Home ಜಿಲ್ಲೆ ಕಲಬುರಗಿ ಪ್ರೇಮಬಂಧ ಬೆಸೆಯುವ ವಚನ ಸಾಹಿತ್ಯ: ದಿವಾಕರ್ ಎಸ್

ಪ್ರೇಮಬಂಧ ಬೆಸೆಯುವ ವಚನ ಸಾಹಿತ್ಯ: ದಿವಾಕರ್ ಎಸ್

ಕಲಬುರಗಿ, ಸೆ.8:ವಚನ ಸಾಹಿತ್ಯ ಯಾವುದೇ ಧರ್ಮ, ಜಾತಿಗೆ ಸೀಮಿತವಲ್ಲ. ವಿಶ್ವದ ಪ್ರತಿಯೊಬ್ಬರನ್ನೂ ಜೋಡಿಸುವ, ಮಾನವೀಯ ನೈತಿಕತೆಯನ್ನು ಜಗತ್ತಿಗೆ ಸಾರಿದ ಸಾಹಿತ್ಯ ಎಂದು ನಿವೃತ್ತ ಅಪರ ನಿರ್ದೇಶಕ ದಿವಾಕರ್ ಅವರು ಹೇಳಿದರು. ಅವರು ಶನಿವಾರ ಕಲಬುರಗಿಯ ಅಡ್ವೊಕೇಟ್ಸ್ ಕಾಲನಿಯ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಪ್ತಾಹಿಕ ಸತ್ಸಂಗ ಕಾರ್ಯಕ್ರಮದಲ್ಲಿ ಜೀವನ ಸುಗಮವಾಗುವಲ್ಲಿ ವಚನ ಸಾಹಿತ್ಯದ ಪಾತ್ರ ಈ ಕುರಿತು ಮಾತನಾಡುತ್ತಿದ್ದರು.
ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ ದಿವಾಕರ್ ಅವರು, ವಚನ ಸಾಹಿತ್ಯದ ಶಕ್ತಿ, ಸಮಾಜದಲ್ಲಿ ವ್ಯಕ್ತಿಯ ಜವಾಬ್ದಾರಿ ಹಾಗೂ ಜೀವನದ ನೈಜ ಅರ್ಥದ ಕುರಿತು ಅತ್ಯಂತ ಅರ್ಥಗರ್ಭಿತವಾದ ವಿಚಾರಗಳನ್ನು ಮಂಡಿಸಿದರು.
ಕಾಡ್ಗಿಚ್ಚನ್ನು ಆರಿಸಲು ತನ್ನ ಸಣ್ಣ ಕೊಕ್ಕಿನಲ್ಲಿ ನೀರು ತಂದು ಹಾಕಿದ ಗಿಳಿಯ ಕಥೆಯನ್ನು ಉದಾಹರಿಸಿದ ಅವರು, ಕೇವಲ ಫಲಿತಾಂಶದ ಬಗ್ಗೆ ಚಿಂತಿಸದೆ, ಸಮಾಜದ ಒಳಿತಿಗಾಗಿ ನಮ್ಮ ಕೈಲಾದ ಪ್ರಾಮಾಣಿಕ ಸೇವೆಯನ್ನು (ಅಳಿಲು ಸೇವೆ) ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಕರೆ ನೀಡಿದರು.
ಕಾರ್ಲ್ ಮಾಕ್ರ್ಸ್ ಆರ್ಥಿಕ ನೈತಿಕತೆಯನ್ನು, ರಾಮಮನೋಹರ ಲೋಹಿಯಾ ರಾಜಕೀಯ ನೈತಿಕತೆಯನ್ನು ಮತ್ತು ಮಹಾತ್ಮ ಗಾಂಧಿಯವರು ವೈಯಕ್ತಿಕ ನೈತಿಕತೆಯನ್ನು ಪ್ರತಿಪಾದಿಸಿದರು.ಆದರೆ, 12ನೇ ಶತಮಾನದಲ್ಲಿಯೇ ಬಸವಣ್ಣನವರ ವಚನ ಸಾಹಿತ್ಯವು ಇವೆಲ್ಲವನ್ನೂ ಮೀರಿದ ಅತ್ಯುನ್ನತ ‘ಮಾನವೀಯ ನೈತಿಕತೆ’ಯನ್ನು ಜಗತ್ತಿಗೆ ಸಾರಿದೆ ಎಂದು ಅವರು ವಿಶ್ಲೇಷಿಸಿದರು.
ಅಂದಿನ ಅಮಾನವೀಯ ಜಾತಿ ಪದ್ಧತಿಗೆ ಬಲಿಯಾಗಿ ತೀವ್ರ ಹಲ್ಲೆಗೊಳಗಾಗಿದ್ದ ಕಂಬಳಿ ನಾಗಿದೇವ ಎಂಬ ದಲಿತ ಶರಣನನ್ನು ರಕ್ಷಿಸಿ, ತಮ್ಮ ಸರಿಸಮಾನವಾಗಿ ಕೂರಿಸಿಕೊಂಡ ಬಸವಣ್ಣನವರ ನಡೆ ಇತಿಹಾಸದಲ್ಲೇ ಅಪೂರ್ವ. ವಚನ ಧರ್ಮವು ಯಾವುದೇ ಒಂದು ಜಾತಿಗೆ ಸೀಮಿತವಾಗಿರದೆ, ಅದು ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬುದನ್ನು ಅವರು ಒತ್ತಿ ಹೇಳಿದರು.
ಪ್ರಾಣಿಗಳು ಮತ್ತು ಪ್ರಕೃತಿಯ ದೃಷ್ಟಾಂತಗಳ ಮೂಲಕ ಜೀವನದ ನೈಜ ಅರ್ಥವನ್ನು ವಿವರಿಸಿದ ಅವರು, ದಾರಿಯಲ್ಲಿ ಎದುರಾಗುವ ಮುಳ್ಳು-ಕಂಟಿಗಳು, ಗುಡ್ಡ-ಬೆಟ್ಟಗಳೆಂಬ ಅಡೆತಡೆಗಳನ್ನು ಲೆಕ್ಕಿಸದೆ ನಿರಂತರವಾಗಿ ಸಾಗುವ ‘ನದಿ’ಯೇ ಮನುಷ್ಯನ ಬದುಕಿಗೆ ಆದರ್ಶವಾಗಬೇಕು. ಸಣ್ಣಪುಟ್ಟ ಕಷ್ಟಗಳಿಗೆ ಕುಗ್ಗದೆ ಮುನ್ನಡೆಯಬೇಕು ಎಂದು ಪ್ರೇರೇಪಿಸಿದರು.”ಶರಾಬ್ ರಾತ್ ಕೋ ಪಿಯೇ ತೋ ಸುಬಹ್ ಉತರ್ ಜಾಯೇಗಾ, ಮಗರ್ ಸತ್ಸಂಗ್ ಕಾ ತತ್ವಾಮೃತ್ ಪಿಯೋ ತೋ ಜಿಂದಗಿ ಗುಜರ್ ಜಾಯೇಗಾ” ಎಂಬ ಮಾರ್ಮಿಕ ಸಾಲುಗಳ ಮೂಲಕ, ಸತ್ಸಂಗ ಮತ್ತು ಉತ್ತಮ ವಿಚಾರಗಳ ಮೈಗೂಡುವಿಕೆಯಿಂದ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಆರಂಭದಲ್ಲಿ ಟ್ರಸ್ಟ್ ಗೌರವಾಧ್ಯಕ್ಷ ಜಿ ಎಸ್ ಬಿರಾದಾರ ಅವರು ಸ್ವಾಗತಿಸಿದರು. ಸೋಮಶೇಖರ ರುಳಿ ಅವರು ಅತಿಥಿಗಳ ಪರಿಚಯ ಮಾಡಿಕೊಟ್ಟರು.ಟ್ರಸ್ಟ್‍ನ ಅಧ್ಯಕ್ಷ ಮಂಜುನಾಥ್ ಜೇವರಗಿ ಅವರು ವಂದಿಸಿದರು. ಗುರುಮೂರ್ತಿ ಚತುರಾಚಾರಿಮಠ ಅವರು ನಿರ್ವಹಿಸಿದರು.ಕಾರ್ಯಕ್ರಮದಲ್ಲಿ ವೆಂಕಟೇಶ್ ಮುದ್ಗಲ್, ಅಶೋಕ ಕುಮಾರ್ ಜೇವರ್ಗಿ, ವಿಜಯಕುಮಾರ್ ಬಿರಾದಾರ , ಎಸ್ ಜಿ ಪಾಟೀಲ ಓಕಳಿ, ಸಜ್ಜನಶೆಟ್ಟಿ , ಜಗದೇವಪ್ಪ ಭೂಸಾರೆ, ನರಸಿಂಹ ಮಾನಕರ, ಭೀಮಾಶಂಕರ ಇಂಗಳೇಶ್ವರ, ಸಿದ್ದು ಜಂಗಲೆ , ಶ್ರೀಶೈಲ ಪೂಜಾರಿ, ಮಹದೇವಪ್ಪ, ಮಹಿಳಾ ಸಂಘದ ಸದಸ್ಯೆಯರು, ಕಾಲೋನಿಯ ಸದ್ಭಕ್ತರು ಭಾಗವಹಿಸಿದರು.