Home ಸುದ್ದಿ ರಾಷ್ಟ್ರೀಯ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬೆಂಬಲ ಅಧಿಕೃತ ತೀರ್ಮಾನವಾಗಿಲ್ಲ

ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬೆಂಬಲ ಅಧಿಕೃತ ತೀರ್ಮಾನವಾಗಿಲ್ಲ

ಮುಂಬೈ,ಜು.೧೫: ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್ವಿಂಗಡಣೆ (ಡೆಲಿಮಿಟೇಶನ್) ಮಸೂದೆಗಳನ್ನು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬಣ ಬೆಂಬಲಿಸಲಿದೆ ಎಂಬ ವರದಿಗಳನ್ನು ಸಂಸದೆ ಸುಪ್ರಿಯಾ ಸುಳೆ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಈ ಕುರಿತು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ಕೇವಲ ’ಮೂಲಗಳ’ ಆಧಾರಿತವಾಗಿದ್ದು, ಪಕ್ಷವು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ ಎಂದು ಅವರು ಬುಧವಾರ ಸ್ಪಷ್ಟಪಡಿಸಿದ್ದಾರೆ.


ಹೊಸ ಮಸೂದೆ ಮಂಡನೆಯಾಗುವ ವರೆಗೂ ನಾವು ಯಾವುದೇ ನಿರ್ಧಾರ ಪ್ರಕಟಿಸಲು ಸಾಧ್ಯವಿಲ್ಲ. ಮಹಿಳಾ ಮೀಸಲಾತಿ ಮಸೂದೆಯನ್ನು ನಾವು ಈಗಾಗಲೇ ಪೂರ್ಣ ಬಹುಮತದೊಂದಿಗೆ ಬೆಂಬಲಿಸಿದ್ದೇವೆ. ಆದರೆ, ಕೇವಲ ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ಮಾಡಿದರೆ ಅದು ದಕ್ಷಿಣದ ರಾಜ್ಯಗಳಿಗೆ ಮಾಡುವ ಅನ್ಯಾಯವಾಗುತ್ತದೆ” ಎಂದು ಸುಪ್ರಿಯಾ ಸುಳೆ ಆತಂಕ ವ್ಯಕ್ತಪಡಿಸಿದರು.
ಅಮಿತ್ ಶಾ ಮತ್ತು ಕಿರಣ್ ರಿಜಿಜು ಅವರು ಪ್ರತಿ ರಾಜ್ಯಕ್ಕೂ ೫೦ ಪ್ರತಿಶತ ಸೂತ್ರವನ್ನು ಪ್ರಸ್ತಾಪಿಸಿದ್ದರು ಎಂದು ನೆನಪಿಸಿದ ಅವರು, “ಈ ಹೊಸ ಸೂತ್ರ ಜಾರಿಗೆ ಬಂದರೆ ಮಹಾರಾಷ್ಟ್ರದ ಲೋಕಸಭಾ ಸ್ಥಾನಗಳ ಸಂಖ್ಯೆ ಸದ್ಯ ಇರುವ ೪೮ ರಿಂದ ೭೨ ಕ್ಕೆ ಏರಿಕೆಯಾಗಲಿದೆ. ಆದರೆ, ಈ ವಿಷಯವನ್ನು ನಾವು ಮೊದಲು ’ಇಂಡಿಯಾ’ ಒಕ್ಕೂಟದ ವೇದಿಕೆಯಲ್ಲಿ ವಿವರವಾಗಿ ಚರ್ಚಿಸಲಿದ್ದೇವೆ” ಎಂದರು. ಇದೇ ವೇಳೆ ತಾವು ಯಾವುದೇ ಕಾರಣಕ್ಕೂ ಎನ್‌ಡಿಎ ಒಕ್ಕೂಟವನ್ನು ಸೇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.


ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಎನ್‌ಸಿಪಿ (ಶರದ್ ಪವಾರ್ ಬಣ) ಹಿರಿಯ ನಾಯಕ ಜಯಂತ್ ಪಾಟೀಲ್ ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಅಜಿತ್ ಪವಾರ್ ಬಣದ ಪ್ರಫುಲ್ ಪಟೇಲ್ ಮತ್ತು ಸುನಿಲ್ ತಟ್ಕರೆ ಅವರ ಭೇಟಿಯ ಬೆನ್ನಲ್ಲೇ ಪಾಟೀಲ್ ಮುಖ್ಯಮಂತ್ರಿ ನಿವಾಸಕ್ಕೆ ಆಗಮಿಸಿದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು.
ಈ ಕುರಿತು ಸ್ಪಷ್ಟನೆ ನೀಡಿರುವ ಜಯಂತ್ ಪಾಟೀಲ್, “ನನ್ನ ಇಸ್ಲಾಮ್‌ಪುರ ಕ್ಷೇತ್ರದ ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದೆ. ನಾನು ಕಾಯುವ ಕೋಣೆಯಲ್ಲಿದ್ದಾಗ ಪ್ರಫುಲ್ ಪಟೇಲ್ ಮತ್ತು ಸುನಿಲ್ ತಟ್ಕರೆ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸುತ್ತಿದ್ದರು. ಅವರ ಚರ್ಚೆಯ ವಿಷಯ ಏನೆಂಬುದು ನನಗೆ ತಿಳಿದಿಲ್ಲ. ನಮ್ಮ ನಡುವೆ ಯಾವುದೇ ಜಂಟಿ ಸಭೆ ನಡೆದಿಲ್ಲ ಎಂದು ವರದಿಗಳನ್ನು ತಳ್ಳಿಹಾಕಿದ್ದಾರೆ.