Home ಸಿನೆಮಾ ಬಾಲಿವುಡ್ ಶೆಹ್ನಾಜ್ -ರಾಘವ್ ಡೇಟಿಂಗ್ ವದಂತಿ: ನಟಿಯ ಸ್ಪಷ್ಟನೆ

ಶೆಹ್ನಾಜ್ -ರಾಘವ್ ಡೇಟಿಂಗ್ ವದಂತಿ: ನಟಿಯ ಸ್ಪಷ್ಟನೆ

ಮುಂಬೈ, ಜು. ೧೬- ಪಂಜಾಬ್‌ನ ರಾಣಿ ಎಂದೇ ಖ್ಯಾತರಾಗಿರುವ ನಟಿ ಶೆಹ್ನಾಜ್ ಗಿಲ್, ಪ್ರಸ್ತುತ ತಮ್ಮ ಮುಂಬರುವ ಚಿತ್ರ “ಇಷ್ಕ್‌ನಾಮಾ” ಮತ್ತು ನಟ ರಾಘವ್ ಜುಯಾಲ್ ಜೊತೆಗಿನ ಡೇಟಿಂಗ್ ವದಂತಿಗಳಿಂದಾಗಿ ಸುದ್ಧಿಯಲ್ಲಿದ್ದಾರೆ. ಇತ್ತೀಚೆಗೆ ‘ಇಷ್ಕ್‌ನಾಮಾ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಶೆಹ್ನಾಜ್ ಅದರ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ.


ಇದೇ ವೇಳೆ ನಡೆದ ಸಂದರ್ಶನವೊಂದರಲ್ಲಿ, ಶೆಹ್ನಾಜ್ ಅವರು ರಾಘವ್ ಜುಯಾಲ್ ಜೊತೆಗಿನ ತಮ್ಮ ಸಂಬಂಧದ ವದಂತಿಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.


ರಾಘವ್ ಕೇವಲ ಆಪ್ತ ಸ್ನೇಹಿತ!
ರಾಘವ್ ಜೊತೆಗಿನ ಡೇಟಿಂಗ್ ವದಂತಿಗಳಿಗೆ ಪ್ರತಿಕ್ರಿಯಿಸಿದ ನಟಿ:

“ರಾಘವ್ ನನ್ನ ತುಂಬಾ ಆಪ್ತ ಸ್ನೇಹಿತ. ನನ್ನ ಸ್ನೇಹಿತನ ಹೊಸ ಚಿತ್ರ ಬಿಡುಗಡೆಯಾಗುತ್ತಿದೆ, ದಯವಿಟ್ಟು ಆ ಚಿತ್ರಕ್ಕೆ ಬೆಂಬಲ ನೀಡಿ. ನನ್ನ ಸ್ನೇಹಿತನ ಸಿನಿಮಾ ಯಶಸ್ವಿಯಾಗಬೇಕು,” ಎಂದು ಕೋರಿದ್ದಾರೆ.
ಈ ಪ್ರಣಯದ ವರದಿಗಳ ಬಗ್ಗೆ ರಾಘವ್ ಜುಯಾಲ್ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.


ವೈಯಕ್ತಿಕ ಜೀವನ ಮತ್ತು ನಂಬಿಕೆಯ ಬಗ್ಗೆ ಶೆಹ್ನಾಜ್ ಮಾತು
ತಮ್ಮ ಖಾಸಗಿ ಜೀವನದ ಬಗ್ಗೆ ಚರ್ಚಿಸಿದ ಶೆಹ್ನಾಜ್, ತಮಗೆ ಗೌಪ್ಯತೆಯ ಅಗತ್ಯವಿದೆ ಎಂದು ತಿಳಿಸಿದ್ದಾರೆ:
“ನನಗೆ ಗೌಪ್ಯತೆ ಬೇಕು, ಆದರೆ ಅದು ನನ್ನ ವೈಯಕ್ತಿಕ ಜೀವನದಲ್ಲಿ ಮಾತ್ರ. ನಾನು ಯಾವಾಗಲೂ ನನ್ನ ಖಾಸಗಿ ವಿಷಯಗಳನ್ನು ರಹಸ್ಯವಾಗಿಡಲು ಬಯಸುತ್ತೇನೆ. ಜನರು ಯಾವಾಗಲೂ ತಮಗೆ ಕಾಣಿಸದ ಜಾಗ ಇಣುಕಿ ನೋಡಲು ಯತ್ನಿಸುತ್ತಾರೆ.”


ಜೊತೆಗೆ, ತಮಗೆ ಜನರನ್ನು ಸುಲಭವಾಗಿ ನಂಬಲು ಸಾಧ್ಯವಾಗುವುದಿಲ್ಲ ಎಂಬ ವಿಷಯವನ್ನೂ ಅವರು ಹಂಚಿಕೊಂಡಿದ್ದಾರೆ. “ಜೀವನದಲ್ಲಿ ನಂಬಿಕೆ ಪದೇ ಪದೇ ಮುರಿದಾಗ, ಮತ್ತೆ ಯಾರನ್ನಾದರೂ ನಂಬುವುದು ತುಂಬಾ ಕಷ್ಟವಾಗುತ್ತದೆ,” ಎಂದು ಅವರು ತಮ್ಮ ನಂಬಿಕೆಯ ಸಮಸ್ಯೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.


ವದಂತಿಗಳ ಹಿನ್ನೆಲೆ
೨೦೨೩ ರಲ್ಲಿ “ಕಿಸಿ ಕಾ ಭಾಯಿ ಕಿಸಿ ಕಿ ಜಾನ್ ಚಿತ್ರದ ಚಿತ್ರೀಕರಣದ ಸಮಯದಲ್ಲಿ ರಾಘವ್ ಜುಯಾಲ್ ಮತ್ತು ಶೆಹನಾಜ್ ಗಿಲ್ ಪರಸ್ಪರ ಹತ್ತಿರವಾಗಿದ್ದರು ಎನ್ನಲಾಗಿದೆ. ಅಂದಿನಿಂದಲೇ ಇವರ ಪ್ರಣಯದ ವದಂತಿಗಳು ಹರಡಲು ಪ್ರಾರಂಭಿಸಿದವು. ತದನಂತರ ಇಬ್ಬರೂ ಹಲವು ಪಾರ್ಟಿಗಳು, ಡಿನ್ನರ್‌ಗಳು ಹಾಗೂ ಪ್ರವಾಸಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ಈ ವದಂತಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ನೀಡಿತು.
ಆದಾಗ್ಯೂ, ರಾಘವ್ ಅಥವಾ ಶೆಹನಾಜ್ ಇಬ್ಬರೂ ತಮ್ಮ ಸಂಬಂಧವನ್ನು ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಅವರು ಯಾವಾಗಲೂ ಪರಸ್ಪರರನ್ನು ‘ಒಳ್ಳೆಯ ಸ್ನೇಹಿತರು’ ಎಂದೇ ಬಣ್ಣಿಸುತ್ತಾ ಬಂದಿದ್ದಾರೆ.