
ನವದೆಹಲಿ.ಜು೧೬: ಅಮೆರಿಕ ಹಾಗೂ ಇರಾನ್ ನಡುವೆ ಹೆಚ್ಚುತ್ತಿರುವ ರಾಜತಾಂತ್ರಿಕ ಸಂಘರ್ಷ ಮತ್ತು ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಗಗನಕ್ಕೇರುತ್ತಿದೆ. ಇದರ ನೇರ ಪರಿಣಾಮವಾಗಿ ಕೇಂದ್ರ ಸರ್ಕಾರವು ದೇಶೀಯ ರಫ್ತುದಾರರಿಗೆ ಶಾಕ್ ನೀಡಿದ್ದು, ಡೀಸೆಲ್ ಮತ್ತು ವಿಮಾನ ಇಂಧನ (ಎಟಿಎಫ್) ಮೇಲಿನ ವಿಂಡ್‌ಫಾಲ್ ತೆರಿಗೆಯನ್ನು (ಆಕಸ್ಮಿಕ ಲಾಭದ ಮೇಲಿನ ಸುಂಕ) ಗಣನೀಯವಾಗಿ ಹೆಚ್ಚಿಸಿದೆ. ಆದರೆ, ಪೆಟ್ರೋಲ್ ಮೇಲಿನ ರಫ್ತು ಸುಂಕವನ್ನು ಇಳಿಸುವ ಮೂಲಕ ತೈಲ ಕಂಪನಿಗಳಿಗೆ ಕೊಂಚ ನಿರಾಳತೆ ನೀಡಿದೆ.
ಕೇಂದ್ರ ಹಣಕಾಸು ಸಚಿವಾಲಯದ ಅಧಿಸೂಚನೆಯನ್ವಯ, ಪರಿಷ್ಕೃತ ನೂತನ ತೆರಿಗೆ ದರಗಳು ಜುಲೈ ೧೬ರಿಂದಲೇ ಜಾರಿಗೆ ಬರಲಿವೆ. ಜಾಗತಿಕ ಮಟ್ಟದಲ್ಲಿ ಇಂಧನ ದರ ಸ್ಥಿರೀಕರಣ ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಇಂಧನ ಕೊರತೆಯಾಗದಂತೆ ತಡೆಯಲು ಪ್ರತಿ ಹದಿನೈದು ದಿನಗಳಿಗೊಮ್ಮೆ ನಡೆಸುವ ಪರಾಮರ್ಶನಾ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಇದುವರೆಗೆ ಪ್ರತಿ ಲೀಟರ್ ಡೀಸೆಲ್ ರಫ್ತಿನ ಮೇಲೆ ೮.೫ ಇದ್ದ ಸುಂಕವನ್ನು ಕೇಂದ್ರ ಸರ್ಕಾರವು ೧೫.೫ ಕ್ಕೆ ಏರಿಕೆ ಮಾಡಿದೆ.ವಾಯುಯಾನ ಸಂಸ್ಥೆಗಳು ಬಳಸುವ ಇಂಧನದ ಮೇಲಿನ ರಫ್ತು ಸುಂಕವನ್ನು ಪ್ರತಿ ಲೀಟರ್‌ಗೆ ೭.೫ ರಿಂದ ೧೪.೫ ಕ್ಕೆ ಹೆಚ್ಚಿಸಲಾಗಿದೆ.
ಪೆಟ್ರೋಲ್ ಮೇಲಿನ ರಫ್ತು ತೆರಿಗೆಯನ್ನು ಪ್ರತಿ ಲೀಟರ್‌ಗೆ ೪ ಇದ್ದದ್ದನ್ನು ೨.೫ ಕ್ಕೆ ಕಡಿತಗೊಳಿಸುವ ಮೂಲಕ ಸಮಾಧಾನಕರ ನಿರ್ಧಾರ ಪ್ರಕಟಿಸಲಾಗಿದೆ.
ಮಧ್ಯಪ್ರಾಚ್ಯದ ಪ್ರಮುಖ ಜಲಮಾರ್ಗವಾದ ಸ್ಟ್ರೇಟ್ ಆಫ್ ಹಾರ್ಮುಜ್ ಭಾಗದಲ್ಲಿ ಇರಾನ್ ಬಂದರುಗಳ ಮೇಲೆ ಅಮೆರಿಕ ನೌಕಾ ದಿಗ್ಬಂಧನ ವಿಧಿಸಿರುವುದು ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟುಮಾಡಿದೆ.ಪರಿಣಾಮವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕ್ರೂಡ್ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ ೮೫ ಡಾಲರ್ ಗಡಿ ದಾಟಿದೆ. ಜಾಗತಿಕ ಮಾರುಕಟ್ಟೆಯ ಏರಿಳಿತದ ಲಾಭ ಪಡೆದು ದೇಶೀಯ ತೈಲ ಶುದ್ಧೀಕರಣ ಸಂಸ್ಥೆಗಳು ವಿದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಇಂಧನ ರಫ್ತು ಮಾಡುವುದನ್ನು ನಿಯಂತ್ರಿಸಲು ಕೇಂದ್ರ ಈ ಕ್ರಮಕ್ಕೆ ಮುಂದಾಗಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.
ಜಾಗತಿಕ ತೈಲ ಮಾರುಕಟ್ಟೆಯ ಏರಿಳಿತ ಮತ್ತು ಇಂಧನ ಬಿಕ್ಕಟ್ಟಿನ ಕುರಿತು ಹೆಚ್ಚಿನ ದೃಶ್ಯಾವಳಿಗಳನ್ನು ತಿಳಿಯಲು, ವಿಂಡ್‌ಫಾಲ್ ತೆರಿಗೆ ಏರಿಕೆಯ ವೀಡಿಯೊ ವೀಕ್ಷಿಸಬಹುದಾಗಿದೆ. ಈ ವೀಡಿಯೊದಲ್ಲಿ ಜಾಗತಿಕ ಇಂಧನ ಬಿಕ್ಕಟ್ಟು ಮತ್ತು ಭಾರತ ಸರ್ಕಾರದ ಇತ್ತೀಚಿನ ರಫ್ತು ನೀತಿಗಳ ಆರ್ಥಿಕ ಪರಿಣಾಮಗಳ ಕುರಿತು ಸಮಗ್ರ ವಿಶ್ಲೇಷಣೆ ನೀಡಲಾಗಿದೆ.
































