
ಕಲಬುರಗಿ,ಜು.16-ಮನೆ ಹತ್ತಿರದ ಗಾರ್ಡನ್ ಬಳಿ ರಾತ್ರಿ ವೇಳೆ ವಾಕಿಂಗ್ ಮಾಡುತ್ತಿದ್ದಾಗ ದೊರೆತ 60 ಸಾವಿರ ರೂಪಾಯಿ ಮೌಲ್ಯದ 8 ಗ್ರಾಂ.ಬಂಗಾರದ ಲಾಕೆಟ್‍ನ್ನು ಸಮೀಪದ ಪೊಲೀಸ್ ಠಾಣೆಗೆ ಒಪ್ಪಿಸುವುದರ ಮೂಲಕ ಅಬಕಾರಿ ಇಲಾಖೆ ನಿವೃತ್ತ ನೌಕರರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.
ನಗರದ ಪ್ರಗತಿ ಕಾಲೋನಿ ನಿವಾಸಿಯಾದ ಅಬಕಾರಿ ಇಲಾಖೆ ನಿವೃತ್ತ ನೌಕರ ಮಡಿವಾಳಪ್ಪ ಸಜ್ಜನ್ ಅವರು ಕಾಲೋನಿ ಹತ್ತಿರವಿರುವ ಏಸು ಗಾರ್ಡನ್ ಬಳಿ ಜು.13 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಬಂಗಾರದ ಲಾಕೆಟ್ ಅವರ ಕಣ್ಣಿಗೆ ಬಿದ್ದಿದೆ. ಯಾರೋ ವಾಕಿಂಗ್ ಮಾಡುತ್ತಿದ್ದ ವೇಳೆ ಅವರ ಕೊರಳಿಂದ ಲಾಕೆಟ್ ಕಳಚಿ ಬಿದ್ದಿರಬಹುದು ಎಂದು ಅರಿತು ಅದನ್ನು ಅವರು ಎಂ.ಬಿ.ನಗರ ಪೊಲೀಸ್ ಠಾಣೆಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ವಾಕಿಂಗ್ ಮಾಡುವ ವೇಳೆ ದೊರೆತ ಚಿನ್ನದ ಲಾಕೆಟ್‍ನ್ನು ಪೊಲೀಸ್ ಠಾಣೆಗೆ ಒಪ್ಪಿಸಿರುವ ಮಡಿವಾಳಪ್ಪ ಸಜ್ಜನ್ ಅವರ ಪ್ರಾಮಾಣಿಕತೆಯನ್ನು ಕಾಲೋನಿಯ ನಾಗರಿಕರು ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಶಂಸಿದ್ದಾರೆ.
ಮಟಕಾ:ಇಬ್ಬರ ಬಂಧನ
ನಗರದ ರೈಲ್ವೆ ಸ್ಟೇಷನ್ ಏರಿಯಾದ ಸಿಟಿ ಬಸ್ ನಿಲ್ದಾಣ ಮತ್ತು ನಗದ ಖಿಲಾ ಹತ್ತಿರವಿರುವ ಪೋಸ್ಟ್ ಆಫೀಸ್ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಮಟಕಾ ನಂಬರ್ ಬರೆದುಕೊಳ್ಳುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ರೈಲ್ವೆ ಸ್ಟೇಷನ್ ಏರಿಯಾದ ಸಿಟಿ ಬಸ್ ನಿಲ್ದಾಣದ ಹತ್ತಿರ ಮಟಕಾ ನಂಬರ್ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ಎಎಸ್‍ಐ ತಿಪ್ಪಣ್ಣ, ಸಿಬ್ಬಂದಿಗಳಾದ ಪ್ರಭಾಕರ, ಯಲ್ಲಪ್ಪ ಅವರು ದಾಳಿ ನಡೆಸಿ ಇಂದಿರಾ ನಗರದ ಶರಣಪ್ಪ ಬಾಜನವರ್ (61) ಎಂಬಾತನನ್ನು ಬಂಧಿಸಿ 520 ರೂ.ನಗದು, ಮಟಕಾ ಚೀಟಿ ಜಪ್ತಿ ಮಾಡಿದ್ದಾರೆ.
ನಗರದ ಖಿಲಾ ಹತ್ತಿರವಿರುವ ಪೋಸ್ಟ್ ಆಫೀಸ್ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಮಟಕಾ ನಂಬರ್ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಚೌಕ್ ಪೊಲೀಸ್ ಠಾಣೆ ಎಎಸ್‍ಐ ತಾರಾಸಿಂಗ್, ಸಿಬ್ಬಂದಿಗಳಾದ ಶಿವಾನಂದ, ಗುರುಮೂರ್ತಿ ಮತ್ತು ಸುರೇಶ್ ಅವರು ದಾಳಿ ನಡೆಸಿ ಫಿಲ್ಟರ್‍ಬೆಡ್‍ನ ನತೀನ್ ಜಾಧವ್ (33) ಎಂಬಾತನನ್ನು ಬಂಧಿಸಿ 1130 ರೂ.ನಗದು, ಮಟಕಾ ಚೀಟಿ ಜಪ್ತಿ ಮಾಡಿದ್ದಾರೆ.
ಸ್ಟೇಷನ್ ಬಜಾರ್ ಮತ್ತು ಚೌಕ್ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.





























