Home ಜಿಲ್ಲೆ ಕಲಬುರಗಿ ಬಸ್ ನಿಲ್ದಾಣದಲ್ಲಿ ಚಿನ್ನಾಭರಣ ಕಳವು: ಮೂವರ ಬಂಧನ

ಬಸ್ ನಿಲ್ದಾಣದಲ್ಲಿ ಚಿನ್ನಾಭರಣ ಕಳವು: ಮೂವರ ಬಂಧನ

ಕಲಬುರಗಿ,ಜು.16-ಅಫಜಲಪುರ ತಾಲ್ಲೂಕಿನ ದೇವಲಗಾಣಗಾಪುರ ಬಸ್ ನಿಲ್ದಾಣದಲ್ಲಿ ನಡೆದ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿ 40 ಗ್ರಾಂ.ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಎಸ್‍ಪಿ ಅಡ್ಡೂರು ಶ್ರೀನಿವಾಸಲು ತಿಳಿಸಿದರು.
ಸೊಲ್ಲಾಪುರದ ಜೋಪಡಪಟ್ಟಿಯ ಭಗತ್ ಸಿಂಗ್ ಅಶೋಕ ಸಾಳುಂಕೆ, ಬಾದಲ್ ಅಶೋಕ ಸಾಳುಂಕೆ, ಅಭಿಮನ್ಯು ಅರ್ಜುನ ಎಂಬುವವನ್ನು ಬಂಧಿಸಿ 40 ಗ್ರಾಂ.ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ದೇವಲಗಾಣಗಾಪುರ ಬಸ್ ನಿಲ್ದಾಣದಲ್ಲಿ ಅಶ್ವಿನಿ ಮಲ್ಲಿಕಾರ್ಜುನ ಬಿರಾದಾರ ಅವರ ತಾಳಿಸರ ಮತ್ತು ಕಲಾವತಿ ಶ್ರೀಮಂತ ಜಾಧವ್ ಎಂಬುವವರ ಬಂಗಾರದ ಆಭರಣ ಕಳವಾದ ಬಗ್ಗೆ ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಗಳ ಆರೋಪಿಗಳ ಪತ್ತೆಗೆ ಆಳಂದ ಡಿಎಸ್‍ಪಿ ತಮ್ಮರಾಯ ಪಾಟೀಲ, ಅಫಜಲಪುರ ಸಿಪಿಐ ಲಖನ್ ಮಸಗುತ್ತಿ, ದೇವಲಗಾಣಗಾಪುರ ಪೊಲೀಸ್ ಠಾಣೆ ಪಿಎಸ್‍ಐ ಸಂಗೀತಾ ಶಿಂಧೆ ಮತ್ತು ಸಿಬ್ಬಂದಿಗಳನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಚಿನ್ನಾಭರಣ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಚಿನ್ನಾಭರಣ ಕಳ್ಳರ ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡದ ಕಾರ್ಯವನ್ನು ಅವರು ಶ್ಲಾಘಿಸಿದರು.