
ಗ್ರಾಹಕ ನ್ಯಾಯಾಲಯ ಆದೇಶ
ರಾಯಪುರ.ಜು೧೬: ಇ೨೦ (ಇ೨೦) ಎಥನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ವಾಹನದ ಇಂಜಿನ್ ಜಖಂಗೊಂಡಿದೆ ಎಂದು ಸಲ್ಲಿಕೆಯಾಗಿದ್ದ ದೇಶದ ಮೊದಲ ಗ್ರಾಹಕ ನ್ಯಾಯಾಲಯದ ದೂರಿನಲ್ಲಿ ವಾಹನ ಮಾಲೀಕನಿಗೆ ಜಯ ಸಿಕ್ಕಿದೆ. ಇ೨೦ ಇಂಧನ ಬಳಕೆಯಿಂದ ಇಂಜಿನ್ ಕೈಕೊಟ್ಟಿದ್ದಕ್ಕೆ ಪರಿಹಾರ ಮತ್ತು ದುರಸ್ತಿ ವೆಚ್ಚವನ್ನು ಗ್ರಾಹಕನಿಗೆ ನೀಡುವಂತೆ ಛತ್ತೀಸ್‌ಗಢದ ರಾಯಪುರ ಜಿಲ್ಲಾ ಗ್ರಾಹಕ ನ್ಯಾಯಾಲಯವು ವಾಹನ ತಯಾರಿಕಾ ಸಂಸ್ಥೆ ಹಾಗೂ ಡೀಲರ್‌ಗೆ ಮಹತ್ವದ ಆದೇಶ ನೀಡಿದೆ.
ಗ್ರಾಹಕರ ಹಕ್ಕುಗಳು, ವಾಹನ ತಯಾರಕರ ಹೊಣೆಗಾರಿಕೆ ಹಾಗೂ ಇ೨೦ ಇಂಧನದ ಹೊಂದಾಣಿಕೆಯ ಕುರಿತು ದೇಶಾದ್ಯಂತ ಚರ್ಚೆ ಈ ತೀರ್ಪು ಹುಟ್ಟುಹಾಕಿದೆ
ಗ್ರಾಹಕರೊಬ್ಬರು ತಮ್ಮ ವಾಹನಕ್ಕೆ ಇ೨೦ ಪೆಟ್ರೋಲ್ ಹಾಕಿಸಿದ ನಂತರ ಇಂಜಿನ್‌ನಲ್ಲಿ ನಿರಂತರ ತಾಂತ್ರಿಕ ದೋಷಗಳು ಕಾಣಿಸಿಕೊಂಡಿದ್ದವು. ವಾಹನದ ಪಿಕ್-ಅಪ್ ಕುಸಿತ, ಮಿಸ್-ಫೈರಿಂಗ್ ಹಾಗೂ ಮೈಲೇಜ್ ಕೊರತೆಯಂತಹ ಗಂಭೀರ ಸಮಸ್ಯೆಗಳು ಎದುರಾಗಿದ್ದವು. ಅಧಿಕೃತ ಶೋರೂಂಗಳಲ್ಲಿ ಹಲವು ಬಾರಿ ದುರಸ್ತಿ ಮಾಡಿಸಿದರೂ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ, ಬೇಸತ್ತ ಗ್ರಾಹಕರು ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು.
“ನಮ್ಮ ವಾಹನಗಳು ಇ೨೦ ಇಂಧನಕ್ಕೆ ಪೂರಕವಾಗಿವೆ ಇಂಜಿನ್ ದೋಷಕ್ಕೆ ಸಾಮಾನ್ಯ ಸವೆತ ಅಥವಾ ಸರಿಯಾದ ನಿರ್ವಹಣೆ ಇಲ್ಲದಿರುವುದೇ ಕಾರಣ” ಎಂದು ವಾಹನ ತಯಾರಿಕಾ ಸಂಸ್ಥೆ ಮತ್ತು ಡೀಲರ್ ವಾದಿಸಿದ್ದರು. ಆದರೆ, ಅಧಿಕೃತ ವರ್ಕ್‌ಶಾಪ್‌ಗಳಲ್ಲಿ ಪದೇ ಪದೇ ದುರಸ್ತಿ ಮಾಡಿದರೂ ಇಂಜಿನ್ ದೋಷ ಮರುಕಳಿಸಿರುವುದನ್ನು ಗಮನಿಸಿದ ಗ್ರಾಹಕ ಆಯೋಗವು ಕಂಪನಿಯ ವಾದವನ್ನು ತಳ್ಳಿಹಾಕಿತು.
ಪರ್ಯಾಯ ಇಂಧನದ ಕೊರತೆ: ದೇಶದ ಬಹುತೇಕ ಪೆಟ್ರೋಲ್ ಬಂಕ್‌ಗಳಲ್ಲಿ ಇ೨೦ ಇಂಧನವೇ ಪ್ರಮುಖವಾಗಿ ಲಭ್ಯವಿರುತ್ತಿರುವುದರಿಂದ, ಗ್ರಾಹಕರಿಗೆ ಬೇರೆ ಪರ್ಯಾಯ ಆಯ್ಕೆಗಳೇ ಇಲ್ಲದಂತಾಗಿದೆ ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ.
ಗ್ರಾಹಕರ ಅಸಹಾಯಕತೆ: ಮಾರುಕಟ್ಟೆಯಲ್ಲಿ ಬೇರೆ ಇಂಧನ ಸಿಗದಿದ್ದಾಗ ವಾಹನ ಸವಾರರು ಅನಿವಾರ್ಯವಾಗಿ ಇ೨೦ ಇಂಧನವನ್ನೇ ಬಳಸಬೇಕಾಗುತ್ತದೆ. ಇದರಲ್ಲಿ ಗ್ರಾಹಕರ ತಪ್ಪೇನೂ ಇಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.
ನ್ಯಾಯಾಲಯದ ಆದೇಶ: ಗ್ರಾಹಕನಿಗೆ ಉಂಟಾದ ಮಾನಸಿಕ ಕಿರಿಕಿರಿ, ಕಾನೂನು ಹೋರಾಟದ ವೆಚ್ಚ ಹಾಗೂ ಇಂಜಿನ್ ದುರಸ್ತಿಗೆ ತಗುಲಿದ ಸಂಪೂರ್ಣ ಹಣವನ್ನು ವಾಹನ ಸಂಸ್ಥೆ ಮತ್ತು ಡೀಲರ್ ಜಂಟಿಯಾಗಿ ಭರಿಸಬೇಕು. ನಿಗದಿತ ಅವಧಿಯಲ್ಲಿ ಹಣ ಪಾವತಿಸದಿದ್ದರೆ ಬಡ್ಡಿ ನೀಡಬೇಕಾಗುತ್ತದೆ ಎಂದು ರಾಯಪುರ ಗ್ರಾಹಕ ಆಯೋಗವು ಆದೇಶಿಸಿದೆ.
ಕೇಂದ್ರ ಸರ್ಕಾರವು ದೇಶಾದ್ಯಂತ ಎಥನಾಲ್ ಮಿಶ್ರಿತ ಇ೨೦ ಪೆಟ್ರೋಲ್ ಬಳಕೆಯನ್ನು ವ್ಯಾಪಕವಾಗಿ ಜಾರಿಗೆ ತರುತ್ತಿರುವ ಬೆನ್ನಲ್ಲೇ ಈ ತೀರ್ಪು ಹೊರಬಿದ್ದಿದ್ದು, ವಾಹನ ತಯಾರಕರಲ್ಲಿ ತಲ್ಲಣ ಮೂಡಿಸಿದೆ.
































