನಪಿಟ್ಟುಕೊಳ್ಳುವಂತೆ ಸೂಚಿಸಲಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.


ಅಲ್ಲದೆ, ಅಭ್ಯರ್ಥಿಗಳು ಅತಿಯಾದ ಅಂಕಗಳನ್ನು ಗಳಿಸಿದರೆ ಅನುಮಾನ ಮೂಡಬಹುದು ಎಂಬ ಕಾರಣಕ್ಕೆ ೮೦ಕ್ಕಿಂತ ಹೆಚ್ಚು ಉತ್ತರಗಳನ್ನು ನೀಡದಂತೆ ಗಂಗ್ವಾರ್ ಮತ್ತು ಇತರರು ಎಚ್ಚರಿಕೆ ವಹಿಸಿದ್ದರು. ಉದ್ದೇಶಪೂರ್ವಕವಾಗಿ ಕೆಲವು ತಪ್ಪು ಉತ್ತರಗಳನ್ನೂ ನೀಡಲಾಗಿತ್ತು ಎಂಬ ಅಂಶ ತನಿಖೆಯಲ್ಲಿ ಬಹಿರಂಗವಾಗಿದೆ.


ಅಭ್ಯರ್ಥಿಗಳ ಸಂಬಂಧ:


ಗಂಗ್ವಾರ್ ಮತ್ತು ಕನ್ನಾಳೆ ಅವರ ಅಭ್ಯರ್ಥಿಗಳ ಗುಂಪಿಗೂ, ಸಾಹುಕಾರ್ ಮತ್ತು ಗೀತಾ ಅವರ ಅಭ್ಯರ್ಥಿಗಳ ಗುಂಪಿಗೂ ಯಾವುದೇ ಸಂಬಂಧವಿರಲಿಲ್ಲ ಎಂಬುದನ್ನೂ ಎಸ್‌ಐಟಿ ಪತ್ತೆಹಚ್ಚಿದೆ.


ಗಂಗ್ವಾರ್ ಮತ್ತು ಕನ್ನಾಳೆ ತಮ್ಮದೇ ಆದ ಅಭ್ಯರ್ಥಿಗಳ ಪಟ್ಟಿಯನ್ನು ಹೊಂದಿದ್ದರೆ, ಸಾಹುಕಾರ್ ಮತ್ತು ಗೀತಾ ಪ್ರತ್ಯೇಕ ಅಭ್ಯರ್ಥಿಗಳನ್ನು ಹೊಂದಿದ್ದರು ಎನ್ನಲಾಗಿದೆ. ನಾಲ್ವರು ಆರೋಪಿಗಳು ಪರೀಕ್ಷೆಗೆ ಒಂದು ದಿನ ಮುಂಚಿತವಾಗಿ ತಮ್ಮ ತಮ್ಮ ಅಭ್ಯರ್ಥಿಗಳಿಗೆ ಉತ್ತರದ ಕೀಲಿ ತಲುಪುವಂತೆ ವ್ಯವಸ್ಥೆ ಮಾಡಿದ್ದರು. ಆದರೆ, ಯಾವ ಅಭ್ಯರ್ಥಿಗೆ ಯಾವ ಸರಣಿಯ ಪ್ರಶ್ನೆಪತ್ರಿಕೆ ಸಿಗಲಿದೆ ಎಂಬ ಮಾಹಿತಿ ಗಂಗ್ವಾರ್ ಅವರಿಗೆ ಮಾತ್ರ ತಿಳಿದಿತ್ತು ಎಂದು ತನಿಖಾ ಮೂಲಗಳು ತಿಳಿಸಿವೆ. ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿರುವ ಎಸ್‌ಐಟಿ ಆರೋಪಪಟ್ಟಿ ಸಲ್ಲಿಸುವ ಹಂತಕ್ಕೆ ತಲುಪಿದೆ.